ದುಬೈ: ಇಂಟರ್ ನ್ಯಾಶನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಸಂಧ್ಯಾ ಕ್ರಿಯೇಶನ್ಸ್ ಇವೆಂಟ್ ನೆಟ್‌ವರ್ಕ್ ಟೀಮ್ ಯುಎಇ ಸಂಸ್ಥೆಗಳ ಸಹಯೋಗದೊಂದಿಗೆ ಚನ್ನಪಟ್ಟಣ ಕಲ್ಪಶ್ರೀ ಕಲಾ ಸಂಸ್ಥೆಯ ಸಹಕಾರದಲ್ಲಿ “ಅಂತಾರಾಷ್ಟ್ರೀಯ ಸಾಂಸ್ಕೃತಿಕೋತ್ಸವ’ ದುಬೈನ ಅಲ್ ಕುಸಿಸ್‌ನಲ್ಲಿರುವ ಫಾರ್ಚೂನ್ ಬಬಲ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೆ. 13ರಂದು ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕದ ಸಿ.ಟಿ.-ಜಿ.ಎಸ್.ಟಿ. ಜಂಟಿ ಆಯುಕ್ತ ಡಾ| ಎಸ್. ರಾಮಾನುಜ ಅವರು, ದೇಶ ದೇಶಗಳ ನಡುವಿನ ಗಡಿಗಳೇ ಮಾಸಿಹೋಗಿವೆ ಎನ್ನುವಷ್ಟರ ಮಟ್ಟಿಗೆ ಜಗತ್ತು ಆರ್ಥಿಕವಾಗಿ ಹಾಗೂ ವೈಜ್ಞಾನಿಕವಾಗಿ ಮುಂದುವರಿದಿದೆ. ಆದರೆ ಮನಸ್ಸು ಮನಸ್ಸುಗಳ ನಡುವಿನ ಬಾಂಧವ್ಯದ ಗಡಿ ಮೃದು ಆಗುವುದರ ಬದಲಾಗಿ ಕೋಟೆಯಾಗುತ್ತಿರುವುದು ಖೇದಕರ ಎಂದರು.
ಐಸಿಎಫ್‌ಸಿಐ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂಡಿಯಾ ಆ್ಯತ್ಲೆಟಿಕ್ ಫೆಡರೇಶನ್ ಅಧ್ಯಕ್ಷ ಡಾ| ಕೆ.ಬಿ. ನಾಗೂರ್ ಬಿಜಾಪುರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ನಿವೃತ್ತ ಐಎಎಸ್ ಅಧಿಕಾರಿ ಡಾ| ಡಿ.ಎಸ್. ವಿಶ್ವನಾಥ್, ಬಹ್ರೈನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ರಾಜಕುಮಾರ್ ಭಾಸ್ಕರ್, ಸೆಂಟ್ ಅಧ್ಯಕ್ಷ ಶೋಧನ್ ಪ್ರಸಾದ ಅತ್ತಾವರ, ಚನ್ನಪಟ್ಟಣದ ಕಲ್ಪಶ್ರೀ ನಿರ್ದೇಶಕ ಎಂ.ಸಿ. ಸುಜೇಂದ್ರ ಬಾಬು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಿಟಿ ಉಪ ಆಯುಕ್ತ ಹಾಗೂ ಲೇಖಕ ಮಹಮದ್ ರಫೀ ಪಾಶ ಕನ್ನಡ ನಾಡು ನುಡಿ ಮತ್ತು ಅಳಿವಿನಂಚಿನ ಭಾಷೆಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸಾಧನಾಶೀಲ ವ್ಯಕ್ತಿಗಳಾದ ಸುಗಮ ಸಂಗೀತ ಗಾಯಕ ವೆಂಕಟಮೂರ್ತಿ ಶಿರೂರು, ಬಹುಮುಖ ಪ್ರತಿಭೆ ಪ್ರಭಾ ಸುವರ್ಣ ಮುಂಬಯಿ, ಯಶಸ್ವಿ ಉದ್ಯಮಿ ರಮೇಶ್ ಸಂಪಂಗಿ ಹೈದರಾಬಾದ್ ಅವರಿಗೆ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.