Advertisement

ಕುಡಿವ ನೀರಿಗೆ ಹಳ್ಳಿಗಳಲ್ಲಿ ಹಾಹಾಕಾರ

09:47 AM May 06, 2019 | Naveen |

ಆಳಂದ: ವಿಪರೀತ ಬೇಸಿಗೆ ಬಿಸಿಲಿಗೆ ಬೆಂದು ಹೋಗಿರುವ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ದಿನ ಕಳೆದಂತೆ ನೀರಿನ ಮೂಲಗಳೇ ಬತ್ತಿ, ಅಂತರ್ಜಲ ಕುಸಿಯುತ್ತಿರುವುದರಿಂದ ತಾಲೂಕಿನಾದ್ಯಂತ ಬಹುತೇಕ ಹಳ್ಳಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

Advertisement

ಅನೇಕ ಹಳ್ಳಿಗಳಲ್ಲಿನ ನೀರು ಪೂರೈಕೆ ಮೂಲವಾದ ಕೊಳವೆ ಬಾವಿ, ತೆರೆದ ಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದರಿಂದ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ. ಕೆಲವೆಡೆ ಬಾವಿ, ಕೊಳವೆ ಬಾವಿಗಳಲ್ಲಿ ಅಳಿದುಳಿದ ನೀರು ಸರಬರಾಜು ಕೈಗೊಂಡರೂ ಸಮರ್ಪಕವಾಗಿ ನೀರಿನ ದಾಹ ಇಂಗುತ್ತಿಲ್ಲ.

ಟಾಸ್ಕಪೋರ್ಸ್‌ ಸಮಿತಿ ಅಧ್ಯಕ್ಷರೂ ಆದ ಶಾಸಕರು, ಸಮಸ್ಯೆ ನಿವಾರಣೆಗೆ ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳಬೇಕಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ನಿಂಬರಗಾ ವಲಯದ ಮಾಡಿಯಾಳ, ಹಿತ್ತಲಶಿರೂರ, ಕುಡಕಿ, ನಿಂಬರಗಾ ಹೊಸಬಡಾವಣೆ, ಬೊಮ್ಮನಳ್ಳಿ, ನಿಂಬರಗಾ ತಾಂಡಾ, ಸುಂಟನೂರ, ಕಡಗಂಚಿ ಗ್ರಾಮದ ಬಸ್‌ ನಿಲ್ದಾಣ ಸುತ್ತಲಿನ ಮೂರು ಲೇಔಟ್ ಪ್ರದೇಶದಲ್ಲಿ ನೀರಿನ ಕೊರತೆ ಇದೆ. ಧರ್ಮವಾಡಿ, ಆಲೂರ, ಬಟ್ಟರಗಾ, ಮಾಡಿಯಾಳ ತಾಂಡಾದಲ್ಲಿ ನೀರಿನ ಸಮಸ್ಯೆ ಎದುರಾಗಿದೆ.

ಜಿಡಗಾ ಗ್ರಾಮದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ತುರ್ತಾಗಿ ಎರಡು ಕೊಳವೆ ಬಾವಿ ತೋಡಿಸುವಂತೆ ಅಲ್ಲಿನ ಶರಣ ಕಾಳಕಿಂಗೆ ಅವರು ಗ್ರಾಮಸ್ಥರ ಪರ ತಾಲೂಕು ಆಡಳಿತಕ್ಕೆ ಕೋರಿದ್ದಾರೆ.

Advertisement

ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ ಅವರ ಕ್ಷೇತ್ರ ತಡಕಲ್ ವ್ಯಾಪ್ತಿಯ ತೆಲಾಕುಣಿ ಗ್ರಾಮಕ್ಕೆ ಆಳಂದ ಕೆ‌ರೆಯಲ್ಲಿ ತೋಡಿದ ತೆರೆದ ಬಾವಿ ಮೂಲಕ ಸಮರ್ಪಕ ನೀರು ಸರಬರಾಜು ಕೈಗೊಳ್ಳಲಾಗುತ್ತಿದೆ. ಆದರೆ ಪದೇ ಪದೇ ನೀರಿನ ಪೈಪಲೈನ್‌ ಒಡೆದು ನೀರು ಸೋರಿಕೆಯಾದರೂ ದುರಸ್ತಿ ಕೈಗೊಳ್ಳದೆ ಸಾಕಷ್ಟು ಪ್ರಮಾಣದ ನೀರು ಪೋಲಾಗುತ್ತಿದೆ. ಆದರೂ ಸಹಿತ ನೀರಿನ ಸಮಸ್ಯೆ ನಿವಾರಣೆಗೆ ತೆಲಾಕುಣಿ ರಾಮಮಂದಿರ ಹತ್ತಿರ ಕೊಳವೆ ಬಾವಿ ತೋಡುವಂತೆ ಜನ ಕೇಳುತ್ತಿರುವುದು ವಿಪರ್ಯಾಸವಾಗಿದೆ.

ಉಮರಗಾ ಹೆದ್ದಾರಿ ಮಾರ್ಗದಿಂದಲೇ ನೀರಿನ ಪೈಪಲೈನ್‌ ಸಾಗಿರುವುದು ನೀರು ಸೋರಿಕೆಯಾಗಿ ನೆರೆ ಹೊರೆಯ ಹೊಲಗಳಲ್ಲಿ ನೀರು ಹರಿದು ಹೋಗುತ್ತಿದೆ. ಪೋಲಾಗುತ್ತಿರುವ ನೀರು ತಡೆಯಲು ಮೂರ್‍ನಾಲ್ಕು ವರ್ಷಗಳಿಂದಲೂ ಸಾಕಷ್ಟು ಬಾರಿ ದುರಸ್ತಿ, ಖರ್ಚು ಹಾಕಿದ್ದಾರೆ. ಆದರೂ ಇಂದಿಗೂ ಸಮಪರ್ಕ ದುರಸ್ತಿ ಆಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಗ್ರಾಪಂಗೆ ಸೂಚಿಸಿ ಮೇಲಾಧಿಕಾರಿಗಳು ಶಾಶ್ವತ ಕ್ರಮ ಕೈಗೊಳ್ಳುವರೇ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಬೇಕಾಗಿರುವ ಸರ್ಕಾರದ ಭ್ರಷ್ಟ ವ್ಯವಸ್ಥೆಯಿಂದ ಪ್ರತಿವರ್ಷ ಈ ದುಸ್ಥಿತಿ ಬರುತ್ತಿದೆ. ನಾವು ಕೃಷಿಗೆ ನೀರು ಬೇಕು ಎಂದು ಮೇ 1ರಂದು ಹೋರಾಟ ಹಮ್ಮಿಕೊಂಡಿದ್ದೇವೆ. ಕೃಷಿಗೆ ನೀರು ಸಿಕ್ಕರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗುತ್ತದೆ. ನೀರಿಗಾಗಿ ಬಂದ ಹಣದಿಂದ ಸಮಸ್ಯೆ ನಿವಾರಿಸಬೇಕಾಗಿತ್ತಾದರೂ, ಸಮರ್ಪಕವಾಗಿ ಖರ್ಚಾಗುತ್ತಿಲ್ಲ. ಇದಕ್ಕೆ ಸರ್ಕಾರದ ಭ್ರಷ್ಟ ಆಡಳಿತವೇ ಹೊಣೆಯಾಗಿದೆ.
• ಮೌಲಾ ಮುಲ್ಲಾ,
ಕಿಸಾನಸಭಾ ಜಿಲ್ಲಾ ಅಧ್ಯಕ್ಷರು

ತಾಲೂಕಿನ 12 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರಿಂದ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ. ಇನ್ನು ನಾಲ್ಕು ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರಿ ಖರೀದಿಸಿ ವಿತರಣೆ ಮಾಡಲಾಗುತ್ತಿದೆ. ಇನ್ನು ಹೆಚ್ಚಿನ ಗ್ರಾಮಗಳಿಗೆ ಟ್ಯಾಂಕರ್‌ ಬೇಡಿಕೆ ಇದೆ. ಏ.30ರಂದು ಸಂಬಂಧಿತ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ವಿಸ್ತೃತ ವರದಿ ಆಧರಿಸಿ ಮಾಹಿತಿ ನೀಡಲಾಗುವುದು.
ಎಂ.ಎನ್‌. ಚೋರಗಸ್ತಿ, ತಹಶೀಲ್ದಾರ್‌

ಸಮಸ್ಯೆ ಇರುವ 43 ಗ್ರಾಮಗಳ ಪೈಕಿ 31 ಗ್ರಾಮಗಳಲ್ಲಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದು, ಟ್ಯಾಂಕರ್‌ ಬೇಡಿಕೆಯ 28 ಹಳ್ಳಿಗಳ ಪೈಕಿ 22 ಹಳ್ಳಿಗಳಲ್ಲಿ ಪೂರೈಕೆ ಮಾಡಲಾಗುತ್ತಿದೆ. ಅಗತ್ಯವಾಗಿರುವ 52 ಟ್ಯಾಂಕರ್‌ ಪೈಕಿ 44 ಟ್ಯಾಂಕರ್‌ ಬಳಸಿ ಪ್ರತಿದಿನ ಬೇಡಿಕೆಯ 159 ಟ್ರಿಪ್‌ ಪೈಕಿ 135 ಟ್ರಿಪ್‌ ನೀರು ಒದಗಿಸಲಾಗುತ್ತಿದೆ. ಖಾಸಗಿ ನೀರು ಖರೀದಿ 17 ಗ್ರಾಮದ ಬೇಡಿಕೆ ಪೈಕಿ 11 ಕಡೆ ಬಾಡಿಗೆ ಆಧಾರದ ಮೇಲೆ ನೀರು ಒದಗಿಸಿದರೆ, ಇನ್ನು 22 ಖಾಸಗಿ ನೀರು ಪಡೆಯುವ ಯೋಜನೆಯಲ್ಲಿ 16 ಕಡೆ ಜಲಮೂಲಗಳಿಂದ ನೀರು ಪಡೆದು ಟ್ಯಾಂಕರ್‌ನಿಂದ ಒದಗಿಸಲಾಗುತ್ತಿದೆ. ಮಾದನಹಿಪ್ಪರಗಾ, ಧುತ್ತರಗಾಂವ, ಚಿಂಚೋಳಿ ಗ್ರಾಮದಲ್ಲಿ ಟ್ಯಾಂಕರ್‌ ಹಾಗೂ ಬಾಡಿಗೆ ಜಲಮೂಲಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಸಮಸ್ಯೆ ನಿವಾರಣೆಗೆ ಅಂದಾಜು 3 ಕೋಟಿ ರೂ. ಬೇಡಿಕೆಯಲ್ಲಿ ಬರೀ 75 ಲಕ್ಷ ರೂ. ಮಾತ್ರ ಬಿಡುಗಡೆಯಾದಂತೆ ಖರ್ಚಾಗಿದೆ. ಅನುದಾನದ ಬಂದಂತೆ ಕಾಮಗಾರಿ ಕೈಗೊಳ್ಳಲಾಗುವುದು.
ಸಂಗಮೇಶ ಬಿರಾದಾರ,
ಗ್ರಾಮೀಣ ನೀರು ಸರಬರಾಜು ಎಇಇ

ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next