Advertisement

ನೆರವಿನ ನಿರೀಕ್ಷೆಯಲ್ಲಿ ಅಕ್ಷಯ ನೆರವು ಕೇಂದ್ರ

09:49 PM Dec 27, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳ ಹಾಗೂ ನಿರ್ಗತಿಕ ಅನಾಥರಿಗೆ ದಾನಿಗಳಿಂದ ಪೌಷ್ಟಿಕ ಆಹಾರ, ಹಣ್ಣು ಹಂಪಲು, ಅಗತ್ಯ ಬಟ್ಟೆ, ಸಮವಸ್ತ್ರ ಸೇರಿದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ವಿತರಿಸಲು ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ವಿಶೇಷ ಕಾಳಜಿ ವಹಿಸಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿದ್ದ ಅಕ್ಷಯ ನೆರವು ಕೇಂದ್ರ ಆರಂಭಗೊಂಡ ಮೂರು ತಿಂಗಳಿಗೆ ನಿರ್ವಹಣೆ ಇಲ್ಲದೇ ಅನಾಥವಾಗಿದೆ.

Advertisement

ಆ.14 ರಂದು ಉದ್ಘಾಟನೆ: ಬರದ ಜಿಲ್ಲೆಯಲ್ಲಿ ನರೇಗಾ ಯೋಜನೆಗೆ ಚುರುಕು ಮೂಡಿಸಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಲ್ಯಾಣಿಗಳ ಪುನಶ್ಚೇತನದ ಮೂಲಕ ಜಿಲ್ಲೆಯ ಅಂತರ್ಜಲ ಅಭಿವೃದ್ಧಿಗೆ ಮಳೆಕೊಯ್ಲು ಪದ್ಧತಿ ಅನುಷ್ಠಾನದತಂಹ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಗಮನ ಸೆಳೆದಿದ್ದರು. ಜಿಲ್ಲಾಸ್ಪತ್ರೆಗೆ ಬರುವ ನಿರ್ಗತಿಕ ಬಡ ರೋಗಿಗಳಿಗೆ ಸ್ಪಂದಿಸಲು ದಾನಿಗಳ ಸಹಕಾರರಿಂದ ಅಕ್ಷಯ ನೆರವು ಕೇಂದ್ರವನ್ನು ಕಳೆದ ಆಗಸ್ಟ್‌ 14 ರಂದು ಜಿಲ್ಲಾಸ್ಪತ್ರೆಯಲ್ಲಿ ಉದ್ಘಾಟಿಸಿ ಕೇಂದ್ರಕ್ಕೆ ಸಾಕಷ್ಟು ದಿನಸಿ ಪದಾರ್ಥ ಹಾಗೂ ಬಟ್ಟೆಗಳನ್ನು ಖುದ್ದು ದಾನವಾಗಿ ನೀಡಿದ್ದರು.

ಆದರೆ ಕೇಂದ್ರಕ್ಕೆ ದಾನಿಗಳ ಸಹಕಾರ ಸಿಗದೇ ಮೂಲೆಗುಂಪಾಗಿದ್ದು, ಕೇಂದ್ರದಲ್ಲಿದ್ದ ಹಣ್ಣು ಹಂಪಲು ಸಂಗ್ರಹಕ್ಕೆ ಇಟ್ಟಿದ್ದ ಫ್ರಿಡ್ಜ್, ದಿನಸಿ ಪದಾರ್ಥ ಹಾಗೂ ದಾನಿಗಳು ಕೊಡುವ ಸಮವಸ್ತ್ರ ಸಂಗ್ರಹಿಸಿ ಇಡಲು ಇಟ್ಟಿರುವ ಅಲ್ಮೇರಾ, ಕುರ್ಚಿ, ಟೇಬಲ್‌ಗ‌ಳು ಧೂಳು ಹಿಡಿಯುತ್ತಿವೆ. ಹಿಂದಿನ ಜಿಲ್ಲಾಧಿಕಾರಿ ಉದ್ದೇಶಿತ ಗುರಿ ಈಡೇರಿಸುವಲ್ಲಿ ಜಿಲ್ಲೆಯ ಇಂದಿನ ಆಡಳಿತ ವ್ಯವಸ್ಥೆ ಸೂಕ್ತ ರೀತಿಯಲ್ಲಿ ಆಸಕ್ತಿ ತೋರದಿರುವುದು ಬಡವರಿಗೆ ನೆರವಾಗಬೇಕಿದ್ದ ಅಕ್ಷಯ ನೆರವು ಕೇಂದ್ರ ದಾನಿಗಳ ನೆರವಿಗಾಗಿ ಎದುರು ನೋಡುತ್ತಿದೆ.

ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಅನುಕೂಲವಾಗಲಿ ಹಾಗೂ ಗುಣಮಟ್ಟದ ಪೌಷ್ಟಿಕ ಆಹಾರ ಕೂಡ ಸೇವಿಸದ ಬಗ್ಗೆ ಅರಿತು ಅನಿರುದ್ಧ್ ಶ್ರವಣ್‌ ಅವರು, ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಅನುಕೂಲವಾಗಲು ಅಕ್ಷಯ ನೆರವು ಕೇಂದ್ರ ತೆರೆಯುವ ಚಿಂತನೆ ನಡೆಸಿ ಆ ಮೂಲಕ ದಾನಿಗಳ ಸಹಕಾರ ಪಡೆದು ಕೇಂದ್ರದ ಮೂಲಕ ನೆರವು ಒದಗಿಸಲು ಬಟ್ಟೆ, ಉಡುಪು, ಹಣ್ಣು ಹಂಪಲು, ಹಾಲು, ಬ್ರೆಡ್‌ ಹಾಗೂ ದವಸ ಧಾನ್ಯಗಳನ್ನು ವಿತರಿಸುವ ವ್ಯವಸ್ಥೆ ಮಾಡಿತ್ತು.

ವಿಶೇಷವಾಗಿ ಸೆಲೆಬ್ರಿಟಿಗಳ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ಅಥವಾ ಗಣ್ಯರು ತಮ್ಮ ಹುಟ್ಟುಹಬ್ಬದಂದು ರೋಗಿಗಳಿಗೆ ಹಣ್ಣು ಹಂಪಲು ಮತ್ತಿತರ ಸಾಮಗ್ರಿಗಳನ್ನು ವಿತರಿಸಲು ಮುಂದಾದರೆ ಈ ಅಕ್ಷಯಾ ನೆರವು ಕೇಂದ್ರದ ಮೂಲಕ ಬಡ ರೋಗಿಗಳಿಗೆ ತಲುಪಿಸಲು ಕ್ರಮ ವಹಿಸಲಾಗಿತ್ತು. ಇದರಿಂದ ಹಲವು ತಿಂಗಳ ಕಾಲ ಜಿಲ್ಲಾಸ್ಪತ್ರೆಗೆ ಬರುವ ಬಹುತೇಕ ರೋಗಿಗಳ ಪೈಕಿ ಬಡವರು, ರೈತಾಪಿ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಿತ್ತು. ಆದರೆ ಇದೀಗ ಸದ್ದಿಲ್ಲದೇ ಅಕ್ಷಯ ನೆರವು ಕೇಂದ್ರದ ಬಾಗಿಲು ಮುಚ್ಚಿದೆ.

Advertisement

ದಾನ ಮಾಡಲು 9902745010 ಕರೆ ಮಾಡಿ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ಬಡ ರೋಗಿಗಳಿಗೆ ಅನುಕೂಲವಾಗಲು ಅಕ್ಷಯ ನೆರವು ಕೇಂದ್ರಕ್ಕೆ ದಾನ ಮಾಡಲು ಬಯಸುವ ಸಂಘ, ಸಂಸ್ಥೆಗಳು ಅಥವಾ ದಾನಿಗಳು ದಾನ ಮಾಡಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ಆವರಣ, ಜಿಲ್ಲಾಸ್ಪತ್ರೆಯ 9902745010 ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು.

ಅಕ್ಷಯ ನೆರವು ಕೇಂದ್ರದಲ್ಲಿ ಹಣ ಸ್ವೀಕರಿಸುವುದಿಲ್ಲ. ಬದಲಾಗಿ ದಾನಿಗಳಿಂದ ಬಡ ರೋಗಿಗಳಿಗೆ ಅನುಕೂಲವಾಗುವಂತಹ ಧರಿಸಲು ಯೋಗ್ಯ ಇರುವತಂಹ ಬಟ್ಟೆಗಳನ್ನು, ವಿಶೇಷವಾಗಿ ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿದಂತೆ ಒಂದೆರೆಡು ದಿನಕ್ಕೆ ಊಟ, ಹಣ್ಣು ಹಂಪಲು, ಮಕ್ಕಳ ಆಟಿಕೆ ವಸ್ತುಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ದಾನವಾಗಿ ನೀಡಬಹುದು.

ಜಿಲ್ಲಾಸ್ಪತ್ರೆ ನಿವಾಸಿ ವೈದ್ಯರು ಹೇಳುವುದೇನು?: ಅಕ್ಷಯ ನೆರವು ಕೇಂದ್ರ ಬಾಗಿಲು ಮುಚ್ಚಿರುವ ಕುರಿತು ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್‌ರನ್ನು ಉದಯವಾಣಿ ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ದಾನಿಗಳು ಕೊಟ್ಟರೆ ನಾವು ರೋಗಿಗಳಿಗೆ ವಿತರಣೆ ಮಾಡುತ್ತೇವೆ. ಆದರೆ ದಾನಿಗಳೇ ಮುಂದೆ ಬರುತ್ತಿಲ್ಲ. ಸ್ವಲ್ಪ ಪ್ರಚಾರ ಮಾಡಿದರೆ ದಾನಿಗಳು ಮುಂದೆ ಬರಬಹುದು ಎಂದರು.

ನಮ್ಮಲ್ಲಿನ ವೈದ್ಯರು ಕೊಟ್ಟಾಗ ನಾವು ರೋಗಿಗಳಿಗೆ ಕೊಡುತ್ತೇವೆ. ಹಿಂದಿನ ಜಿಲ್ಲಾಧಿಕಾರಿಗಳು ಉದ್ದೇಶವೇ ಬೇರೆ ಇತ್ತು. ಜಿಲ್ಲಾಡಳಿತದಿಂದಲೇ ಬಡವರಿಗೆ ಪಡಿತರ, ಹಣ್ಣು ಹಂಪಲು ಕೊಡಲು ವ್ಯವಸ್ಥೆ ಮಾಡಿದ್ದರು ಆಗ. ಜೊತೆಗೆ ಸರ್ಕಾರದಿಂದ ಮುಜರಾಯಿ ದೇವಸ್ಥಾನಗಳಿಂದ ಬರುವ ಅನುದಾನದಲ್ಲಿ ಕನಿಷ್ಠ ಹಣ್ಣು ಹಂಪಲು ಕೊಡಲು ವ್ಯವಸ್ಥೆ ಮಾಡೋಣ ಎಂದಿದ್ದರು. ಆದರೆ ಅವರ ಹಂತದಲ್ಲಿಯೇ ನಿಂತು ಹೋಯಿತು ಎಂದು ತಿಳಿಸಿದರು.

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next