ಆಲಮೇಲ: ಪ್ರತಿ ಮನೆಗಳಲ್ಲಿ ದೇವರ ಪೂಜೆ ಮಾಡಲಾಗುತ್ತದೆ. ಆದರೆ ದೇಶದ ಪೂಜೆ ಮಾಡುವವರು ಸೈನಿಕರು ಮತ್ತು ರಾಷ್ಟ್ರೀಯ ಸ್ವಯಂ ಸೇವಕರು ಮಾತ್ರ ಎಂದು ಸಂಘದ ಪ್ರಚಾರಕ ನರೇಂದ್ರಜಿ ಹೇಳಿದರು.
ಆಲಮೇಲ ಮಂಡಲದ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಹಮ್ಮಿಕೊಂಡಿದ್ದ ಭಾರತ ಮಾತಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಗಳಲ್ಲಿ ಮಾಡುವ ದೇವರ ಪೂಜೆ ಜೊತೆಗೆ ಭಾರತ ಮಾತೆಯ, ದೇಶದ ಸೈನಿಕರ ಪೂಜೆಯು ನಡೆಯಬೇಕು ಎಂದರು.
ಜಗತ್ತಿನಲ್ಲಿ ದೇವರನ್ನು ಕಾಣುವ ದೇಶ ಯಾವುದಾದರು ಇದ್ದರೆ ಅದು ಭಾರತ ಮಾತ್ರ. ನಮ್ಮ ದೇಶ ದೇವರ ನಾಡು. ದೇವರನ್ನು ಕಾಣುವ ಪುಣ್ಯ ಭೂಮಿ ನಮ್ಮದು. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಒಂದು ವರ್ಷಕ್ಕೆ ಒಂದೆ ಬೆಳೆ ಬೆಳೆದರೆ ನಮ್ಮ ದೇಶದಲ್ಲಿ ನೂರಾರು ಬೆಳೆಗಳನ್ನು ಬೆಳೆಯುವ ಪುಣ್ಯ ಭೂಮಿ ನಮ್ಮದಾಗಿದೆ. ಈ ರೀತಿ ಸೌಲಭ್ಯ ಬೇರೆ ಯಾವ ದೇಶದಲ್ಲೂ ಕಾಣುವುದಿಲ್ಲ, ಇದೆ ದೇವ ಲೀಲೆ. ಜಗತ್ತಿನ ಎಲ್ಲ ದೇಶಗಳು ಆಯಾ ದೇಶದ ರಾಜ್ಯರ ಮತ್ತ ಸೈನ್ಯದ ಆಧಾರದ ಮೇಲೆ ದೇಶ ನಿರ್ಮಾಣಗೊಂಡಿದೆ. ಭಾರತ ಜಗತ್ತಿಗೆ ಕಲ್ಯಾಣ ಮಾಡುವ ಉದ್ದೇಶ ಹೊಂದಿದ ಋಷಿಮುನಿಗಳ ಸಂಕಲ್ಪದಿಂದ ಈ ದೇಶ ನಿರ್ಮಾಣವಾಗಿದೆ ಎಂದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಪರಿಸರ ಹಾನಿಯಾಗುತ್ತಿದ್ದು ಇದರಿಂದ ಅನೇಕ ತೊಂದರೆಗಳಿಗೆ ಬಲಿಯಾಗುತ್ತಿದ್ದೇವೆ. ಅದನ್ನು ತಡೆಗಟ್ಟಲು ಪರಿಸರ ಸಂರಕ್ಷಣೆ ಮಾಡಿ ಹಾಗೆ ದೇಶ ಅಭಿವೃದ್ಧಿಗಾಗಿ ಜಗತ್ತಿನಲ್ಲಿಯೆ ಬಲಿಷ್ಠ ರಾಷ್ಟ್ರವಾಗಬೇಕು. ನಮ್ಮಲ್ಲಿರುವ ಗೊಂದಲದಿಂದ ಅದನ್ನು ನಾವೇ ಸರಿಪಡಿಸಿಕೊಂಡು ಹೋಗೋಣ. ಮುಂಬರುವ ದಿನಗಳಲ್ಲಿ ನಾವು ನಮ್ಮ ದೇಶ ಬಲಿಷ್ಠವಾಗಬೇಕು ಎಂದರೆ ನಮ್ಮದ ದೇಶದ ವಸ್ತುಗಳನ್ನೇ ಖರೀದಿಸುವ ಮೂಲಕ ದೇಶಾಭಿಮಾನ ಬೆಳೆಸಿಕೊಳ್ಳಿ ಎಂದು ಹೇಳಿದರು.
ನಿವೃತ್ತ ಶಿಕ್ಷಕ ತುಕಾರಾಂ ಸಾಳುಂಕೆ ಮಾತನಾಡಿ, ಹಿಂದೂ ದೇಶದ ಸಂಸ್ಕೃತಿ, ಸಂಸ್ಕಾರ ಪದ್ಧತಿಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುವರು ಆರೆಸ್ಸೆಸ್ ಕಾರ್ಯಕರ್ತರು. ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯಿಂದಲೆ ಶಿಸ್ತು, ಸಂಸ್ಕಾರ, ದೇಶಾಭಿಮಾನ ಬೆಳೆಯುತ್ತಿದೆ. ಈ ದೇಶದ ಪ್ರತಿಯೊಬ್ಬರು ಆರೆಸ್ಸೆಸ್ ಶಾಖೆಗೆ ಹೋಗಿ ದೇಶ ಪ್ರೇಮ ಬೆಳೆಸಿಕೊಳ್ಳಿ ಎಂದರು.
ಅಶೋಕ ಅಲ್ಲಾಪುರ, ಶ್ರೀಮಂತ ದುದ್ದಗಿ, ಮಲ್ಲಿಕಾರ್ಜುನ ರಾಂಪುರಮಠ, ಶಿವಾನಂದ ಮಾರ್ಸನಳ್ಳಿ, ಸಿದ್ದರಾಮ ಕೇರಿ, ಅಜಯಕುಮಾರ ಬಂಟನೂರ, ವಿಶ್ವನಾಥ ಹಿರೇಮಠ, ಸಿದ್ದಪ್ಪ ಉಪ್ಪಿನ, ಕೃಷ್ಣಾಜಿ ಇನಾಮದಾರ, ಬಸವರಾಜ ಹೂಗಾರ, ಗುರಪಾದ ಬಾಸಗಿ, ಅನ್ನಪೂರ್ಣ ಪುರಾಣಿ, ಮಂಗಲಾ ಗುಡಿ, ಸವಿತಾ ಅಮಲಜರಿ, ಸಾವಿತ್ರಿ ಹಿಕ್ಕಣಗುತ್ತಿ ಇದ್ದರು.