ಕಲಬುರಗಿ: ಅವಿಭಜಿತ 13 ವಿಧಾನಸಭೆ ಕ್ಷೇತ್ರಗಳ ಪೈಕಿ 12 ವಿಧಾನಸಭೆ ಕ್ಷೇತ್ರಗಳಿಗೆ ಸಚಿವ ಸ್ಥಾನ ಭಾಗ್ಯ ದೊರಕಿದರೆ ಜಿಲ್ಲೆಯ ಆಳಂದ ಕ್ಷೇತ್ರಕ್ಕೆ ಮಾತ್ರ ಸಚಿವ ಸ್ಥಾನದ ಭಾಗ್ಯ ದೊರಕಿಲ್ಲ.
ಜಿಲ್ಲೆಯ ಚಿಂಚೋಳಿ ಹಾಗೂ ಜೇವರ್ಗಿ ಮತಕ್ಷೇತ್ರದಿಂದ ಸ್ಪರ್ಧಿಸಿದವರು ಮುಖ್ಯಮಂತ್ರಿಯಾಗಿದ್ದರು. ಉಳಿದ ವಿಧಾನಸಭೆ ಕ್ಷೇತ್ರಗಳನ್ನು ಪ್ರತಿನಿಧಿಸಿದವರು ಒಮ್ಮೆಯಾದರೂ ಸಚಿವರಾಗಿದ್ದಾರೆ. ಆದರೆ ಆಳಂದ ವಿಧಾನಸಭೆ ಕ್ಷೇತ್ರಗಳಲ್ಲಿ ಇಲ್ಲಿವರೆಗೆ 15 ಶಾಸಕರಾದರೂ ಒಬ್ಬರಿಗೂ ಸಚಿವರಾಗುವ ಯೋಗ ಕೂಡಿ ಬಂದಿಲ್ಲ.
ಚಿಂಚೋಳಿ ಕ್ಷೇತ್ರ ಪ್ರತಿನಿಧಿಸಿದ್ದ ವೀರೇಂದ್ರ ಪಾಟೀಲ ಎರಡು ಸಲ ಮುಖ್ಯಮಂತ್ರಿಯಾದರೆ, ಜೇವರ್ಗಿ ಕ್ಷೇತ್ರದಿಂದ ಸತತ ಎಂಟು ಸಲ ಗೆದ್ದಿದ್ದ ಎನ್. ಧರ್ಮಸಿಂಗ್ ಸಚಿವರಾಗಿ ಕಾರ್ಯನಿರ್ವಹಿಸಿ ಕೊನೆಗೆ ಮುಖ್ಯಮಂತ್ರಿಯಾದರೆ, ಗುರುಮಿಠಕಲ್ ಕ್ಷೇತ್ರದಿಂದ ಸತತ ಎಂಟು ಹಾಗೂ ಚಿತ್ತಾಪುರದಿಂದ ಒಂದು ಸಲ ಸೇರಿ ಒಂಭತ್ತು ಸಲ ಗೆದ್ದಿರುವ ಡಾ|ಮಲ್ಲಿಕಾರ್ಜುನ ಖರ್ಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೆ ಗುರುಮಿಠಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಾಬುರಾವ್ ಚಿಂಚನಸೂರ ಕೂಡಾ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಉಳಿದಂತೆ ಯಾದಗಿರಿ ಕ್ಷೇತ್ರದಿಂದ ವಿಶ್ವನಾಥರೆಡ್ಡಿ ಮುದ್ನಾಳ, ಡಾ|ಎ.ಬಿ ಮಾಲಕರೆಡ್ಡಿ ಸಚಿವರಾದರೆ, ಸುರಪುರದಿಂದ ರಾಜಾ ಮದನಗೋಪಾಲ ನಾಯಕ, ರಾಜುಗೌಡ, ಶಹಾಪುರದಿಂದ ಬಾಪುಗೌಡ ದರ್ಶನಾಪುರ, ಶರಣಬಸಪ್ಪ ದರ್ಶನಾಪುರ, ಚಿತ್ತಾಪುರದಿಂದ ಬಾಬುರಾವ ಚಿಂಚನಸೂರ, ಪ್ರಿಯಾಂಕ್ ಖರ್ಗೆ, ಕಲಬುರಗಿಯಿಂದ ಎಸ್.ಕೆ.ಕಾಂತಾ, ಖಮರುಲ್ ಇಸ್ಲಾಂ, ಅಫಜಲಪುರದಿಂದ ಮಾಲೀಕಯ್ಯ ಗುತ್ತೇದಾರ, ಸೇಡಂದಿಂದ ಡಾ|ಶರಣಪ್ರಕಾಶ ಪಾಟೀಲ, ಚಿಂಚೋಳಿಯಿಂದ ವೈಜನಾಥ ಪಾಟೀಲ, ದೇವಿಂದ್ರಪ್ಪ ಘಾಳೆಪ್ಪ, ಸುನೀಲ ವಲ್ಲಾಪುರೆ ಸಚಿವರಾದರೆ, ಈಗ ಅಸ್ತಿತ್ವದಲ್ಲಿರದ ಕ್ಷೇತ್ರಗಳಾದ ಶಹಾಬಾದ ಮೀಸಲು ಕ್ಷೇತ್ರದಿಂದ ಕೆ.ಬಿ.ಶಾಣಪ್ಪ, ಸಿ.ಗುರುನಾಥ ಹಾಗೂ ಕಮಲಾಪುರ ಮೀಸಲು ಕ್ಷೇತ್ರದಿಂದ ಜಿ.ರಾಮಕೃಷ್ಣ, ರೇವು ನಾಯಕ ಬೆಳಮಗಿ ಸಚಿವರಾಗಿದ್ದಾರೆ.
ಪ್ರಸ್ತುತ ಆಳಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸುಭಾಷ ಗುತ್ತೇದಾರ ನಾಲ್ಕು ಸಲ ಶಾಸಕರಾಗಿದ್ದರೂ ಸಚಿವರಾಗುವ ಅವಕಾಶ ದೊರಕಿಲ್ಲ. ಇನ್ನು ಬಿ.ಆರ್. ಪಾಟೀಲ ಮೂರು ಸಲ ಶಾಸಕರಾದರೂ ಸಚಿವರಾಗಿಲ್ಲ. ಅದೇ ರೀತಿ ಪ್ರಭಾವಶಾಲಿಯಾಗಿದ್ದ ಅಣ್ಣಾರಾವ್ ವೀರಭದ್ರಪ್ಪ ಹಾಗೂ ಡಿ.ಬಿ. ಕಲ್ಮಣಕರ್ ಆಳಂದ ಕ್ಷೇತ್ರದಿಂದ ಶಾಸಕರಾದರೂ ಸಚಿವರಾಗಲಿಲ್ಲ. ಇದರ ನಡುವೆ ಶರಣಬಸಪ್ಪ ಪಾಟೀಲ ಧಂಗಾಪುರ ಎರಡು ಸಲ ಶಾಸಕರಾದರೂ ಸಚಿವರಾಗಲಿಲ್ಲ. ಹೀಗೆ ಕಲಬುರಗಿ ಅವಿಭಜಿತ ಎಲ್ಲ 13 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನು ಪ್ರತಿನಿಧಿಸಿದ್ದ ಶಾಸಕರಿಗೆ ಸಚಿವರಾಗುವ ಭಾಗ್ಯ ದೊರಕಿದರೆ ಆಳಂದ ಕ್ಷೇತ್ರದಲ್ಲಿ ಮಾತ್ರ ಸಚಿವರಾಗುವ ಅವಕಾಶ ಸಿಕ್ಕಿಲ್ಲ.