ಆಳಂದ: ಕೊರೊನಾ ವೈರಸ್ ಹರಡದಂತೆ ಕ್ರಮ ಕೈಗೊಳ್ಳಲು ಏ.14ರ ವರೆಗೆ ಇದ್ದ ಲಾಕ್ ಡೌನ್ ಮತ್ತೆ ಮುಂದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು. ತಾ.ಪಂ ಕಚೇರಿಯಲ್ಲಿ ಕೊರೊನಾ ಮುಂಜಾಗ್ರತೆ ಹಾಗೂ ಕುಡಿಯುವ ನೀರಿನ ಇತ್ಯರ್ಥಕ್ಕೆ ಕರೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ದೆಹಲಿಯಲ್ಲಿ ಈಚೆಗೆ ನಡೆದ ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿ ಬಂದವರನ್ನು ಹುಡುಕಿ ಅವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೆ ನಿರ್ಲಕ್ಷé ಮಾಡಬಾರದು ಎಂದು ಸೂಚಿಸಿದರು. ಮನೆ, ಬಡಾವಣೆಗಳಿಗೆ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರ ಮೂಲಕ ಹೊರಗಿನಿಂದ ಬಂದವರ ಮಾಹಿತಿ ಆಲಿಸಬೇಕು ಎಂದು ಆರೋಗ್ಯಾಧಿಕಾರಿ ಡಾ| ಜಿ. ಅಭಯಕುಮಾರಗೆ ಸೂಚಿಸಿದರು.
ಲಾಕ್‌ಡೌನ್ ನಡುವೆ ಕೃಷಿ ಉತ್ಪಾದನೆಗಳ ಮಾರಾಟ, ಸಾಗಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈ ಸಂಬಂಧ ಪೊಲೀಸರು ರೈತರ ಆತಂಕ ತೊಲಗಿಸಿ ತರಕಾರಿ ವಾಹನಕ್ಕೆ ಸಂಚರಿಸಲು, ಮಾರಾಟ ಮಾಡಲು ಅನುಕೂಲತೆ ಕಲ್ಪಿಸಬೇಕು. ಅಗತ್ಯ ವಸ್ತುಗಳ ವ್ಯವಹಾರಕ್ಕೆ ಸಾಮಾಜಿಕ ಅಂತರ ಕಾಪಾಡುವಂತೆ ನೋಡಿಕೊಳ್ಳಬೇಕು ಎಂದು ಹಾಜರಿದ್ದ ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಶಿವಾನಂದ ಗಾಣಿಗೇರಗೆ ತಿಳಿಸಿದರು.
ರೈತ ಉತ್ಪನಗಳಿಗೆ ಅಧಿ ಕಾರಿಗಳು ವಿಶೇಷ ಕಾಳಜಿ ವಹಿಸಿ ಮಾರುಕಟ್ಟೆ ಮಾಹಿತಿ ನೀಡಬೇಕು. ರೇಷನ್ ಕಾರ್ಡ್ ಇದ್ದವರು ಹಾಗೂ ಇಲ್ಲದವರಿಗೂ ಸೇರಿ ಎರಡು ತಿಂಗಳ ರೇಷನ್ ಹಂಚಿಕೆಯನ್ನು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. “ಗರಿಬಿ ಕಲ್ಯಾಣ’ ಯೋಜನೆ ಮೂಲಕ ಪ್ರಧಾನಮಂತ್ರಿಗಳು ಜನಹಿತ ಕಾಯಲು ಮುಂದಾಗಿದ್ದಾರೆ. ಅಲ್ಲದೇ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇರುವ ಕಾಮಗಾರಿಯನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಗ್ರಾಮೀಣ ನೀರು ಸರಬರಾಜು ಅಧಿಕಾರಿ ಚಂದ್ರಮೌಳಿ ವರಿಗೆ ಸೂಚಿಸಿದರು. ಜೆಇ ಸಂಗಮೇಶ ಬಿರಾದಾರ, ಜಿ.ಪಂ ಎಇಇ ಮಲ್ಲಿಕಾರ್ಜುನ ಕಾರಬಾರಿ ಮಾಹಿತಿ ನೀಡಿದರು.
ಮುಖ್ಯಾಧಿಕಾರಿ ಬಾಬುರಾವ್ ವಿಭೂತೆ ಅವರು ನಿರಾಶ್ರಿತರಿಗೆ ಸರ್ಕಾರ ಪೂರೈಸಿದ ಊಟ ವಿತರಣೆ ಹಾಗೂ ಕೊಳಚೆ ಪ್ರದೇಶಗಳಿಗೆ 550 ಲೀಟರ್ ನಿತ್ಯ ಹಾಲು, ಪಟ್ಟಣದಲ್ಲಿ ಅಕ್ರಮ ತೆರವು ಹಾಗೂ ಸ್ವಚ್ಛತೆ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ನಾಲ್ಕು ದಿನಕ್ಕೊಮ್ಮೆ ಯಾಕೆ ನೀರು ಪೂರೈಸಲಾಗುತ್ತಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ನಾಗಮ್ಮ ಅಶೋಕ ಗುತ್ತೇದಾರ, ತಹಶೀಲ್ದಾರ್ ದಯಾನಂದ ಪಾಟೀಲ, ಗ್ರೇಡ್-2 ತಹಶೀಲ್ದಾರ್ ಬಿ.ಜಿ. ಕುದರಿ, ತಾ.ಪಂ ಇಒ ಡಾ| ಸಂಜಯ ರೆಡ್ಡಿ, ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ, ತೋಟಗಾರಿಕೆ ಅಧಿಕಾರಿ ಸುರೇಂದ್ರನಾಥ, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಇದ್ದರು.
ಪೊಲೀಸರು ಲಾಕ್ ಡೌನ್ ಸರಿಯಾಗಿ ಪಾಲಿಸಬೇಕು. ಅನ್ಯ ರಾಜ್ಯಗಳಿಂದ ಬಂದವರ ಲೆಕ್ಕವಿಟ್ಟು ಅವರ ತಪಾಸಣೆಗೆ ನಿಗಾವಹಿಲು ಸಂಬಂಧಿತ ಎಲ್ಲ ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳಬೇಕು. ದಿನಸಿ-ತರಕಾರಿ ಹೊರತು ಪಡಿಸಿ ಇನ್ನುಳಿದ ಎಲ್ಲರ ಓಡಾಟಕ್ಕೆ ನಿರ್ಬಂಧ ಹೇರಬೇಕು.
ಸುಭಾಷ ಗುತ್ತೇದಾರ, ಶಾಸಕ