ಆಲಮಟ್ಟಿ: ಕಂಕಣ ಸೂರ್ಯಗ್ರಹಣ ಅಂಗವಾಗಿ ನಾಡಿನ ವಿವಿಧ ಮೂಲೆಗಳಿಂದ ಸಂಪ್ರದಾಯಸ್ಥರು ಆಲಮಟ್ಟಿ ಲಾಲ ಬಹದ್ದೂರ್ ಶಾಸ್ತ್ರಿ ಮುಂಭಾಗದ ನೀರಿನಲ್ಲಿ ಹಾಗೂ ಹಿನ್ನೀರು ಪ್ರದೇಶದಲ್ಲಿ ಕುಳಿತು ವೃತ ಆಚರಿಸಿದರು.
ಗುರುವಾರ ಬೆಳಗ್ಗೆ 8 ಗಂಟೆಯೊಳಗಾಗಿ ನದಿ ತೀರಕ್ಕೆ ಆಗಮಿಸಿದ್ದ ವೃತಾಚಾರಿಗಳಲ್ಲಿ ಕೆಲವರು ನೀರಿನಲ್ಲಿ ಕುಳಿತು ಜಪತಪ ಆಚರಿಸಿದರೆ, ಇನ್ನು ಕೆಲವರು ನದಿ ಮಧ್ಯಭಾಗದ ದ್ವೀಪಪ್ರದೇಶದಲ್ಲಿ ಕುಳಿತು ಮಂತ್ರಪಠಣ ಮಾಡಿದರು. ನಡೆಯದ ಪೂಜೆ: ಗುರುವಾರ ಬೆಳಗ್ಗೆ ಕಂಕಣ ಸೂರ್ಯಗ್ರಹಣದಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿರುವ ದೇವಸ್ಥಾನಗಳಲ್ಲಿ ಗ್ರಹಣ ಗ್ರಹಣ ಮುಕ್ತಾಯದವರೆಗೂ ಪೂಜೆ ನಡೆಯಲಿಲ್ಲ. ನಂತರ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ನೆರವೇರಿತು.
ಶಾಲೆ ರಜೆ: ಪಟ್ಟಣವೂ ಸೇರಿದಂತೆ ಸುತ್ತಲಿನ ಕೆಲ ಶಾಲೆಗಳಿಗೆ ಗ್ರಹಣದ ನಿಮಿತ್ತ ರಜೆ ನೀಡಿರುವುದು ತಿಳಿದುಬಂದಿದೆ. ಗ್ರಹಣಕ್ಕೆ ಒನಕೆ ಬಳಕೆ: ಚಂದ್ರ ಹಾಗೂ ಸೂರ್ಯ ಗ್ರಹಣಗಳ ಆರಂಭ ಹಾಗೂ ಮುಕ್ತಾಯ ತಿಳಿಯಲು ವೈಜ್ಞಾನಿಕವಾಗಿ ಹಲವಾರು ಸಾಮಗ್ರಿಗಳಿದ್ದರೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಗ್ರಹಣದ ಬಗ್ಗೆ ತಿಳಿಯಲು ಬೇರೆ ಬೇರೆ ಮಾರ್ಗ ಅನುಸುತ್ತಿರುವುದು ವಿಶೇಷವಾಗಿದೆ. ಗುರುವಾರ ಬೆಳಗ್ಗೆ 8.04ಕ್ಕೆ ಆರಂಭವಾದ ಗ್ರಹಣ ತಿಳಿಯಲು ಅರಳದಿನ್ನಿಯ ಮಹಿಳೆಯರು ಒನಕೆಯನ್ನು ಅಗಲವಾದ ಪಾತ್ರೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ನಂತರ ಒನಕೆಯನ್ನು ಸರಳವಾಗಿ ನಿಲ್ಲಿಸಿದ್ದಾರೆ.
ನಂತರ 11 ಗಂಟೆಗೆ ಸರಳವಾಗಿ ಯಾವುದೇ ಆಸರೆಯಿಲ್ಲದೇ ನಿಂತಿದ್ದ ಒನಕೆ ಬಿದ್ದಿತು. ಇದನ್ನರಿತು ಹಿರಿಯ ಮಹಿಳೆಯರು ಈಗ ಗ್ರಹಣ ಸಂಪೂರ್ಣ ಮುಕ್ತಾಯವಾಯಿತು ಎಂದು ತಿಳಿದು ನಂತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು.