Advertisement

ಬರಿಗಾಲಲ್ಲಿ ಪದ್ಮಶ್ರೀ ಸ್ವೀಕರಿಸಿದ ‘ಅಕ್ಷರ ಸಂತ’ಹರೇಕಳ ಹಾಜಬ್ಬ

03:49 PM Nov 08, 2021 | Team Udayavani |

ಮಂಗಳೂರು : ಅನಕ್ಷರಸ್ಥನಾಗಿದ್ದರು ನೂರಾರು ಮಂದಿಗೆ ಶಿಕ್ಷಣ ದೊರಕುವಲ್ಲಿ ಕಾರಣರಾದ ಅಕ್ಷರ ಸಂತನೆಂದೇ ಜನಮಾನಸದಲ್ಲಿ ಮನ್ನಣೆ ಗಳಿಸಿರುವ ಹರೇಕಳ ಹಾಜಬ್ಬ ಅವರು ಸೋಮವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ.

Advertisement

ವಿಶೇಷವೆಂದರೆ, ಹಾಜಬ್ಬ ಅವರು ಬರಿಗಾಲಿನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೆರೆದಿದ್ದ ಎಲ್ಲಾ ಗಣ್ಯರ ಗಮನ ಸೆಳೆದರು.

ಮಂಗಳೂರು ತಾಲೂಕಿನ ಹರೇಕಳ ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಹಾಜಬ್ಬ ಅವರು ಬಡತನದಿಂದ ಶಾಲೆಯ ಮೆಟ್ಟಿಲು ಹತ್ತಲಾರದೆ ಜೀವನೋಪಾಯಕ್ಕೆ ಬುಟ್ಟಿಯಲ್ಲಿ ಕಿತ್ತಳೆ ಮಾರುತ್ತಿದ್ದರು. ಶಿಕ್ಷಣ ಇಲ್ಲದಿದ್ದರೆ ಮನುಷ್ಯ ಎದು ರಿಸಬೇಕಾದ ಸಂಕಷ್ಟದ ಪರಿಸ್ಥಿತಿಯನ್ನು ಸ್ವತಃ ಅನುಭವಿಸಿದರು. ತಾನು ಶಿಕ್ಷಣದಿಂದ ವಂಚಿತನಾದರೂ ಮುಂದಿನ ಪೀಳಿಗೆ ಇಂತಹ ಪರಿಸ್ಥಿತಿ ಎದುರಿಸ ಬಾರದು. ಅದಕ್ಕೆ ಏನನ್ನಾದರೂ ಮಾಡಬೇಕು ಎಂಬ ಅಚಲ ನಿರ್ಧಾರ ಕೈಗೊಂಡು ಅವಿರತ ಶ್ರಮದಿಂದ ಹರೇಕಳ ಎಂಬ ಗ್ರಾಮೀಣ ಪ್ರದೇಶದಲ್ಲಿ ಶಾಲೆಯ ನಿರ್ಮಾಣಕ್ಕೆ ಕಾರಣರಾದರು.

ಕಡು ಬಡತನಡಾ ನಡುವೆ ಕಿತ್ತಳೆ ಮಾರಾಟದ ಮಧ್ಯೆ ಶಾಲೆಗಾಗಿ ಕಚೇರಿಗಳಿಗೆೆ ಅಲೆದಾಡಿದರು. 2000ನೇ ಜೂ.17 ರಂದು ಹರೇಕಳ ನ್ಯೂಪಡುಗೆ ಸರಕಾರಿ ಶಾಲೆ ಮಂಜೂರು ಮಾಡುವಲ್ಲಿ ಯಶಸ್ವಿಯಾದರು. ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ಪಕ್ಕದ ಬೋರಲುಗುಡ್ಡದ 40 ಸೆಂಟ್ಸ್‌ ಜಾಗ ಖರೀದಿಸಲು ಕಿತ್ತಳೆ ವ್ಯಾಪಾರ ಮಾಡಿ, ತೀರಾ ಕಷ್ಟದಲ್ಲಿ ಉಳಿತಾಯ ಮಾಡಿದ್ದ 25,000 ರೂ. ನೀಡಿದರು. ಇತರ ಹಣವನ್ನು ದಾನಿಗಳಿಂದ ಸಂಗ್ರಹಿಸಲಾಯಿತು. ಶಾಲೆಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ದಾನಿಗಳ ನೆರವಿನೊಂದಿಗೆ ಶಾಲೆಗೆ ಹಾಜಬ್ಬರು ಒದಗಿಸಿದರು. ಅಂದಿನಿಂದ ಇಂದಿನ ತನಕ ತನ್ನನ್ನು ಶಾಲೆಗೆ ಅರ್ಪಿಸಿಕೊಂಡು ಅಕ್ಷರ ಸಂತನಾಗಿ ಜನ ಮಾನಸದಲ್ಲಿ ನೆಲೆಯಾದರು.

ಹಾಜಬ್ಬರ ಅವಿರತ ಶ್ರಮದಿಂದ ಇದೀಗ ಕಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ ಮಟ್ಟಕ್ಕೆ ತಲುಪಿದ್ದು, ಇದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸು ಹಾಜಬ್ಬರದ್ದು.

Advertisement

ತನಗೆ ಬಂದ ಲಕ್ಷಾಂತರ ರೂ. ಪ್ರಶಸ್ತಿ ಮೊತ್ತವನ್ನು ತನ್ನ ಸ್ವಂತ ಸುಖಕ್ಕಾಗಿ ಬಳಸದ ಹಾಜಬ್ಬರು . ಶಾಲೆಯ ಅಭಿವೃದ್ಧಿಗಾಗಿಯೇ ವಿನಿಯೋಗಿಸಿದರು. ಸರಕಾರಿ ಶಾಲೆಗಾಗಿ ತನ್ನ ಎಲ್ಲವನ್ನೂ ಮುಡುಪಾಗಿಟ್ಟರು. ಸುಮಾರು 70 ಲಕ್ಷ ರೂ. ದೇಣಿಗೆ- ಅನುದಾನವನ್ನು ವಿವಿಧ ಮೂಲಗಳಿಂದ ಒದಗಿಸಿ ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ತನಗೆ ದೊರೆತ ಪ್ರಶಸ್ತಿಗಳ ನಗದು ಮೊತ್ತವನ್ನು ಶಾಲೆಯ ಉನ್ನತಿಗೆ ವ್ಯಯಿಸಿ ಮಾದರಿಯಾಗಿದ್ದಾರೆ. ಶಾಲೆಗೆ ಒಂದು ಎಕರೆ ಮೂವತ್ತ ಮೂರೂವರೆ ಸೆಂಟ್ಸ್‌ ಜಮೀನು ಪಹಣಿ ಮಾಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next