ಸಿಡ್ನಿ: ಆಸ್ಟ್ರೇಲಿಯದ ದಿಗ್ಗಜ ಕ್ರಿಕೆಟಿಗ ಅಲನ್ ಡೇವಿಡ್ಸನ್ (93) ಶನಿವಾರ ನಿಧನ ಹೊಂದಿದರು.
ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿದ್ದ ಡೇವಿಡ್ಸನ್ 1950-60ರ ದಶಕದ ವಿಶ್ವದರ್ಜೆಯ ಕ್ರಿಕೆಟಿಗನಾಗಿ ಮಿಂಚಿದ್ದರು. 1953ರಲ್ಲಿ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆಗೈದು, 44 ಪಂದ್ಯಗಳಲ್ಲಿ ಆಸೀಸ್ ತಂಡವನ್ನು ಪ್ರತಿನಿಧಿಸಿದ್ದರು.
ಎಡಗೈ ವೇಗಿಯಾಗಿದ್ದ ಅವರು 20.53ರ ಸರಾಸರಿಯಲ್ಲಿ 186 ವಿಕೆಟ್ ಉರುಳಿಸಿದ್ದರು. 1953ರಲ್ಲಿ ಭಾರತದ ವಿರುದ್ಧ 93 ರನ್ನಿಗೆ 7 ವಿಕೆಟ್ ಕೆಡವಿದ್ದು ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಟೆಸ್ಟ್ ಇತಿಹಾಸದ ಪ್ರಪ್ರಥಮ ಟೈ ಪಂದ್ಯದಲ್ಲಿ ಅಲನ್ ಡೇವಿಡ್ಸನ್ ಆಲ್‌ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ವೆಸ್ಟ್ ಇಂಡೀಸ್ ಎದುರಿನ ಈ ರೋಚಕ ಸೆಣೆಸಾಟದಲ್ಲಿ 80 ರನ್ ಬಾರಿಸುವ ಜತೆಗೆ 11 ವಿಕೆಟ್ ಉಡಾಯಿಸಿದ್ದರು. ಕ್ರಿಕೆಟ್ ನ್ಯೂ ಸೌತ್ ವೇಲ್ಸ್‌ನ ಅಧ್ಯಕ್ಷರಾಗಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಡೇವಿಡ್ಸನ್ ಹೆಗ್ಗಳಿಕೆ.
ಇದನ್ನೂ ಓದಿ:ನೌಶೇರಾ ಸೆಕ್ಟರ್‌ನಲ್ಲಿ ನಿಗೂಢ ಸ್ಫೋಟ : ಸೇನಾಧಿಕಾರಿ, ಯೋಧ ಹುತಾತ್ಮ
1979-1984ರ ಅವಧಿಯಲ್ಲಿ ಆಸ್ಟ್ರೇಲಿಯದ ರಾಷ್ಟ್ರೀಯ ಆಯ್ಕೆಗಾರನೂ ಆಗಿದ್ದರು. ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ (ಎಂಬಿಎ), ಆರ್ಡರ್ ಆಫ್ ಆಸ್ಟ್ರೇಲಿಯ (ಎಎಂ), ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದರು.