ಅಲಹಾಬಾದ್: ಅಪ್ರಾಪ್ತ ಬಾಲಕ ಮತ್ತು ಆತನಿಗಿಂತ ದುಪ್ಪಟ್ಟು ಪ್ರಾಯದ ಮಹಿಳೆಯ ವಿವಾಹ ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ವಿಚಾರಣೆ ನಡೆಸಿರುವ ನ್ಯಾಯಾಲಯವು ಬಾಲಕ ಪತಿಯನ್ನು ಆತನ ಪತ್ನಿಯ ಸುಪರ್ದಿಗೆ ನೀಡಲು ನಿರಾಕರಿಸಿದೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶ ರಾಜ್ಯದ ಅಜಂಗಢ್ ನಲ್ಲಿ. ಇಲ್ಲಿನ 16 ವರ್ಷದ ಬಾಲಕನೋರ್ವ ತನಗಿಂತ ದುಪ್ಪಟ್ಟು ವಯಸ್ಕ ಮಹಿಳೆಯನ್ನು ಪ್ರೀತಿಸಿ ವಿವಾಹವಾಗಿದ್ದ. ಅವರಿಗೆ ಒಂದು ಮಗವೂ ಹುಟ್ಟಿತ್ತು. ಇದೀಗ ಈ ಮದುವೆಯನ್ನು ಕಾನೂನು ಪ್ರಕಾರ ಊರ್ಜಿತ ಮಾಡಬಾರದು ಎಂದು ಕೋರಿ ಬಾಲಕನ ತಾಯಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಈ ವಿವಾಹ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಕೋರ್ಟ್ ನಲ್ಲಿ ತನ್ನ ಹೇಳಿಕೆ ನೀಡಿರುವ ಬಾಲಕ, ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದು, ಇದರ ಸಂಕೇತವಾಗಿ ಮಗುವಿನ ಜನನವಾಗಿದೆ. ಇನ್ನು ನಾನು ಪತ್ನಿಯೊಂದಿಗೆ ಇರಲು ಬಯಸಿದ್ದು, ಪಾಲಕರ ಬಳಿಗೆ ಹೋಗಲಾರೆ. ನಮ್ಮ ಮದುವೆಯನ್ನು ಊರ್ಜಿತ ಮಾಡಬೇಕು ಎಂದಿದ್ದಾನೆ.
ಇದನ್ನೂ ಓದಿ:ಸಿಎಂ ಬಿಎಸ್ ವೈ ಭೇಟಿಯಾಗಿ ‘ಬೆಲ್ಲದ’ ವಿಚಾರ ತಿಳಿಸಿದ ಬೊಮ್ಮಾಯಿ: ಕಾವೇರಿಗೆ ಶಾಸಕರ ದೌಡು
ಆದರೆ ನ್ಯಾಯಾಧೀಶರು ಈ ವಾದವನ್ನು ಒಪ್ಪಲಿಲ್ಲ. ಬಾಲಕ ಪ್ರಾಪ್ತ ವಯಸ್ಕನಾಗದ ಕಾರಣ ಈ ವಿವಾಹವನ್ನು ಕಾನೂನಡಿ ಮಾನ್ಯ ಮಾಡಲು ಸಾಧ್ಯವಿಲ್ಲ. ಬಾಲಕ ಪತಿಯನ್ನು ಆತನ ಪತ್ನಿಯ ಸುಪರ್ದಿಗೆ ನೀಡಲಾಗದು ಎಂದು ಅಭಿಪ್ರಾಯಪಟ್ಟಿದೆ.
ಒಂದು ವೇಳೆ ಬಾಲಕ ಪಾಲಕರ ಜೊತೆ ಹೋಗಲು ಒಪ್ಪದಿದ್ದರೆ, ರಾಜ್ಯ ಸರ್ಕಾರದ ಆಸರೆ ಕೇಂದ್ರದಲ್ಲಿ ಇರಬಹುದು. ಬಾಲಕನಿಗೆ 18 ವರ್ಷ ತುಂಬಿದ ಬಳಿಕ ಆತ ಪತ್ನಿಯ ಜೊತೆ ಇರಬಹುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.