Advertisement

ಟೆರರ್ ಬೇಸ್ ಮೆಂಟ್; ಕರ್ನಾಟಕದಲ್ಲಿ AQIS ಸಂಘಟನೆ ಇನ್ನೂ ಸಕ್ರಿಯ

06:10 AM Jan 10, 2018 | Team Udayavani |

ಬೆಂಗಳೂರು: ದೇಶದಲ್ಲಿ ಭಯೋತ್ಪಾದನಾ ಸಂಘಟನೆ ಹುಟ್ಟಡಗಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿರುವ ನಡುವೆಯೇ, ಕರ್ನಾಟಕ ಸಹಿತ ದಕ್ಷಿಣ ಭಾರತದಲ್ಲಿ ಅಲ್‌ ಕಾಯಿದಾ ಸಂಘಟನೆ ಎಕ್ಯೂಐಎಸ್‌ ಎಂಬ ಹೆಸರಿನಲ್ಲಿ ತನ್ನ ಕಬಂಧಬಾಹು ಚಾಚಿರುವುದು ಬೆಳಕಿಗೆ ಬಂದಿದೆ.  ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರದ ನ್ಯಾಯಾಲಯಗಳ ಆವರಣಗಳಲ್ಲಿ ಬಾಂಬ್‌ ಸ್ಫೋಟಿಸಿ ಸದ್ದು ಮಾಡಿದ್ದ ಈ ಸಂಘಟನೆ ಇನ್ನೂ ಸಕ್ರಿಯವಾಗಿದೆ.

Advertisement

ಅಲ್‌ ಕಾಯಿದಾ ಇಂಡಿಯನ್‌ ಸಬ್‌ ಕಾಂಟಿನೆಂಟ್‌ -ಎಕ್ಯೂ ಐಎಸ್‌ (ಅಲ್‌ ಕಾಯಿದಾ ಭಾರತೀಯ ಉಪಖಂಡ)ಸಂಘಟನೆ  “ಬೇಸ್‌ ಮೂವ್‌ಮೆಂಟ್‌’ ಹೆಸರಿನಲ್ಲಿ ತನ್ನ ಚಟುವಟಿಕೆಯನ್ನು ವಿಸ್ತರಿಸಿದೆ. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯ ವರದಿ ಮಾಹಿತಿ “ಉದಯವಾಣಿ’ಗೆ ಲಭ್ಯವಾಗಿದೆ. ಮೈಸೂರು ಕೋರ್ಟ್‌ ಬಾಂಬ್‌ ಸ್ಫೋಟದ ಆರೋಪಿಗಳ ವಿಚಾರಣೆ ಬಳಿಕ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ತೀರ್ಮಾನಕ್ಕೆ ಬಂದಿದೆ.

ತಲೆಮರೆಸಿಕೊಂಡಿರುವ ಆರೋಪಿಗಳು ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಮತ್ತೆ ಚಟುವಟಿಕೆ ವಿಸ್ತರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಸೂಕ್ತ ನಿರ್ದೇಶನಗಳನ್ನು ಆಯಾ ರಾಜ್ಯಗಳಿಗೆ ಕಳುಹಿಸಿದೆ. ಮುಜಿಬಿರ್‌ ಎಂಬ ಆರೋಪಿ ಮುಂಬಯಿಯಲ್ಲಿ  ತಲ್ಲಣ ಉಂಟು ಮಾಡಿಸಲು ನಡೆಸಿದ ವಿಫ‌ಲ ಯತ್ನದ ಬಗ್ಗೆಯೂ ವಿವರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಬಿಜೆಪಿ ಹಿರಿಯ ನಾಯಕ ಎಲ್‌.ಕೆ ಆಡ್ವಾಣಿ, ಮಾಜಿ ಭೂ ಸೇನಾ ಮುಖ್ಯಸ್ಥ  ಹಾಗೂ ಕೇಂದ್ರ ಸಚಿವ ವಿ.ಕೆ ಸಿಂಗ್‌, ವಿಎಚ್‌ಪಿ ನಾಯಕ  ಪ್ರವೀಣ್‌ ಭಾಯ್‌ ತೊಗಾಡಿಯಾ ಅವರನ್ನು ಟಾರ್ಗೆಟ್‌ ಮಾಡಿದ್ದಾರೆ ಎಂಬ ಮಾಹಿತಿ ಎನ್‌ಐಎಗೆ ಲಭಿಸಿದೆ.

ಎಕ್ಯೂಐಎಸ್‌ ದಕ್ಷಿಣ ಭಾರತದಲ್ಲಿ ನಡೆಸಿರುವ ಉಗ್ರಗಾಮಿ ಚಟುವಟಿಕೆಗಳು ಮತ್ತು ಮುಂಬಯಿ ಮೂಲಕ ದೇಶಾದ್ಯಂತ ನಡೆಸಲು ಉದ್ದೇಶಿಸಿದ್ದ  ಚಟುವಟಿಕೆ ಬಗ್ಗೆ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.  ಕೋರ್ಟ್‌ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೂ ಐವರನ್ನು ಬಂಧಿಸಲಾಗಿದ್ದು, ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ.

Advertisement

ಅವರ ಪತ್ತೆಗೂ ಎನ್‌ಐಎ ಬಲೆ ಬೀಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. 2000ರ ಅವಧಿಯಲ್ಲಿ ದ.ಭಾರತದಲ್ಲಿ ಕ್ರಿಯಾಶೀಲವಾಗಿದ್ದ ತಮಿಳುನಾಡು ಮೂಲದ “ಆಲ್‌ ಒಮಾ’ ಉಗ್ರ ಸಂಘಟನೆ ನಾಯಕ ಇಮಾಮ್‌ ಅಲಿ ಬೆಂಗಳೂರಿನಲ್ಲಿ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ಬಳಿಕ ತಟಸ್ಥವಾಗಿತ್ತು. 2015ರಲ್ಲಿ ಮತ್ತೆ ಚಿಗುರಿಕೊಂಡು ಎಕ್ಯೂಐಎಸ್‌ ಅಡಿಯಲ್ಲಿ ಬೇಸ್‌ಮೂವ್‌ಮೆಂಟ್‌ ಹೆಸರಿನಲ್ಲಿ ಕಾರ್ಯತತ್ಪರವಾಯಿತು.

ಈ ಸಂಘಟನೆಯ ಅಸ್ತಿತ್ವದ ಬಗ್ಗೆ  ಮೈಸೂರು, ನೆಲ್ಲೂರು, ಸೇರಿದಂತೆ ವಿವಿಧೆಡೆಯ ನಾಲ್ಕು ಕೋರ್ಟ್‌ಗಳ ಆವರಣಗಳಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಗಳಿಂದ ಸಾಬೀತಾಗಿದೆ. ಈ ಬಗ್ಗೆ ಎನ್‌ಐಎ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಈ ಪ್ರಕರಣದ ಬೆನ್ನತ್ತಿಹೋದ ಎನ್‌ಐಎ ಅಧಿಕಾರಿಗಳು ಸಂಘಟನೆಯ ಮುಖ್ಯಸ್ಥ ಸೇರಿ 5 ಮಂದಿಯನ್ನು ವಿಚಾರಣೆ ಗೊಳಪಡಿಸಿ ಅವರ ಬಳಿಯಿದ್ದ ಪೆನ್‌ಡ್ರೈವ್‌, ಮೊಬೈಲ್‌ ಫೋನ್‌ ಸಹಿತ ಹಲವು ಮಹಣ್ತೀದ ದಾಖಲೆಗಳನ್ನು ಜಫ್ತಿ ಮಾಡಿದಾಗ ಬೆಚ್ಚಿಬೀಳಿಸುವ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.

ನಿಷೇಧಿತ ಉಗ್ರ ಸಂಘಟನೆ  “ಆಲ್‌ ಮುಝೀದ್‌ ಫೋರ್ಸ್‌’ (ಎಎಂಎಫ್) ಕೂಡ  ಎಕ್ಯೂಐಎಸ್‌ ನಿರ್ದೇಶನದಲ್ಲಿ “ಬೇಸ್‌ ಮೂವ್‌ಮೆಂಟ್‌’ ತೆಕ್ಕೆಗೆ ಸೇರಿಕೊಂಡ ಬಗ್ಗೆಯೂ ಉಲ್ಲೇಖವಿದೆ. 2011ರಿಂದ 2014ರವರೆಗೆ ಆ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಧುರೈಯ ಇಸ್ಲಾಮೀಪುರಂನಲ್ಲಿ ಇಸ್ಲಾಮಿಕ್‌  ಲೈಬ್ರರಿ ನಡೆಸುತ್ತಿದ್ದ ನೈನಾರ್‌ ಅಬ್ಟಾಸ್‌ ಅಲಿ ಎಎಂಎಫ್ನಿಂದ ಹೊರಬಂದು ದಕ್ಷಿಣ ಭಾರತದಲ್ಲಿ ತನ್ನದೇ ಉಗ್ರಸಂಘಟನೆ ಸ್ಥಾಪಿಸುವ ನಿರ್ಧಾರಕ್ಕೆ ಬಂದಿದ್ದು ಎಕ್ಯೂಐಎಸ್‌ ವಿಸ್ತರಣೆಗೆ ಅನುಕೂಲವಾಗಿತ್ತು.  ಆತನೆ, ನೂತನ ಸಂಘಟನೆಗೆ “ಬೇಸ್‌ ಮೂವ್‌ಮೆಂಟ್‌’ ಎಂದು ಹೆಸರಿಟ್ಟುಕೊಂಡಿದ್ದ ಎಂದು ಎನ್‌ಐಎ ಹೇಳಿದೆ.

2011ರಲ್ಲಿ ಉಸಮಾ ಬಿನ್‌ ಲಾದನ್‌ ಹತನಾದ ಬಳಿಕ ಪುನಶ್ಚೇತನಗೊಂಡಿದ್ದ ಎಕ್ಯೂಐಎಸ್‌ ಆತನ ಚಿತ್ರವನ್ನೇ ತನ್ನ ಲೋಗೋ ಆಗಿ ಬಳಸಿಕೊಂಡಿದೆ.

– ನವೀನ್‌ ಅಮ್ಮೆಂಬಳ/ ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next