ಆಳಂದ: ಅನುಮತಿ ಇಲ್ಲದೆ ಪಟ್ಟಣದಲ್ಲಿ ನಡೆಯುತ್ತಿರುವ ಕೆಲವು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಮೇಲೆ ಶಿಕ್ಷಣ ಇಲಾಖೆ ಹಠಾತ್ ದಾಳಿ ನಡೆಸಿ, ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಚಾಟಿ ಬೀಸಿದೆ.
ಮತ್ತೂಂದೆಡೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳಿದ್ದರೂ ಖಾಸಗಿ ಶಾಲೆಗಳಿಗೆ ಪಾಲಕರು ಹೆಚ್ಚಿನ ಹಣ ನೀಡಿ ದಾಖಲು ಮಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ.
ಇಲಾಖೆ ಅನುಮತಿ ಪಡೆದು ಶಾಲೆ ನಡೆಸುವವರು ದೂರು ನೀಡಿದ ಪರಿಣಾಮ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ ಹಠಾತ್ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅನುಮತಿ ಇಲ್ಲದೆ ನಡೆಯುತ್ತಿರುವ ಶಾಲೆಗಳ ಪಟ್ಟಿ ಗಮನಿಸಿ ಪಾಲಕರು ಬೆಚ್ಚಿ ಬೀಳುವಂತೆ ಮಾಡಿದೆ.
ಶಿಕ್ಷಣ ಇಲಾಖೆ ಅನುಮತಿ ಪಡೆಯದೇ ಕೆಲವು ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಮಾಧ್ಯಮ ಶಾಲೆ ಎಂದು ಹೇಳಿಕೊಂಡು ಪಾಲಕರಿಗೆ ಮೋಸ ಮಾಡಿವೆ. ಪಟ್ಟಣದ ವಿಜನ್ ಇಂಗ್ಲಿಷ್ ಮಾಧ್ಯಮ ಶಾಲೆಗೆ ಯಾವುದೇ ಅನುಮತಿ ನೀಡಿಲ್ಲ. 2019-20ನೇ ಸಾಲಿನಲ್ಲಿ ಈ ಶಾಲೆಯಲ್ಲಿ ಮಕ್ಕಳನ್ನು ದಾಖಲಿಸಿದರೆ ಅದಕ್ಕೆ ಪಾಲಕರೆ ಹೊಣೆಗಾರರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ ತಿಳಿಸಿದ್ದಾರೆ.
ಅನುಮತಿ ಇಲ್ಲದೇ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭಿಸಿ ಪ್ರವೇಶ ಪಡೆಯುತ್ತಿದ್ದಾರೆ ಎಂದು ಕೆಲ ಸಂಸ್ಥೆಗಳು ದೂರು ನೀಡಿದ್ದವು. ಇದರ ಆಧಾರದ ಮೇಲೆ ಪಟ್ಟಣದ ವಾರ್ಡ್ 21ರಲ್ಲಿ ಬಂಗಡೀರ ಪೀರ ಕಾಲೋನಿಯಲ್ಲಿ ವಿಜನ್ ಎನ್ನುವ ಇಂಗ್ಲಿಷ್ ಮಾಧ್ಯಮ ಶಾಲೆ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಅನಧಿಕೃತವಾಗಿ ಶಾಲೆ ಪ್ರಾರಂಭಿಸಿ, ಎಲ್ಕೆಜಿ, 5ನೇ ಮತ್ತು 6ನೇ ತರಗತಿಗಾಗಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವುದು ಗಮನಕ್ಕೆ ಬಂತು. ಈ ಶಾಲೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ದಾಖಲಿಸಬಾರದು. ಶಾಲೆ ವಿರುದ್ಧ ಶಿಸ್ತುಕ್ರಮಕ್ಕಾಗಿ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಲಾಗುವುದು. ಶಿಕ್ಷಣ ಇಲಾಖೆಗೆ ಯಾವುದೇ ಮಾಹಿತಿ ನೀಡದೇ ಪಟ್ಟಣದಲ್ಲಿ ಕೆಲ ಶಾಲೆಗಳು ನಡೆಯುತ್ತಿವೆ. ಆ ಶಾಲೆಗಳ ಮಾಹಿತಿ ಬಂದಿದೆ. ತನಿಖೆ ನಡೆಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಪಟ್ಟಣದ ವಾರ್ಡ್ 21 ಬಂಗಡೀರ ಪೀರ ಕಾಲೋನಿಯಲ್ಲಿ ಅಪೆಕ್ಸ್ ಪಬ್ಲಿಕ್ ಸ್ಕೂಲ್ 1ರಿಂದ 8ನೇ ತರಗತಿ, ಮೌಲಾಅಬ್ದುಲ್ ಕಲಾಂ 6ರಿಂದ 10ನೇ ತರಗತಿ ಸರಕಾರಿ ಶಾಲೆ, ಅಲ್ ಅಮೀನ್ ಉರ್ದು ಶಾಲೆ 1ರಿಂದ 10ನೇ ತರಗತಿ ವರೆಗೆ ನಡೆಯುತ್ತಿವೆ. ಹೊಸ ಶಾಲೆಗೆ ಅನುಮತಿ ನೀಡದಂತೆ ಶಿಕ್ಷಣ ಇಲಾಖೆ ಸಹಾಯಕ ಆಯುಕ್ತರಿಗೆ ದೂರು ನೀಡಲಾಗಿದೆ.
•
ಅಬ್ದುಲ್ ವಹೀದ್ ಜರ್ದಿ
ಪುರಸಭೆ ಸದಸ್ಯ