Advertisement

ನಿಷೇಧಿಸಿದ್ದರೂ ನಡೆದ ರವಿವಾರದ ಸಂತೆ

04:40 PM Mar 16, 2020 | Naveen |

ಆಲಮಟ್ಟಿ: ಸರ್ಕಾರ ಸಂತೆಯನ್ನು ನಿಷೇಧಿಸಿದರೂ ಕೂಡ ಇಲ್ಲಿನ ರವಿವಾರದ ಸಂತೆ ಪ್ರತಿ ವಾರದಂತೆ ಈ ವಾರವೂ ಕೂಡ ಜನರು ಆಗಮಿಸಿ ಖರೀದಿ ಮಾಡಿದರು.

Advertisement

ಜಗತ್ತಿನಲ್ಲೆಡೆ ಕೊರೊನಾ ವೈರಸ್‌ ಹಾವಳಿ ಪರಿಣಾಮ ರಾಜ್ಯ ಸರ್ಕಾರ ಏಳು ದಿನಗಳ ಕಾಲ ಬಂದ್‌ ಆದೇಶ ಮಾಡಿದ ಹಿನ್ನೆಲೆಯಲ್ಲಿ ಎರಡನೇ ದಿನವಾದ ರವಿವಾರ ಜರುಗುವ ಆಲಮಟ್ಟಿ ಸಂತೆಯು ಎಂದಿನಂತೆ ನಡೆದರೂ ಕೆಲವು ವಿಶೇಷತೆಗಳಿಗೆ ಕಾರಣವಾಯಿತು.

ವಿಜಯಪುರ ಜಿಲ್ಲಾಧಿಕಾರಿಗಳ ಆದೇಶದಂತೆ ಇಲ್ಲಿನ ಗ್ರಾಪಂನಿಂದ ಶನಿವಾರದಿಂದ ರವಿವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ ಹಾಗೂ ಕೊರೊನಾ ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಧ್ವನಿವರ್ಧಕದ ಮೂಲಕ ಸುತ್ತಲಿನ ಎಲ್ಲ ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡಿದರು.

ಆಲಮಟ್ಟಿ ಸಂತೆಗೆ ಸುಮಾರು 40 ಹಳ್ಳಿಗಳ ಜನರು ಹಾಗೂ ಮುದ್ದೇಬಿಹಾಳ, ಬಾಗಲಕೋಟೆ, ವಿಜಯಪುರ, ತಾಳಿಕೋಟೆ ಸೇರಿದಂತೆ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಆಗಮಿಸುತ್ತಾರೆ. ಸಂತೆ ರದ್ದಿನ ಬಗ್ಗೆ ಎಷ್ಟೇ ಧ್ವನಿವರ್ಧಕದ ಮೂಲಕ ಹೇಳಿದರೂ ಕೂಡ ಗ್ರಾಹಕರು ಹಾಗೂ ವ್ಯಾಪಾರಿಗಳು ತಮ್ಮ ಕಾಯಕದಲ್ಲಿ ತೊಡಗಿದರು.

ಮಾತಿನಚಕಮಕಿ: ದೂರದ ಊರುಗಳಿಂದ ಆಗಮಿಸಿದ್ದ ಜನರಿಗೆ ಆಲಮಟ್ಟಿ ಗ್ರಾಪಂ ಅಧ್ಯಕ್ಷೆ ಸೈದಮ್ಮ ಬೆಣ್ಣಿಯವರು ಗ್ರಾಪಂ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಸಂತೆ ಆವರಣಕ್ಕೆ ತೆರಳಿ ಸಂತೆ ರದ್ದಾಗಿರುವ ಕುರಿತು ಜನರಿಗೆ ಮಾಹಿತಿ ನೀಡುವ ವೇಳೆ ರೈತರು ಹಾಗೂ ಗ್ರಾಹಕರು ಅಧ್ಯಕ್ಷೆಯೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಆಲಮಟ್ಟಿ ಪೊಲೀಸ್‌ ಠಾಣೆ ಸಿಬ್ಬಂದಿ ನೆರವಿನೊಂದಿಗೆ ಸಂತೆ ಹಾಗೂ ಆಲಮಟ್ಟಿ ಪಟ್ಟಣದ ವಿವಿಧ ಭಾಗಗಳಲ್ಲಿದ್ದ ಮಾಂಸದ ಚಿಕನ್‌, ಮಟನ್‌, ಮೀನಿನ ಅಂಗಡಿಗಳು, ಮಿಠಾಯಿ ಅಂಗಡಿಗಳು ಹಾಗೂ ಚಹಾ ಹೋಟೆಲ್‌ಗ‌ಳನ್ನು ಬಂದ್‌ ಮಾಡಿಸಿದರು.

Advertisement

ಈ ವೇಳೆ ಪ್ರತಿ ಅಂಗಡಿಕಾರರೊಂದಿಗೆ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಸೈದಮ್ಮ ಬೆಣ್ಣಿ, ಕೊರೊನಾ ರೋಗ ಭಯಾನಕವಾಗಿದ್ದು ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಈ ಹಿನ್ನೆಲೆಯಲ್ಲಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜನರ ಹಿತಕ್ಕಾಗಿ ಸರ್ಕಾರ ಆದೇಶ ಮಾಡಿದೆ, ಆದ್ದರಿಂದ ನೀವು ಬದುಕಿ ಇನ್ನೊಬ್ಬರನ್ನೂ ಬದುಕಲು ಬಿಡಿ ಎಂದರು.

ಸರ್ಕಾರದ ನಿರ್ದೇಶನದಂತೆ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ತಮಗೂ ಸೇರಿದಂತೆ ಪಕ್ಕದ ಯಾರಿಗಾದರೂ ಕೊರೊನಾ ರೋಗ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಆಸ್ಪತ್ರೆಗಳಿಗೆ ತೆರಳಿ ಗುಣಮುಖರಾಗಬೇಕು ಎಂದು ಹೇಳಿದರು.

ಪಟ್ಟಣದಲ್ಲಿರುವ ಮಾಂಸಾಹಾರಿ ಖಾನಾವಳಿ ಹಾಗೂ ಮಾಂಸದ ಅಂಗಡಿ ಸೇರಿದಂತೆ ಕರಿದ ಪದಾರ್ಥಗಳನ್ನು ತಯಾರಿಸುವ ಹಾಗೂ ಮಾರಾಟ ಮಾಡುವ ಎಲ್ಲ ಕೇಂದ್ರಗಳನ್ನು ಮುಚ್ಚಿಸಿ ಸರ್ಕಾರದ ಆದೇಶ ಬರುವವರೆಗೆ ಅಂಗಡಿಗಳನ್ನು ತೆರೆಯದಂತೆ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಲಾಯಿತು.

ಸಂತೆಯಲ್ಲಿ ತರಕಾರಿ, ಹಣ್ಣುಗಳು, ಬಟ್ಟೆ ಹಾಗೂ ಕಿರಾಣಿ ಸಾಮಗ್ರಿಗಳನ್ನು ಮಾತ್ರ ಮಾರಾಟಕ್ಕೆ ಅನುವು ಮಾಡಿಕೊಡಲಾಯಿತು. ಅಧ್ಯಕ್ಷರೊಂದಿಗೆ ಆಲಮಟ್ಟಿ ಎಎಸೈ ಆರ್‌.ಜಿ. ನಗರಕರ ಜನರಿಗೆ ಮುಂಜಾಗ್ರತಾ ಕ್ರಮದ ಬಗ್ಗೆ ಜಾಗೃತಿ ಮೂಡಿಸಿದರು. ಈ ವೇಳೆ ಗ್ರಾಪಂನ ರಾಮಸ್ವಾಮಿ ಗಾಯಕವಾಡ, ಟಿ.ಆರ್‌. ಬಂಡಿವಡ್ಡರ, ರವಿ ಆಲಮಟ್ಟಿ, ಅಂದಾನಿ ಲಮಾಣಿ, ಪೊಲೀಸ್‌ ಇಲಾಖೆಯ ಎಸ್‌.ಜಿ. ಲಾಡ್‌, ರಣಧೀರ ಚವ್ಹಾಣ, ಪ್ರಕಾಶ ಗಣಾಚಾರಿ, ಅನಿಲ ರೂಗಿ, ಕೃಷ್ಣಾ ಕೆರಿಕಟ್ಟಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next