ಜೆರುಸಲೇಂ: ಪ್ಯಾಲೆಸ್ತೇನ್ ನ ಜೇನಿನ್ ಪಟ್ಟಣದ ಮೇಲೆ ಇಸ್ರೇಲ್ ದಾಳಿ ಬಗ್ಗೆ ವರದಿ ಮಾಡಲು ತೆರಳಿದ್ದ ಅಲ್ ಜಜೀರಾ ವಾಹಿನಿಯ ಹಿರಿಯ ಪತ್ರಕರ್ತೆ ಶಿರೀನ್ ಅಬು ಅಕ್ ಲೇಹಾ ಅವರನ್ನು ಇಸ್ರೇಲ್ ಪಡೆಗಳು ಬುಧವಾರ (ಮೇ 11) ಬೆಳಗ್ಗೆ ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಪ್ಯಾಲೆಸ್ತೇನ್ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ದೇಶದ್ರೋಹ ಕಾಯ್ದೆಗೆ ತಡೆ; ಜೈಲಿನಲ್ಲಿದ್ದವರಿಗೆ ರಿಲೀಫ್, ಸುಪ್ರೀಂಕೋರ್ಟ್ ಆದೇಶದಲ್ಲಿ ಏನಿದೆ?
ಶಿರೀನ್ ಪ್ಯಾಲೆಸ್ತೇನ್ ನಲ್ಲಿರುವ ಅರಬ್ ಭಾಷೆಯ ಚಾನೆಲ್ ನ ಜನಪ್ರಿಯ ವರದಿಗಾರ್ತಿಯಾಗಿದ್ದು, ಈಕೆಯನ್ನು ಇಸ್ರೇಲ್ ಪಡೆಗಳು ಗುಂಡಿಟ್ಟು ಕೊಂದಿರುವುದಾಗಿ ವರದಿ ವಿವರಿಸಿದೆ.
ಜೆರುಸಲೇಂ ಮೂಲದ ಅಲ್ ಖುದ್ಸ್ ದಿನಪತ್ರಿಕೆಯ ಮತ್ತೊಬ್ಬ ಪ್ಯಾಲೆಸ್ತೇನ್ ಪತ್ರಕರ್ತ ಕೂಡಾ ದಾಳಿಯಲ್ಲಿ ಗಾಯಗೊಂಡಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಇಸ್ರೇಲ್ ಮಿಲಿಟರಿ ಪಡೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಇಸ್ರೇಲ್ ಪಡೆಗಳು ಪಶ್ಚಿಮ ದಂಡೆಯಲ್ಲಿರುವ ಆಕ್ರಮಿತ ಜೇನಿನ್ ಪಟ್ಟಣದ ಮೇಲೆ ದಿನಂಪ್ರತಿ ದಾಳಿ ನಡೆಸುತ್ತಲೇ ಇದ್ದಿರುವುದಾಗಿ ವರದಿ ತಿಳಿಸಿದೆ.
ಜೇನಿನ್ ಪಟ್ಟಣದಲ್ಲಿ ಮುಖ್ಯವಾಗಿ ನಿರಾಶ್ರಿತರ ಶಿಬಿರ ಹೊಂದಿದ್ದು, ಇದು ಉಗ್ರರ ಭದ್ರಕೋಟೆ ಎಂದೇ ದೀರ್ಘಕಾಲದಿಂದ ಕರೆಯಾಗುತ್ತಿದೆ. ಜೇನಿನ್ ಪಟ್ಟಣ ಅಂದಾಜು 40,000 ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಇದ್ದು, ಇದು ಪ್ಯಾಲೆಸ್ತೇನ್ ಆಡಳಿತಕ್ಕೆ ಒಳಪಟ್ಟಿದೆ.