Advertisement

ಆಳಂದ: ಹಿರೋಳಿಯಲ್ಲಿ ನೀರಿಗಾಗಿ ನಿಲ್ಲದ ಹಾಹಾಕಾರ-ದೇಗುಲದ ಬಾವಿಗೆ ನೂಕುನುಗ್ಗಲು

06:20 PM Jul 12, 2023 | Team Udayavani |

ಆಳಂದ: ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಹಿರೋಳಿ ಗ್ರಾಮದಲ್ಲಿ ಕಳೆದೊಂದು ತಿಂಗಳಿಂದ ನೀರು ಪೂರೈಕೆ ಇಲ್ಲದೇ ಹಾಹಾಕಾರ ಸೃಷ್ಟಿಯಾಗಿದೆ. ಹಿರೋಳಿ ಗ್ರಾಮ ಪಂಚಾಯಿತಿಯಿಂದ ನೀರು ಪೂರೈಕೆ ಮಾಡುವ ತೆರೆದ ಬಾವಿ, ಕೊಳವೆ ಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಎರಡ್ಮೂರು ಕೊಡ ನೀರು ಸಿಕ್ಕರೆ ಪುಣ್ಯ.

Advertisement

ಇಷ್ಟು ನೀರು ಇಡೀ ಕುಟುಂಬಕ್ಕೆ ಸಾಲದಿರುವುದರಿಂದ ಹೆಣ್ಮಕ್ಕಳು, ಮಕ್ಕಳು ವೃದ್ಧರಾದಿಯಾಗಿ ನೀರಿಗಾಗಿ ಹೊಲ ಗದ್ದೆಗಳಿಗೆ ಅಲೆಯುವಂತಾಗಿದೆ. ಗ್ರಾಮದಲ್ಲಿ ಸುಮಾರು ಎರಡು ಸಾವಿರ ಮನೆಗಳಿದ್ದು, ಇಲ್ಲಿ ಐದಾರು ಸಾವಿರ ಜನರು ವಾಸವಾಗಿದ್ದಾರೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದ್ದರೂ ಮಳೆ ಬಾರದೇ ಇರುವುದರಿಂದ ಜನ ಜಾನುವಾರುಗಳಿಗೆ ನೀರೊದಗಿಸುವುದು ಆಡಳಿತಕ್ಕೆ ದೊಡ್ಡ ಸವಾಲಾಗಿದೆ. ಮತ್ತೊಂದೆಡೆ ಗ್ರಾಮಸ್ಥರು ಕೆಲ ಖಾಸಗಿ ಬಾವಿ, ಕೊಳವೆ ಬಾವಿಗಳಿಗೆ ಹೋಗಿ ನೀರಿಗಾಗಿ ಬೇಡುವ ಪರಿಸ್ಥಿತಿ ಎದುರಾಗಿದೆ. ಅಲ್ಲಿಯೂ ಕೂಡಾ ನೀರು ಪಾತಾಳಕ್ಕೆ ಕುಸಿದಿದ್ದು, ಕೊಡ ನೀರು ಸಿಕ್ಕರೂ ನಿಟ್ಟುಸಿರು
ಬಿಡುವಂತಾಗಿದೆ.

ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿ ಕೊಡ ಹೊತ್ತು ನೀರು ತರಲು ಮುಂದಾದರೂ ನೀರು ದೊರಕುತ್ತಿಲ್ಲ. ಅನೇಕರು
ದ್ವಿಚಕ್ರ ವಾಹನ, ಸೈಕಲ್‌, ಎತ್ತಿನಗಾಡಿ ಮೂಲಕ ತಮಗೆ ಅನುಕೂಲವಿರುವ ವ್ಯವಸ್ಥೆಯಲ್ಲಿ ದೂರದ ಪ್ರದೇಶಕ್ಕೆ ಹೋಗಿ ನೀರು ತರಲು ಪರದಾಡುತ್ತಿದ್ದಾರೆ.

ತುರ್ತು ಕ್ರಮ ಕೈಗೊಳ್ಳಿ: ಗ್ರಾಪಂನಿಂದ ಸೋಮವಾರ ಎರಡು ಕೊಳವೆ ಬಾವಿ ತೋಡಿದ್ದರಲ್ಲಿ ಒಂದಕ್ಕೆ ನೀರು ಸಮರ್ಪಕವಾಗಿ ದೊರತ್ತಿಲ್ಲ. ಇನ್ನೊಂದು ವಿಫಲವಾಗಿದೆ. ಸದ್ಯ ಟ್ಯಾಂಕರ್‌ ಮೂಲಕವಾದರೂ ಜನರಿಗೆ ಕುಡಿಯುವ ನೀರು ಕೊಡುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಬೇಕೆಂದು ಗ್ರಾಮಸ್ಥ ರಾಜಶೇಖರ ಬಸ್ಥೆ ಹಿರೋಳಿ ಒತ್ತಾಯಿಸಿದ್ದಾರೆ.

ಹಲವೆಡೆ ನೀರಿನ ಸಮಸ್ಯೆ: ಹಿರೋಳಿ ಸೇರಿದಂತೆ ಹಲವೆಡೆ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ವರದಿಗಳು ಕೇಳಿ ಬರುತ್ತಿವೆ. ಆದರೆ ತಾಲೂಕಾಡಳಿತ ಈ ಕುರಿತು ಕ್ರಮ ಕೈಗೊಂಡತ್ತಿಲ್ಲ. ಅಲ್ಲಲ್ಲಿ ನೀರಿಗಾಗಿ ಸ್ಥಳೀಯ ಮಟ್ಟದ ಕಾರ್ಯಾಚರಣೆ ನಡೆದರೂ ಪರಿಸ್ಥಿತಿ ಕೈ ಮೀರಿ ಸಮರ್ಪಕ ನೀರು ದೊರೆಯದೆ ಇರುವುದು ಹಳ್ಳಿಗರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ಶಾಸಕರು ಮತ್ತು ಜಿಲ್ಲಾಡಳಿತ, ತಾಲೂಕಾಡಳಿತ ತುರ್ತು ಕ್ರಮ ಕೈಗೊಳ್ಳಬೇಕಿದೆ.

Advertisement

ನೂರು ಕೊಳವೆ ಬಾವಿಯಲ್ಲೂ ನೀರಿಲ್ಲ
ಹಿರೋಳಿ ಗ್ರಾಮದಲ್ಲಿ ಸುಮಾರು ನೂರು ಕೊಳವೆ ಬಾವಿಗಳನ್ನು ತೋಡಲಾಗಿದ್ದರೂ ಯಾವ ಬಾವಿಯಲ್ಲೂ ಸಮರ್ಪಕವಾಗಿ
ನೀರು ದೊರೆಯುತ್ತಿಲ್ಲ. ಕೆಲವೊಂದು ಸಂಪೂರ್ಣ ಬತ್ತಿ ಹೋಗಿದ್ದರೆ, ಕೆಲವೊಂದಿಷ್ಟು ಎರಡ್ಮೂರು ಮನೆಗಾಗುವಷ್ಟೇ ನೀರು ದೊರೆಯುತ್ತಿದೆ. ಸರ್ಕಾರ ಟ್ಯಾಂಕರ್‌ನಿಂದಾದರೂ ನೀರೊದಗಿಸಬೇಕೆಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ದೇಗುಲದ ಬಾವಿಗೆ ನೂಕುನುಗ್ಗಲು
ಗ್ರಾಮದಲ್ಲಿನ ಬಡಾವಣೆ ಅಂಬಾಬಾಯಿ ದೇವಸ್ಥಾನದಲ್ಲಿ ಕೊಳವೆ ಬಾವಿಯ ಪಂಪ್‌ ಸೆಟ್‌ನಿಂದ ನೆರೆ ಹೊರೆಯವರಿಗೆ ನೀರು
ಕೊಡಲಾಗುತ್ತಿದೆ. ಇಲ್ಲಿಯೂ ನೀರಿಗಾಗಿ ನಾ ಮುಂದೆ ನೀ ಮುಂದು ಎಂದು ಜನರ ನೂಕುನುಗ್ಗಲು ಉಂಟಾಗುತ್ತಿದೆ. ಅಲ್ಲದೆ
ಮತ್ತೂಂದೆಡೆ ಹಿರೋಳಿ ಗ್ರಾಮದ ಗೇಟ್‌ ಬಳಿಯಿರುವ ನೇಕಾರ ಕಾಲೋನಿಯಲ್ಲಿರುವ  ರೈತ ನಿಂಗಪ್ಪ ಉಡಗಿ ಅವರು ತಮ್ಮ
ಹೊಲದಲ್ಲಿನ ಪೇರಲ ಗಿಡಕ್ಕೆ ನೀರು ಕಡಿತ ಮಾಡಿ, ಜನರಿಗೆ ನೀರು ಕೊಡುತ್ತಿದ್ದಾರೆಂದು ಗ್ರಾಮದ ರಾಜಶೇಖರ ಬಸ್ಥೆ ತಿಳಿಸಿದ್ದಾರೆ.

*ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next