Advertisement

ಆಲಾಡಿ: ಜಾಕ್‌ವೆಲ್‌ ಕಾಮಗಾರಿ ಪೂರ್ಣ

06:40 PM Dec 22, 2021 | Team Udayavani |

ಬಂಟ್ವಾಳ: ಉಳ್ಳಾಲ ಭಾಗದ ನೀರು ಪೂರೈಕೆಗಾಗಿ ಸಜೀಪಮುನ್ನೂರಿನ ಆಲಾಡಿಯಲ್ಲಿ ಜಾಕ್‌ವೆಲ್‌ ಕಾಮಗಾರಿ ಪೂರ್ಣಗೊಂಡಿದೆ. ಶುದ್ಧೀಕರಿಸಿದ ನೀರನ್ನು ಕೊಡುವ ಪೈಪ್‌ಲೈನ(ಡೆಲಿವರಿ ಲೈನ್‌)ನ್ನೂ ಈಗಲೇ ಅಳವಡಿಸಬೇಕು ಎಂಬ ಸ್ಥಳೀಯ ಬೇಡಿಕೆಯಿಂದ ಪೈಪ್‌ಲೈನ್‌ ಕಾರ್ಯ ಅರ್ಧಕ್ಕೆ ನಿಂತಿದೆ. ಗ್ರಾಮಸ್ಥರ ಆಗ್ರಹದ ಪೈಪ್‌ಲೈನ್‌ ಈ ಯೋಜನೆಯಲ್ಲೇ ಇಲ್ಲ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ.

Advertisement

ಉಳ್ಳಾಲ ಹಾಗೂ ಕೋಟೆಕಾರು ನಗರ ಸ್ಥಳೀಯಾಡಳಿತ ಸಂಸ್ಥೆಗಳು ಸೇರಿದಂತೆ 25 ಗ್ರಾಮಗಳಿಗೆ ನೀರು ಪೂರೈಕೆಗಾಗಿ ಆಲಾಡಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಜಾಕ್‌ವೆಲ್‌ ನಿರ್ಮಿಸಲಾಗಿದ್ದು, ಸುಮಾರು 1.98 ಕೋ.ರೂ.ಗಳ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಕೆಯುಡಬ್ಲ್ಯುಎಸ್‌ಡಿಬಿ) ಯವರು ನಿರ್ವಹಿಸುತ್ತಿದ್ದಾರೆ.

ಕಳೆದ ಒಂದೂವರೆ ವರ್ಷಗಳ ಹಿಂದೆ ಈ ಯೋಜನೆ ಪ್ರಾರಂಭಗೊಂಡಿದ್ದು, ಸ್ಥಳೀಯ ಗ್ರಾಮಗಳಿಗೆ ನೀರು ಕೊಡುವ ವಿಚಾರಕ್ಕೆ ಇಲ್ಲಿನ ಗ್ರಾ.ಪಂ.ಗಳು ಹಾಗೂ ಕೆಯುಡಬ್ಲ್ಯುಎಸ್‌ಡಿಬಿ ಅಧಿಕಾರಿಗಳ ಗೊಂದಲ ಈಗಲೂ ಮುಂದುವರಿದಿದೆ. ಅಧಿಕಾರಿಗಳು ನೀರು ಕೊಡುತ್ತೇವೆ ಎಂದು ಭರವಸೆ ನೀಡಿದರೂ, ಸ್ಥಳೀಯರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.

ರೈಸಿಂಗ್‌ ಲೈನ್‌ ಜತೆಗೆ ಡೆಲಿವರಿ ಲೈನ್‌
ಅಧಿಕಾರಿಗಳು ಹೇಳುವಂತೆ ಪ್ರಸ್ತುತ ಯೋಜನೆಯಲ್ಲಿ ಜಾಕ್‌ವೆಲ್‌ ನಿರ್ಮಿಸಿ ಮುಡಿಪುನಲ್ಲಿ ನಿರ್ಮಾಣವಾಗುವ ನೀರು ಶುದ್ಧೀಕರಣ ಘಟಕ(ಟ್ರೀಟ್‌ಮೆಂಟ್‌ ಫ್ಲಾÂಂಟ್‌)ಕ್ಕೆ ಕಚ್ಚಾ ನೀರನ್ನು ಕೊಂಡು ಹೋಗುವ ಪೈಪ್‌ಲೈನ್‌(ರೈಸಿಂಗ್‌ ಲೈನ್‌)ಗೆ ಮಾತ್ರ ಅವಕಾಶವಿದೆ. ಆದರೆ ಸ್ಥಳೀಯ ಗ್ರಾಮಸ್ಥರು ಈ ಲೈನ್‌ನ ಜತೆಗೆ ಶುದ್ಧೀಕರಿಸಿದ ನೀರು ಕೊಡುವ ಪೈಪ್‌ಲೈನ್‌(ಡೆಲಿವರಿ ಲೈನ್‌) ಕೂಡ ಅಳವಡಿಸಬೇಕು ಎಂದು ಆಗ್ರಹಿಸುತ್ತಿದ್ದು, ಆದರೆ ಅದಕ್ಕೆ ಪ್ರಸ್ತುತ ಮಂಜೂರಾಗಿರುವ ಯೋಜನೆಯಲ್ಲಿ ಅವಕಾಶವಿಲ್ಲ. ಅದಕ್ಕೆ ಹೊಸ ಯೋಜ ನೆಯ ಮಂಜೂರಾದ ಬಳಿಕ ಕಾಮಗಾರಿ ಆರಂಭವಾಗಬೇಕಷ್ಟೇ ಎಂಬುದು ಅಧಿಕಾರಿಗಳ ವಾದ.

ಪ್ರಸ್ತುತ ಕಚ್ಚಾ ನೀರು ಪೂರೈಕೆಗಾಗಿ ಸಜೀಪಮೂಡ ಗ್ರಾಮದ ಸುಭಾಷ್‌ನಗರ (ಬೇಂಕ್ಯ)ದಿಂದ ಮುಡಿಪು ವರೆಗೆ ಪೈಪ್‌ಲೈನ್‌ ಕಾಮಗಾರಿ ಪೂರ್ಣ ಗೊಂಡಿದೆ. ಆದರೆ ಆಲಾಡಿಯ ಜಾಕ್‌ವೆಲ್‌ನಿಂದ ಸುಭಾಷ್‌ನಗರದವರೆಗಿನ ಪೈಪ್‌ಲೈನ್‌ ಕಾಮಗಾರಿ ಬಾಕಿ ಇದೆ. ಪ್ರಸ್ತುತ ಗೊಂದಲದ ಪರಿಣಾಮ ಸಂಬಂಧಪಟ್ಟವರು ಇದನ್ನು ಅರ್ಧಕ್ಕೆ ಬಿಟ್ಟು ಬೇರೆ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ಗೊಂದಲಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ಕಲ್ಪಿಸಿದರಷ್ಟೆ ಹಾಲಿ ಆಗಿರುವ ಕಾಮಗಾರಿಗಳು ಕೂಡ ಫಲಪ್ರದವಾಗುತ್ತದೆ.

Advertisement

ಆಲಾಡಿ ಭಾಗದಲ್ಲಿ ಇರುವ ಬಹು ಗ್ರಾಮ ಕುಡಿಯುವ ನೀರಿನ ಯೋಜ ನೆಯ ಜಾಕ್‌ವೆಲ್‌ ನಿರ್ಮಿಸುವ ವೇಳೆ ಸ್ಥಳೀಯ ಗ್ರಾಮಗಳಿಗೂ ನೀರು ನೀಡು ತ್ತೇವೆ ಎಂದಿದ್ದರು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಅವರು ಕೊಡದೇ ಇರುವುದರಿಂದ ಪ್ರಸ್ತುತ ಗ್ರಾಮ ಸ್ಥರು ನಮ್ಮ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೆಯುಡಬ್ಲ್ಯುಎಸ್‌ಡಿಬಿ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಇದಕ್ಕೆ ಪರಿಹಾರವೇನು ಎಂದು ಕೇಳಿದರೆ ಅಧಿಕಾರಿಗಳ ಬಳಿಯೂ ಉತ್ತರವಿಲ್ಲದಾಗಿದೆ.

ಎಲ್ಲೆಲ್ಲಿಗೆ ನೀರು?
ಉಳ್ಳಾಲ ನಗರಸಭೆ, ಕೋಟೆಕಾರು ಪಟ್ಟಣ ಪಂಚಾಯತ್‌ ಸೇರಿದಂತೆ ಸುಮಾರು 25 ಗ್ರಾಮಗಳಿಗೆ ಈ ಯೋಜನೆಯಿಂದ ನೀರು ಪೂರೈಕೆಯಾಗಲಿದ್ದು, ಬಂಟ್ವಾಳದ ಸಜೀಪಮುನ್ನೂರು, ಮಂಚಿ, ವೀರಕಂಬ, ಬೋಳಂತೂರು, ಸಜೀಪನಡು, ಸಜೀಪಮೂಡ ಮೊದಲಾದ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಅಧಿಕಾರಿಗಳ ಈ ರೀತಿಯ ಭರವಸೆಗಳನ್ನು ಒಪ್ಪಿಕೊಳ್ಳಲು ಗ್ರಾಮಸ್ಥರು ಸಿದ್ಧರಿಲ್ಲ. ಹೀಗಾಗಿ ಡೆಲಿವರಿ ಲೈನ್‌ ಕೂಡ ಈಗಲೇ ಅಳವಡಿಸುವಂತೆ ಒತ್ತಾಯಗಳು ಕೇಳಿಬರುತ್ತಿದೆ.

ಬೇರೆ ಕಾಮಗಾರಿ
ಆಲಾಡಿಯ ಜಾಕ್‌ವೆಲ್‌ ಕಾಮಗಾರಿ ಪೂರ್ಣ ಗೊಂಡಿದ್ದು, ಪ್ರಾರಂಭದಿಂದ ಸುಭಾಷ್‌ ನಗರದವರೆಗೆ ಪೈಪ್‌ ಲೈನ್‌ ಬಾಕಿ ಇದೆ. ಸ್ಥಳೀಯ ಗ್ರಾಮಸ್ಥರು ಡೆಲಿವರಿ ಲೈನ್‌ಗೂ ಬೇಡಿಕೆ ಇಡುತ್ತಿದ್ದು, ಆದರೆ ಸದ್ಯ ಮಂಜೂರಾಗಿರುವ ಯೋಜನೆಯಲ್ಲಿ ಅದಕ್ಕೆ ಅವಕಾಶವಿಲ್ಲ. ಅದಕ್ಕೆ ಹೊಸ ಯೋಜನೆ ಮಂಜೂ ರಾದ ಬಳಿಕ ಕಾಮಗಾರಿ ನಡೆಸಬೇಕಿದೆ. ಹೀಗಾಗಿ ಸದ್ಯಕ್ಕೆ ನಾವು ಬೇರೆ ಕಾಮಗಾರಿ ನಿರ್ವಹಿಸುತ್ತಿದ್ದೇವೆ.
-ಶೋಭಾಲಕ್ಷ್ಮೀ, ಸಹಾಯಕ ಎಂಜಿನಿಯರ್‌, ಕೆಯುಡಬ್ಲ್ಯುಎಸ್‌ಡಿಬಿ, ಮಂಗಳೂರು

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next