Advertisement

ಜಿಲ್ಲಾ ಗಡಿಯಲ್ಲಿ ಹೆಚ್ಚಿದ ಬಿಗಿ ಭದ್ರತೆ

05:49 PM Apr 11, 2020 | Naveen |

ಆಲಮಟ್ಟಿ: ಮಹಾಮಾರಿ ಕೋವಿಡ್  ವೈರಸ್‌ ತಡೆಗಟ್ಟಲು ನಿರ್ಮಿಸಿರುವ ಜಿಲ್ಲಾ ಗಡಿ ಚೆಕ್‌ ಪೋಸ್ಟ್‌ನಲ್ಲಿ ಅತ್ಯವಶ್ಯ ಸಾಮಗ್ರಿಗಳ ಸಾಗಣೆ ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ವಾಹನಗಳು ಒಳಬರದಂತೆ ನಿರ್ಬಂಧಿಸಲಾಗಿತ್ತು.

Advertisement

ಕೋವಿಡ್  ತಡೆಗೆ ಕೇಂದ್ರ ಹಾಗೂ ರಾಜ್ಯಸರ್ಕಾರದ ನಿರ್ದೇಶನಗಳಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಯಲಗೂರ ಗ್ರಾಮದ ಬಳಿಯಲ್ಲಿ ಕೃಷ್ಣಾನದಿ ಪಕ್ಕದಲ್ಲಿ ಜಿಲ್ಲಾಗಡಿ ಚೆಕ್‌ಪೋಸ್ಟ್‌ ಹಾಕಲಾಗಿದ್ದು, ಇಲ್ಲಿ ಆಗಮಿಸುತ್ತಿರುವ ಪ್ರಯಾಣಿಕರ ಹಾಗೂ ಅಗತ್ಯ ಸರಕು ಸಾಗಣೆಗಳ ವಾಹನಗಳನ್ನು ಜಿಲ್ಲೆಯ ಗಡಿಪ್ರವೇಶಿಸದಂತೆ ಬೇಸಿಗೆಯ ಬಿರುಬಿಸಿಲಿನ ನಡುವೆಯೂ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ.

ತಲೆನೋವಾದ ಆಸ್ಪತ್ರೆ ಚೀಟಿ: ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ, ನಿಡಗುಂದಿ, ಬಸವನಬಾಗೇವಾಡಿ ತಾಲೂಕಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಇದರಿಂದ ಬಾಗಲಕೋಟೆಗೆ ಹೋಗುವವರು ಮತ್ತು ಚಿಕಿತ್ಸೆ ಪಡೆದು ಮರಳಿ ಬರುವವರನ್ನು ನಿರ್ಬಂ ಧಿಸಿದ್ದರೂ ಕೂಡ ತುರ್ತು ಸೇವೆಯ ಆಸ್ಪತ್ರೆಯ ಚೀಟಿಗಳನ್ನು ತೋರಿಸುತ್ತಾರೆ. ಈ ಕುರಿತು ಸ್ಥಳದಲ್ಲಿದ್ದ ಅಧಿಕಾರಿಗಳು ಆ ಕುರಿತು ಕೂಲಂಕುಶವಾಗಿ ಪರಿಶೀಲಿಸಿದ ನಂತರ ಅವಶ್ಯವೆನಿಸಿದರೆ ಮಾತ್ರ ಅವರಿಗೆ ಅವಕಾಶ ನೀಡುತ್ತಾರೆ ಇಲ್ಲದಿದ್ದರೆ ಅವರನ್ನು ಮರಳಿ ಕಳಿಸುವುದು ನಿತ್ಯವೂ ನಡೆಯುತ್ತಿದೆ.

ಈಗಾಗಲೇ ಬಾಗಲಕೋಟೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಜಿಲ್ಲಾಕೇಂದ್ರದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ
ನೀಡಲಾಗುತ್ತಿದ್ದರೂ ಕೂಡ ಬಾಗಲಕೋಟೆಗೆ ಹೋಗುತ್ತಿರುವುದು ಕೊರೊನಾ ಆತಂಕ ಹೆಚ್ಚಿಸಿದೆ. ಜಿಲ್ಲಾಡಳಿತ ಕೈಗೊಂಡ ಕಾರ್ಯ ಯಶಸ್ವಿಯಾಗಲು ನಾಗರಿಕರು ಆಸ್ಪತ್ರೆಯ ಅವಶ್ಯಕತೆಯಿದ್ದಲ್ಲಿ ಬಾಗಲಕೋಟೆಗೆ ಹೋಗದೇ ವಿಜಯಪುರಕ್ಕೆ ತೆರಳಬೇಕು ಎಂದು ಸ್ಥಳದಲ್ಲಿರುವ ಅಧಿಕಾರಿಯೊಬ್ಬರು ತಿಳಿಸಿದರು.
ಸಿಂದಗಿ ತಾಲೂಕಿನ ಗ್ರಾಮದಲ್ಲಿ ಸಂಬಂಧಿಕರೊಬ್ಬರು ಮರಣ ಹೊಂದಿದ್ದು, ಅವರ ಅಂತ್ಯಸಂಸ್ಕಾರಕ್ಕೆ ಹೋಗಬೇಕು ಎಂದು ಬಾದಾಮಿಯಿಂದ ಬೈಕಿನಲ್ಲಿ ಆಗಮಿಸಿದ್ದ ದಂಪತಿ ಮನವೊಲಿಸಿ ಮರಳಿ ಕಳಿಸಿದ ಪ್ರಸಂಗವೂ ನಡೆಯಿತು. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್‌, ಕಂದಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next