Advertisement

ಆಲಮಟ್ಟಿ ಶಾಸ್ತ್ರಿ ಜಲಾಶಯದ ಶೇ. 80 ನೀರು ಜಿಲ್ಲೆಗೆ ಬಳಕ

12:22 PM Dec 01, 2018 | |

ಆಲಮಟ್ಟಿ: ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದಲ್ಲಿ ಸಂಗ್ರಹವಾಗುತ್ತಿರುವ ನೀರಿನಲ್ಲಿ ಶೇ. 80 ನೀರನ್ನು ಇನ್ನು ಮುಂದೆ ಜಿಲ್ಲೆಗೆ ಬಳಸಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ಶುಕ್ರವಾರ ಸಮೀಪದ ಬೇನಾಳ ಆರ್‌.ಎಸ್‌. ಗ್ರಾಮದಲ್ಲಿ ಆಲಮಟ್ಟಿ-ಬಳೂತಿ ಸಂಯುಕ್ತ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ 3.05 ಕೋಟಿ ರೂ. ವೆಚ್ಚದ ಪೈಪ್‌ ಬದಲಾವಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈಗ ಆಲಮಟ್ಟಿಯಲ್ಲಿ ಸಂಗ್ರಹವಾಗುತ್ತಿರುವ ನೀರಿನಲ್ಲಿ ಹೆಚ್ಚಿನ ಭಾಗ ರಾಯಚೂರು, ಕಲಬುಗಿ, ಯಾದಗಿರಿ ಜಿಲ್ಲೆಗಳಿಗೆ ಹೋಗುತ್ತಿದೆ. ಇದರ ಪರಿಣಾಮ ಜಿಲ್ಲೆಯಲ್ಲಿ ಬೃಹತ್‌ ಜಲಾಶಯ ನಿರ್ಮಿಸಿದ್ದರೂ ಅಖಂಡ ಜಿಲ್ಲೆ ರೈತರ ಜಮೀನಿಗೆ ಹಿಂಗಾರು ಹಂಗಾಮಿಗೆ ನೀರು ಪೂರೈಸಲಾಗಲಿಲ್ಲ ಎಂದು ಕೃ.ಮೇ.ಯೋ. ನೀರಾವರಿ ಸಲಹಾ ಸಮಿತಿ ಸಭೆ ಅಧ್ಯಕ್ಷರೂ ಆಗಿರುವ ಶಿವಾನಂದ ಪಾಟೀಲ ಹೇಳಿದರು.

ರಾಜ್ಯದ 1.30 ಕೋಟಿ ಬಡಕುಟುಂಬಗಳ ಆರೋಗ್ಯ ರಕ್ಷಣೆಗಾಗಿ ಪ್ರತಿಯೊಂದು ಕುಟುಂಬಕ್ಕೆ 5 ಲಕ್ಷ ರೂ. ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲು ಭಾರತ ಆಯುಷ್ಮಾನ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಬಸವನಬಾಗೇವಾಡಿ ಪಟ್ಟಣದಲ್ಲಿ ಮೆಗಾ ಮಾರುಕಟ್ಟೆ, ಸುಸಜ್ಜಿತ ಕಲ್ಯಾಣ ಮಂಟಪ ಸೇರಿದಂತೆ ಹಲವಾರು ವಿಶೇಷ
ಯೋಜನೆಗಳನ್ನು ಹಾಕಿಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ. 24×7 ಕುಡಿಯುವ ನೀರು ಪೂರೈಸಲು ಯೋಜನೆ ಹಾಕಿಕೊಂಡಿದ್ದು ಇದರಿಂದ ಜಿಲ್ಲೆಯಲ್ಲಿಯೇ ವಾರದ ಎಲ್ಲ ದಿನ 24 ಗಂಟೆಗಳ ಕಾಲ ನೀರು ದೊರೆಯುವ ಪಟ್ಟಣವಾಗಿ ಹೊರ ಹೊಮ್ಮಲಿದೆ ಎಂದರು. 

Advertisement

ಇತ್ತೀಚೆಗೆ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದ ಕಲಕೇರಿಗೆ ಭೇಟಿ ನೀಡಿದಾಗ ಅಲ್ಲಿ ಕಳೆದ 2 ವರ್ಷದಿಂದ ಇಲ್ಲಿವರೆಗೂ ನಲ್ಲಿಯಲ್ಲಿ
ನೀರು ಬರುವುದೇ ಇಲ್ಲ. ಜನರು ನೀರಿಗಾಗಿ ಕಿ.ಮೀ.ಗಳವರೆಗೆ ಪರದಾಡಬೇಕಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿಯೂ ಕೂಡ ಕೈ
ತೊಳೆಯಲು ಕೂಡ ನೀರಿನ ತೊಂದರೆಯಿರುವುದು ಗಮನಕ್ಕೆ ಬಂತು. ಇದರಿಂದ ಆ ಕ್ಷೇತ್ರವನ್ನು ಪ್ರತಿನಿಧಿ ಸುವ ಜನ ಪ್ರತಿನಿಧಿಗಳ ಕಾರ್ಯ ತೋರುವಂತಾಗಿತ್ತು. ಹೀಗೆ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ನೀರಿಗಾಗಿ ಪರದಾಡುವಂತಾಗಿ ಕೆಲವು ಕ್ಷೇತ್ರಗಳಲ್ಲಿ ವರ್ಷದುದ್ದಕ್ಕೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ.

ಬಸವನಬಾಗೇವಾಡಿ ಕ್ಷೇತ್ರದ ಯಾವ ಗ್ರಾಮಕ್ಕೂ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಬರುವ ದಿನಗಳಲ್ಲಿ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ನೀರನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಭಾಗದಲ್ಲಿ ಸರ್ಕಾರಿ ಆಸ್ಪತ್ರೆ ಮಾಡಲು ಆಗುವುದಿಲ್ಲ. ಆದರೆ ಆಯುರ್ವೇದ ಆಸ್ಪತ್ರೆಗೆ ಕ್ರಮ ಕೈಗೊಳ್ಳಲಾಗುವುದು. ಬೇನಾಳ ಅಗಸರ ಹಳ್ಳಕ್ಕೆ ಬಾಂದಾರ ನಿರ್ಮಿಸುವ ಯೋಜನೆಯನ್ನು ಅತಿ ಶೀಘ್ರದಲ್ಲಿ ಕೈಗೊಳ್ಳಲಾಗುವುದು. ಕೃಷ್ಣಾ ಮೇಲ್ದಂಡೆ ಯೋಜನೆ ಹಿನ್ನೀರಿನಿಂದ ಬಾಧಿತಗೊಂಡಿರುವ ಗ್ರಾಮಗಳ ಸಂತ್ರಸ್ತರ ಮಕ್ಕಳ ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿಯನ್ನು 2050ರವರೆಗೆ ಮುಂದುವರಿಸಲು ಬಾಧಿತ ಜಿಲ್ಲೆಗಳ ಶಾಸಕರೊಂದಿಗೆ ಚರ್ಚಿಸಲಾಗಿದೆ. ಈ ಕುರಿತು ಸಂಪುಟಕ್ಕೆ ಒಯ್ಯಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುಂಚೆ ಪ್ರಾಸ್ತಾವಿಕವಾಗಿ ಗ್ರಾಮದ ಮುಖಂಡ ಜಿ.ಸಿ.ಮುತ್ತಲದಿನ್ನಿ ಮಾತನಾಡಿ, ಬೇನಾಳ ಗ್ರಾಮವು ಕೃಷ್ಣೆಯ ಹಿನ್ನೀರು ಪ್ರದೇಶಕ್ಕೆ ಸಮೀಪದಲ್ಲಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡಲಿವೆ. ಆದ್ದರಿಂದ ಸರ್ಕಾರಿ ಆಸ್ಪತ್ರೆ ಮಂಜೂರಿಸಬೇಕು ಹಾಗೂ ಸಂತ್ರಸ್ತರ ಮಕ್ಕಳಿಗಾಗಿ ಯೋಜನಾ ನಿರಾಶ್ರಿತ ಮೀಸಲನ್ನು 2050ರವರೆಗೆ ಮುಂದುವರಿಸಬೇಕು ಎಂದರು. 

ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಉದಂಡಿ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ತಾನಾಜಿ ನಾಗರಾಳ ಮಾತನಾಡಿದರು. ರಂಗಪ್ಪ ಗೌಡ ಬಿರಾದಾರ, ಎಸ್‌.ಆರ್‌. ವಿಭೂತಿ, ಮಲ್ಲನಗೌಡ ನರಸನಗೌಡರ, ಗ್ಯಾನಪ್ಪಗೌಡ ಬಿರಾದಾರ, ಬಡೇಸಾಬ ಬಾಗವಾನ, ಶಿವಾನಂದ ಅಂಗಡಿ, ಲಕ್ಷ್ಮಣ ಹಂಡರಗಲ್ಲ ಇದ್ದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು. ಬಿ.ಎಚ್‌. ಗಣಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next