Advertisement

ಆದೇಶಕ್ಕಿಲ್ಲ ಕವಡೆಕಾಸಿನ ಕಿಮ್ಮತ್ತು

12:07 PM Feb 19, 2020 | Naveen |

ಆಲಮಟ್ಟಿ: ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕೆಲ ಕಚೇರಿಗಳನ್ನು ಅತಿ ಹಿಂದುಳಿದ ಜಿಲ್ಲೆಗಳಿಗೆ ವರ್ಗಾಯಿಸಿದ್ದರೂ ಕೂಡ ಅಧಿಕಾರಿಗಳು ಲಾಬಿಯಿಂದ ತಾವಿರುವ ಸ್ಥಳದಲ್ಲೇ ಕಾರ್ಯ ಮುಂದುವರಿಸಿದ್ದು, ಇದರಿಂದ ಅಭಿವೃದ್ಧಿ ಆಗುವುದಾದರೂ ಯಾವಾಗ ಎಂದು ಜನರು ಆಶೆಗಣ್ಣಿನಿಂದ ನೋಡುವಂತಾಗಿದೆ.

Advertisement

ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ಟಿ.ಎಂ.ಭಾಸ್ಕರರಾವ್‌ ಅವರು 2020 ಫೆ.2ರಂದು ಆದೇಶ ಹೊರಡಿಸಿ ವರ್ಗಾವಣೆಯಾಗಿರುವ ಕಚೇರಿಗಳು 2020 ಫೆ.17ರೊಳಗೆ ಸ್ಥಳಾಂತರಿಸುವಂತೆ ಹಾಗೂ ಪಾಲನೆಯಾದ ಕ್ರಮ ಕುರಿತು ತಿಳಿಸಲು ಸೂಚಿಸಿದ್ದರು. ಆದರೆ ಸರ್ಕಾರದ ಆದೇಶದಂತೆ ಕಚೇರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಕಚೇರಿ ಸ್ಥಳಾಂತರಿಸಲು ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು 2018ರಲ್ಲಿ ಕೆಲ ಕಚೇರಿಗಳನ್ನು ಹಿಂದುಳಿದ ಪ್ರದೇಶಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ನಂತರ 2019 ಸೆ.18ರಂದು ಸಚಿವ ಸಂಪುಟದಲ್ಲಿ ನಿರ್ಣಯಿಸಿದಂತೆ ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯನ್ನು ತೀವ್ರಗೊಳಿಸಲು ಹಾಗೂ ಆ ಭಾಗದ ನಾಗರಿಕರಿಗೆ ರಾಜ್ಯಾಡಳಿತ ಹತ್ತಿರವಾಗಲು ರಾಜ್ಯ ಸರ್ಕಾರದ ಕಚೇರಿಗಳಾಗಿರುವ ಆಲಮಟ್ಟಿಗೆ ಕೃಷ್ಣಾ ಭಾಗ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕರ ಕಚೇರಿ, ದಾವಣಗೆರೆಗೆ ಕರ್ನಾಟಕ ನೀರಾವರಿ ನಿಗಮ, ಬೆಳಗಾವಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಸಕ್ಕರೆ ನಿರ್ದೇಶಕ ಕಚೇರಿ, ಹುಬ್ಬಳ್ಳಿಗೆ ನಗರಾಭಿವೃದ್ಧಿ ಇಲಾಖೆ, ಹಂಪಿಗೆ ಪ್ರವಾಸೋದ್ಯಮ ಇಲಾಖೆ, ಧಾರವಾಡಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಜಾಗೃತ ವಿಭಾಗ) ಮತ್ತು ಕಾನೂನು ಇಲಾಖೆ, ಕಲಬುರಗಿ ಹಾಗೂ ಬೆಳಗಾವಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯನ್ನು ಸ್ಥಳಾಂತರಿಸಲು ಆದೇಶಿಸಲಾಗಿತ್ತು.

ಅದರನ್ವಯ ಕಚೇರಿಗಳು ವರ್ಗಾವಣೆಗೊಂಡ ಸ್ಥಳಕ್ಕೆ ಬಾರದೇ ಇರುವುದರಿಂದ ಸರ್ಕಾರ ಮತ್ತೆ ಆದೇಶ ಹೊರಡಿಸಲಾಗಿದ್ದು, ಹಿರಿಯ ಅಧಿಕಾರಿಗಳು ಈಗಲಾದರೂ ಸರ್ಕಾರದ ಆದೇಶ ಪಾಲನೆ ಮಾಡಿ ವರ್ಗಾವಣೆಗೊಂಡಿರುವ ಕಚೇರಿಗಳಿಗೆ ತೆರಳಿ ಕಾರ್ಯ ನಿರ್ವಹಿಸಬೇಕಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಯ ಹಿತದೃಷ್ಟಿಯಿಂದ ದಕ್ಷಿಣ ಭಾಗದಲ್ಲಿಯೇ ಕೇಂದ್ರೀಕೃತವಾಗಿರುವ ಕಚೇರಿಗಳಲ್ಲಿ ಕೆಲ ಕಚೇರಿಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಅಧಿವೇಶನದಲ್ಲಿ ಘೋಷಿಸಿ 2019ರ ಏ.1ರಿಂದ ಕಾರ್ಯಾರಂಭ ಮಾಡಲು 10.1.2019ರಂದು ಆದೇಶಿಸಲಾಗಿತ್ತು. ಸಿಎಂ ಕುಮಾರಸ್ವಾಮಿಯವರು ಬೆಂಗಳೂರಿನಲ್ಲಿರುವ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ಕೃಷ್ಣಾಭಾಗ್ಯ ಜಲನಿಗಮದ ಆಡಳಿತ ಕಚೇರಿಯನ್ನು ನೋಂದಾಯಿತ ಆಡಳಿತ ಕಚೇರಿ ಆಲಮಟ್ಟಿಗೆ ಹಾಗೂ ಕರ್ನಾಟಕ ನೀರಾವರಿ ನಿಗಮವನ್ನು ದಾವಣಗೆರೆಗೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ(ವಿದ್ಯುತ್‌ ಮಗ್ಗಗಳ ಅಭಿವೃದ್ಧಿ ನಿಗಮ) ಹಾಗೂ ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರ ಕೇಂದ್ರ ಕಚೇರಿಗಳನ್ನು ಬೆಳಗಾವಿಗೆ, ನಗರಾಭಿವೃದ್ಧಿ ಇಲಾಖೆಯ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯನ್ನು ವಿಭಜಿಸಿ ಉತ್ತರ ಕರ್ನಾಟಕದ ಹುಬ್ಬಳ್ಳಿಗೆ ಪ್ರತ್ಯೇಕವಾಗಿ ಸ್ಥಾಪಿಸುವುದು ಹಾಗೂ ಮೈಸೂರಿನಲ್ಲಿದ್ದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರಾ ಇಲಾಖೆಯನ್ನು ಹಂಪಿಗೆ ಹಾಗೂ ಕಾನೂನು ಇಲಾಖೆಯ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ಪೈಕಿ ಒಬ್ಬ ಸದಸ್ಯರ ಕಚೇರಿಯನ್ನು ಧಾರವಾಡಕ್ಕೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಸ್ಪಂದನ) ಇಲಾಖೆಯ ರಾಜ್ಯ ಮಾಹಿತಿ ಆಯೋಗದ ಆಯುಕ್ತರುಗಳ ಪೈಕಿ ಎರಡು ಮಾಹಿತಿ ಆಯುಕ್ತರ ಕಚೇರಿಗಳಲ್ಲಿ ಒಂದು ಪೀಠ ಕಲುºರ್ಗಿಗೆ ಹಾಗೂ ಒಂದು ಪೀಠ ಬೆಳಗಾವಿಗೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ(ಜಾಗƒತ ವಿಭಾಗ) ಇಲಾಖೆಯ ಕರ್ನಾಟಕ ಲೋಕಾಯುಕ್ತದಲ್ಲಿರುವ ಎರಡು ಉಪ ಲೋಕಾಯುಕ್ತ ಕಚೇರಿಗಳ ಪೈಕಿ ಒಂದು ಉಪ ಲೋಕಾಯುಕ್ತ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾತರಿಸಿ ಒಟ್ಟು 9 ಕಚೇರಿಗಳನ್ನು ಸ್ಥಳಾಂತರಿಸಿ 2019ರ ಏ.1ರಂದು ಜಾರಿಗೆ ಬರುತ್ತದೆ ಎಂದು ತಿಳಿಸಲಾಗಿದ್ದರೂ ಕಚೇರಿಗಳು ಬಾರದೇ ಇರುವುದರಿಂದ ಮತ್ತೆ ನೂತನವಾಗಿ 23.9.2019ರಂದು ಸರ್ಕಾರದ ವತಿಯಿಂದ
ಮತ್ತೂಮ್ಮೆ ಆದೇಶ ಹೊರಡಿಸಿ ಸ್ಥಳಾಂತರಗೊಳ್ಳದ ಕಚೇರಿಗಳು ಅಕ್ಟೋಬರ್‌ ಅಂತ್ಯದೊಳಗೆ
ಸ್ಥಳಾಂತರಗೊಳ್ಳಬೇಕೆಂದು ಮತ್ತೆ ಆದೇಶ ನೀಡಿತ್ತು.

ಇದರಿಂದ ವಿಚಲಿತರಾದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ದಶಕಗಳಿಂದ ರಾಜಧಾನಿಯಲ್ಲಯೇ
ಉಳಿದುಕೊಂಡಿದ್ದ ನೌಕರರು ತಮ್ಮ ಕುತಂತ್ರ ಬುದ್ಧಿ ಬಳಸಿ ಆಲಮಟ್ಟಿಯಲ್ಲಿರುವ ಕಚೇರಿಗೆ ಬಾರದೇ ಕಚೇರಿಯ ನಾಮಫಲಕದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ನೋಂದಾಯಿತ ಕಚೇರಿ ಆಲಮಟ್ಟಿ ಎಂದು ಬರೆದು ಅದರ ಕೆಳಭಾಗದಲ್ಲಿ ಸಂಪರ್ಕ ಕಚೇರಿ ಪಿಡಬ್ಲ್ಯೂ ಡಿ ಕಚೇರಿ ಪೂರಕ ಕಟ್ಟಡ 3ನೇಮಹಡಿ, ಕೆ.ಆರ್‌.ವೃತ್ತ ಬೆಂಗಳೂರು ಎಂದು ನಮೂದಿಸಿದ್ದಾರೆ. ಇದರಿಂದ ಮತ್ತೆ ಎಂ.ಡಿ.ಯವರ ಕಚೇರಿಯನ್ನು ಬೆಂಗಳೂರಿನಲ್ಲೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯವರು ಅಧಿವೇಶನದಲ್ಲಿ ನೀಡಿದ ಭರವಸೆಗಳು ಹಾಗೂ ಸರ್ಕಾರದ ಆದೇಶಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲವೇ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೌಲಭ್ಯಗಳಿದ್ದರೂ ಬಾರದ ಕಚೇರಿ: ಕೋಟ್ಯಂತರ ರೂ.ಗಳನ್ನು ವ್ಯಯ ಮಾಡಿ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಆಡಳಿತಾತ್ಮಕ ಹಾಗೂ ಆರ್ಥಿಕ ವಿಭಾಗದ ಇಬ್ಬರು ವ್ಯವಸ್ಥಾಪಕ ನಿರ್ದೇಶಕರು, ತಾಂತ್ರಿಕ ಸಿಬ್ಬಂದಿ ಹೀಗೆ ಎಲ್ಲ ಅ ಧಿಕಾರಿಗಳಿಗೆ ಅನುಕೂಲ ವಾಗುವಂತೆ ಬೃಹತ್‌ ಕಟ್ಟಡ ನಿರ್ಮಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಎಲ್ಲ ಅಧಿಕಾರಿಗಳು ವಾಸಿಸಲು ಸುಸಜ್ಜಿತ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಬಂಗಲೆಗಳು ಇಂದು ಭೂತ ಬಂಗಲೆಗಳಂತೆ ಬಿಕೋ ಎನ್ನುವಂತಾಗಿವೆ.

Advertisement

ಉತ್ತರ ಕರ್ನಾಟಕದವರೇ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನ ಎಂ.ಡಿ.ಕಚೇರಿಯಲ್ಲಿದ್ದಾರೆ. ಅವರು ಅಲ್ಲಿಯೇ ವಾಸಿಸಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ದಕ್ಷಿಣದಿಂದ ಉತ್ತರಕ್ಕ ಬರಲಾಗದ ಸಿಬ್ಬಂದಿಗಳ ಮೇಲೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಹೆಸರು ಹೇಳಲು ಇಚ್ಚಿಸದ
ಕೃಷ್ಣಾ ಭಾಗ್ಯಜಲನಿಗಮದ ಉದ್ಯೋಗಿ.

ಈ ಭಾಗದ ಜನಪ್ರತಿನಿಧಿಗಳು ಸ್ವ ಹಿತಾಸಕ್ತಿ ಮರೆತು ರಾಜ್ಯದ ಸಮಗ್ರ ಅಭಿವೃದ್ಧಿಗೆ ವರ್ಗಾವಣೆಗೊಂಡ ಕಚೇರಿಗಳು ಸ್ಥಳಾಂತರಗೊಂಡ ಸ್ಥಳದಲ್ಲಿ ಕಾರ್ಯ ನಿರ್ವಹಿಸಿದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಜನಪ್ರತಿನಿಧಿಗಳು ಯಾವುದೋ ಆಮಿಷಕ್ಕೊಳಗಾಗಬಾರದು. ಜನರು ಇವರನ್ನು ನಾಡಿನ ಸೇವೆ ಮಾಡಲೆಂದು ಕಳಿಸಿದ್ದಾರೆ ಎನ್ನುವ ಪ್ರಜ್ಞೆಯಿರಬೇಕು. ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಎಲ್ಲ ಶಾಸಕರು, ಸಂಸದರು ಧ್ವನಿಯೆತ್ತಬೇಕು.
ಮಹಾಂತೇಶ ಬೆಳಗಲ್ಲ,
ಯುವ ಮುಖಂಡ

„ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next