ಆಲಮೇಲ: ಅವಸಾನದ ಅಂಚಿನಲ್ಲಿರುವ ಪಟ್ಟಣದಿಂದ ಒಂದುವರೆ ಕಿ.ಮೀ. ದೂರದಲ್ಲಿರುವ ಐತಿಹಾಸಿಕ ರಾಮಲಿಂಗ ದೇವಾಸ್ಥಾನ ರಾಮಾಯಣ ಕಾಲದ ಹಿನ್ನೆಲೆ ಹೊಂದಿದೆ. ರಾವಣ ಸೀತೆಯನ್ನು ಅಪಹರಿಸಿ ಲಂಕೆಗೆ ಒಯ್ದ ನಂತರದ ದಿನದಲ್ಲಿ ರಾಮ ಸೀತೆ ಹುಡಕಾಟಕ್ಕೆ ಲಂಕೆ ಕಡೆ ಪ್ರಯಾಣ ಬೆಳಸಿದ್ದ. ಈ ಸಂದರ್ಭದಲ್ಲಿ ಆಲಮೇಲದ ದಕ್ಷಿಣ ದಿಕ್ಕಿನಲ್ಲಿರುವ ಹಳ್ಳದ ಸಮೀಪ ವಿಶ್ರಾಂತಿ ಮಾಡಿದ. ನಂತರ ಪೂಜೆ ಮಾಡಿಕೊಂಡು ಹೋಗುವ ಸಂದರ್ಭದಲ್ಲಿ ಶ್ರೀರಾಮನು ಪಂಚ ಮುಖದ ಲಿಂಗ ಪ್ರತಿಷ್ಠಾಪಿಸಿದ್ದಾನೆ ಎನ್ನಲಾಗಿದೆ.
ಈ ಪಂಚಮುಖದ ಲಿಂಗ ಕೂಡಾ ಕೆಲವೆ ಕಡೆ ಇದೆ ಎಂದು ಹೇಳಲಾಗುತ್ತದೆ. ಆದರೆ ಈ ಸ್ಥಳದಲ್ಲಿ ಸದ್ಯ ದೇವಸ್ಥಾನವಿದ್ದು ಬೃಹದ್ದಾಕಾರದ ಕಲ್ಲಿನ ಕಂಬದ ಗರ್ಭ ಗುಡಿ ಇದೆ. ದೇವಸ್ಥಾನದ ಮೇಲ್ಛಾವಣಿಯ ಒಂದು ಭಾಗ ಬಿದ್ದು ಹೋಗಿದೆ. ದೇವಾ§ನದ ಸುತ್ತ ಮುತ್ತ ಮುಳ್ಳು ಕಂಠಿಗಳು ಬೆಳೆದಿವೆ. ದೇವಸ್ಥಾನದ ಸುತ್ತ ಹೊಲಗಳಿದ್ದು ಅಲ್ಲಿ ಬೆಳೆ ಇರುವುದರಿಂದ ಸಮೀಪ ಹೋಗುವವರೆಗೆ ದೇವಸ್ಥಾನ ಕಾಣವುದಿಲ್ಲ. ಇದು ಸಂಪೂರ್ಣ ಹಾಳಾಗಿ ಹೋಗುವ ಹಂತಕ್ಕೆ ತಲುಪಿದೆ. ನಿಧಿ ಆಸೆಗಾಗಿ ಕಳ್ಳರು ಈ ದೇವಸ್ಥಾನ ಕೆಲ ಭಾಗ ಕೆಡವಿದ್ದಾರೆ. ಇನ್ನೂ ಕೆಡವಲು ಸಂಚು ನಡೆಸಿದ್ದರು. ಇದನ್ನರಿತ ರಾಷ್ಟ್ರೀಯ ಸ್ವಯಂ ಸೇವಕರು ಸುಮಾರು 10 ವರ್ಷದ ಹಿಂದೆ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರಮ ಪಟ್ಟಿದ್ದರು.
ದೇವಸ್ಥಾನದ ದೂರದಲ್ಲಿ ಇದ್ದಂತಹ ವೀರಗಲ್ಲು, ಹಲವಾರು ನೃತ್ಯಕಾರದ ಬಂಡೆ ಕಲ್ಲುಗಳು ದೇವಸ್ಥಾನದ ಎದುರು ಶೇಖರಿಸಿಟ್ಟಿದ್ದಾರೆ.
ಗ್ರಾಮಸ್ಥರು ಶ್ರಾವಣ ಮಾಸದ ಕೊನೆ ಸೋಮವಾರ ಹಾಗೂ ಮಹಾ ಶಿವರಾತ್ರಿ ಉಪವಾಸ ದಿನದಂದು ಈ ರಾಮಲಿಂಗ ದೇವಸ್ಥಾನಕ್ಕೆ ಭೇಟಿ ಕೋಡುತ್ತಾರೆ. ಇದನ್ನು ಬಿಟ್ಟರೆ ಉಳಿದ ಯಾವ ದಿನದವೂ ಈ ಕಡೆ ತಿರುಗಿ ಸಹ ನೋಡುವುದಿಲ್ಲ. ಈ ದೇವಸ್ಥಾನಕ್ಕೆ ಹೋಗಲೂ ಸರಿಯಾದ ರಸ್ತೆ ಇಲ್ಲದುರುವುದು ಇದಕ್ಕೆ ಕಾರಣ. ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಮಲಿಂಗ ದೇವಾಸ್ಥಾನ ಇನ್ನಾದರೂ ಜಿರ್ಣೋದ್ಧಾರ ಆಗುವುದೆ ಎಂಬುದು ಕಾದು ನೋಡಬೇಕು.
– ಅವಧೂತ ಬಂಡಗಾರ