Advertisement

ರೊಚ್ಚಿಗೆದ್ದ ರೈತರು: ಹೆದ್ಧಾರಿ ತಡೆದು ಪ್ರತಿಭಟನೆ

11:46 AM Oct 04, 2019 | Naveen |

ಆಳಂದ: ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಖಾನೆ ಎದುರು ಹಮ್ಮಿಕೊಂಡಿದ್ದ ಸತ್ಯಾಗ್ರಹಕ್ಕೆ ಮಣಿಯದ ಹಿನ್ನೆಲೆಯಲ್ಲಿ ರೋಚಿಗೆದ್ದ ರೈತ ಮುಖಂಡರು ಗುರುವಾರ ಪಟ್ಟಣದ ಹಳೆ ಚೆಕ್‌ಪೋಸ್ಟ್‌ನ ರಾಜ್ಯ ಹೆದ್ದಾರಿಯನ್ನು ಮೂರುಗಂಟೆ ಕಾಲ ತಡೆದು, ಪ್ರತಿಭಟನೆ ನಡೆಸಿ ಆಡಳಿತಕ್ಕೆ ಬಿಸಿ ಮುಟ್ಟಿಸಿದರು.

Advertisement

ಕೆಲವೆಡೆ ಯುವ ರೈತರು ಟೈರ್‌ಗೆ ಬೆಂಕಿ ಹಚ್ಚಿ, ಬೊಬ್ಬೆ ಹೊಡೆದು ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೆ ವೇಳೆ ಪ್ರತಿಭಟನಾಕಾರರು ಕಬ್ಬನ್ನು ಹೆದ್ದಾರಿಯಲ್ಲಿ ನೆಟ್ಟು ಅಸಮಾಧಾನ ವ್ಯಕ್ತಪಡಿಸಿದರು.

ಹೆದ್ದಾರಿ ತಡೆಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ತುಳಜಾಪುರ, ಸೊಲ್ಲಾಪುರ, ಮುಂಬೈ, ಪುಣೆ, ಬೆಂಗಳೂರು, ಹೈದ್ರಾಬಾದ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಸಂಚರಿಸಬೇಕಾಗಿದ್ದ ಸಾರಿಗೆ ಸಂಸ್ಥೆ ಬಸ್‌ ಹಾಗೂ ಖಾಸಗಿ ಜೀಪ್‌, ಲಾರಿ ಇನ್ನಿತರ ವಾಹನಗಳನ್ನು ಆಯಾ ಮಾರ್ಗದ ಮೂರ್‍ನಾಲ್ಕು ಕಿ.ಮೀ ದೂರದಲ್ಲೇ ಪೊಲೀಸರು ತಡೆದಿದ್ದರು. ಅಲ್ಲದೇ ಪಟ್ಟಣದಲ್ಲಿದ್ದ ಗುರುವಾರ ಸಂತೆಗೆ ಸ್ಥಳಿಯರು ಇನ್ನಿತರ ಮಾರ್ಗಗಳಿಂದ ತೆರಳಿದರು. ಮಹಿಳೆಯರು, ಮಕ್ಕಳು, ನೌಕರರು ದೂರದ ನಡಿಗೆಗೆ ಹೈರಾಣಾದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಸಮಯ ಕೇಳಿದ್ದಾರೆ. ಕಾಲಾವಕಾಶ ನೀಡಿ, ಪ್ರತಿಭಟನೆ ಕೈಬಿಡಿ ಎಂದು ತಹಶೀಲ್ದಾರ್‌ ಬಸವರಾಜ ಎಂ. ಬೆಣ್ಣೆಶಿರೂರ ಮನವಿ ಮಾಡಿದರು. ಬೇಡಿಕೆ ಈಡೇರುವ ವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಮುಂದಾದಾಗ ಮುಖಂಡ ಮಾರುತಿ ಮಾನ್ಪಡೆ, ಕಲ್ಯಾಣಿ ಜಮಾದಾರ, ಮೈನೋದ್ದೀನ ಜವಳಿ ಮೌಲಾ ಮುಲ್ಲಾ ಸೇರಿದಂತೆ ಹಲವರನ್ನು
ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಪ್ರತಿಭಟನೆಯಲ್ಲಿ ಅಪಾರ ಬೆಂಬಲಿಗರೊಂದಿಗೆ ಪಾಲ್ಗೊಂಡಿದ್ದ ಮಾಜಿ ಶಾಸಕ ಬಿ.ಆರ್‌. ಪಾಟೀಲ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಮುಖಂಡ ರಮೇಶ ಲೋಹಾರ, ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೋರಳ್ಳಿ, ಜಿ.ಪಂ ಸದಸ್ಯ ಸಿದ್ಧರಾಮ ಪ್ಯಾಟಿ, ತಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ ಮಾತನಾಡಿ, ಕಬ್ಬು ಬೆಳೆಗಾರರು ಬಿಲ್‌ ಕೇಳಿದರೆ ಎನ್‌ ಎಸ್‌ಎಲ್‌ ಕಾರ್ಖಾನೆ ಆಡಳಿತ ಮಂಡಳಿ ಗೂಂಡಾಗಿರಿ ಪ್ರದರ್ಶಿಸುತ್ತಿದೆ. ಸತ್ಯಾಗ್ರಹ ಕೈಗೊಂಡ ಬಳಿಕ 138 ರೂ. ಸಬ್ಸಿಡಿ ಹಣ ಪಾವತಿಸಲು ಮುಂದಾಗಿದ್ದಾರೆ. ಇನ್ನು ಕಬ್ಬಿನ ಸಾರಿಗೆ ವೆಚ್ಚದ ಪೂರ್ಣ ಹಣ ಪಾವತಿಸದಿದ್ದರೆ ಪರಿಸ್ಥಿತಿ ನೆಟ್ಟಿಗಿರೋದಿಲ್ಲ ಎಂದು ಗುಡುಗಿದರು.

Advertisement

ಕಾರ್ಖಾನೆ ಮತ್ತು ರೈತರ ನಡುವಿನ ಕಂದಕವನ್ನು ಸಂಬಂಧಿತ ಜಿಲ್ಲಾ ಮತ್ತು ಸಕ್ಕರೆ ಸಚಿವರು ಸಭೆ ಕರೆದು ನಿವಾರಿಸಲು ಮುಂದಾಗಬೇಕು ಎಂದು ಸ್ಥಳದಲ್ಲಿದ್ದ ಶಾಸಕ ಸುಭಾಷ ಗುತ್ತೇದಾರ ಅವರಿಗೆ ಮಾನ್ಪಡೆ ಮತ್ತು ರಮೇಶ ಲೋಹಾರ ಒತ್ತಾಯಿಸಿದರು.

ಈ ವೇಳೆ ಶಾಸಕ ಗುತ್ತೇದಾರ ಮಾತನಾಡಿ, ಕಾರ್ಖಾನೆಗೆ ರೈತರೊಂದಿಗೆ ಮೂರುಬಾರಿ ಭೇಟಿ ನೀಡಿದಾಗಲೂ ನೆರೆಯ ಕಾರ್ಖಾನೆಗಳ ಬೆಲೆ ಕೊಡಲಾಗುವುದು ಎಂದು ಆಡಳಿತ ಮಂಡಳಿ ಉಪಾಧ್ಯಕ್ಷರು ಒಪ್ಪಿದ್ದರು. ಈಗ ಹಠಾತ್‌ ಮಾತು ಬದಲಿಸಿದ್ದಾರೆ.

ಕೊಟ್ಟ ಮಾತನ್ನು ಕಾರ್ಖಾನೆಯವರು ಉಳಿಸಿಕೊಂಡು ರೈತರ ಬೇಡಿಕೆಗೆ ಸ್ಪಂದಿಸಬೇಕು ಎಂದು ಹೇಳಿದರು. ಶಾಸಕರೊಂದಿಗೆ ಹಣಮಂತರಾವ್‌ ಮಲಾಜಿ, ರಾಜಶೇಖರ ಮಲಶೆಟ್ಟಿ ಇನ್ನಿತರ ಮುಖಂಡರು ಆಗಮಿಸಿದ್ದರು. ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಧರ್ಮರಾಜು ಸಾಹು, ಭೀಮಾಶಂಕರ ಮಾಡಿಯಾಳ, ಸುಧಾಮ ಧನ್ನಿ, ದತ್ತಾತ್ರೆಯ ಕುಡಕಿ, ರಾಜಶೇಖರ ಯಂಕಂಚಿ ಭಾಗವಹಿಸಿದ್ದರು. ಡಿವೈಎಸ್‌ಪಿ ಟಿ.ಎನ್‌. ಸುಲ್ಪಿ, ಸಿಪಿಐ ಶಿವಾನಂದ ಗಾಣಿಗೇರ ಮತ್ತು ಸಿಬ್ಬಂದಿ ಪರಿಸ್ಥಿತಿ ತಹಬಂದಿಗೆ ತರುವಲ್ಲಿ ಶ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next