Advertisement

ಅಕ್ರಮ-ಸಕ್ರಮ ಅರ್ಜಿ ಸ್ವೀಕಾರ ಆರಂಭ

09:18 AM Nov 19, 2018 | |

ಸುಳ್ಯ: ಸರಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಸಕ್ರಮಗೊಳಿಸಲು ಸರಕಾರ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದಿದ್ದು, ನಮೂನೆ-57ರಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಿದೆ.

Advertisement

1964ರ ಕಲಂ 94ಎ(4)ಗೆ 2018 ಮಾ.17ರಂದು ತಿದ್ದುಪಡಿ ತರಲಾಗಿತ್ತು. ಅರ್ಜಿ ಸ್ವೀಕರಿಸಿ ಇತ್ಯರ್ಥ ಪಡಿಸುವ ಬಗ್ಗೆ ಅ.25ರಂದು ಮಾರ್ಗಸೂಚಿ ಪ್ರಕಟಿಸಿತ್ತು. ಈಗ ಅರ್ಜಿ ಸಲ್ಲಿಕೆ ಆರಂಭಗೊಂಡಿದೆ.

ಈಗಾಗಲೇ ನಮೂನೆ-50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಿದವರು ನಮೂನೆ 57ರಲ್ಲಿ ಸಲ್ಲಿಸುವಂತಿಲ್ಲ. ಈ ತನಕ ಅರ್ಜಿ ಸಲ್ಲಿಸದೆ ಇರುವ ಅನಧಿಕೃತ ಸಾಗುವಳಿದಾರರು ಮಾತ್ರ ಅರ್ಹತೆ ಹೊಂದಿದ್ದಾರೆ. 2005 ಜ.1ಕ್ಕಿಂತ ಮೊದಲು ಅನಧಿಕೃತ ಅನುಭೋಗ ಹೊಂದಿರುವವರು ಜಮೀನು ಸಕ್ರಮಕ್ಕೆ 2019 ಮಾ.16ರೊಳಗೆ ಅರ್ಜಿ ಸಲ್ಲಿಸಲು ಸಮಯ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?
ನಮೂನೆ 57ರಲ್ಲಿ ಮಾಹಿತಿ ತುಂಬಿ, ಅರ್ಜಿ ಶುಲ್ಕ 100 ರೂ. ಪಾವತಿಸಿ ತಹಶೀಲ್ದಾರ್‌ಗೆ ಸಲ್ಲಿಸಬೇಕು. ಇವನ್ನು ಜ್ಯೇಷ್ಠತೆಗೆ ಅನುಗುಣವಾಗಿ ನಮೂನೆ 58ರ ರಿಜಿಸ್ಟರ್‌ನಲ್ಲಿ ನಮೂದಿಸಿ ಪರಿಶೀಲಿಸಲಾಗುತ್ತದೆ. ಈ ಹಿಂದೆ ಕಲಂ 94 ಎ ಅಡಿಯಲ್ಲಿ ನಮೂನೆ 50 ಹಾಗೂ ಕಲಂ 94ಬಿ ಅಡಿಯಲ್ಲಿ ನಮೂನೆ 53ರ ಅರ್ಜಿಗಳನ್ನು ಸಲ್ಲಿಸಿದವರು ಹೊಸದಾಗಿ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಅವು ಅರ್ಹವಾಗದು.

25 ವರ್ಷ ಪರಭಾರೆ ಇಲ್ಲ
ಈ ಕಾಯಿದೆಯಡಿ ಸಕ್ರಮಗೊಳಿಸಿದ ಜಮೀನನ್ನು 25 ವರ್ಷ ಕಾಲ ಪರಭಾರೆ ಮಾಡುವಂತಿಲ್ಲ. ವ್ಯವಸಾಯೇತರ ಉದ್ದೇಶಕ್ಕೆ ಬಳಸುವಂತಿಲ್ಲ. ಸಕ್ರಮಗೊಳಿಸುವ ಭೂಮಿ ನಗರದಿಂದ ಇಂತಿಷ್ಟು ದೂರದಲ್ಲಿ ಇರಬೇಕು ಎಂಬ ನಿಯಮ ಇದ್ದು, ಅಂತಹ ಜಮೀನಿಗೆ ಮಾತ್ರ ಸಕ್ರಮ ಅವಕಾಶ ಇದೆ. ಮಂಗಳೂರು ನಗರದಿಂದ 10 ಕಿ.ಮೀ., ನಗರಸಭೆ ವ್ಯಾಪ್ತಿಯಿಂದ 5 ಕಿ.ಮೀ., ಎಲ್ಲ ಪುರಸಭೆ, ಪ.ಪಂ. ವ್ಯಾಪ್ತಿಯಿಂದ 3 ಕಿ.ಮೀ. ಅಂತರದಲ್ಲಿ ಇರಬೇಕು. ನಿರ್ಬಂಧಿತ ಅಂತರವನ್ನು ನಿರ್ಧರಿಸುವಾಗ ಕರ್ನಾಟಕ ಜನರಲ್‌ ಕ್ಲಾಸ್‌ ಕಾಯಿದೆ 1899ರ ಕಲಂ 11  ಮೆಶರ್‌ವೆುಂಟ್‌ ಆಫ್‌ ಡಿಸ್ಟೆನ್ಸ್‌ ನಡಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನೇರ ಅಂತರ ಅಳತೆ ಮಾಡಿ ಸಕ್ಷಮ ಪ್ರಾಧಿಕಾರ ಭೂಮಾಪನ ಇಲಾಖೆಯಿಂದ ನಿರ್ವಹಿಸಿ ದೃಢೀಕೃತ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು. ಯಾವ ಜಮೀನು ಸಕ್ರಮಗೊಳಿಸಬಾರದು/ಬಹುದು ಎಂಬ ಬಗ್ಗೆಯೂ ನಿಯಮ ಇದೆ.

Advertisement

ಅರ್ಜಿಯ ಜತೆ ದಾಖಲೆ ಬೇಕು
ದ.ಕ. ಮತ್ತು ಉಡುಪಿಯಲ್ಲಿ ಅರ್ಜಿ ಸಲ್ಲಿಕೆ ಆರಂಭ ಗೊಂಡಿದೆ. ನಮೂನೆಗಳನ್ನು ಖಾಸಗಿ ಅರ್ಜಿ ವಿತರಣೆ ಕೇಂದ್ರ
ಗಳಿಂದ ಪಡೆದು ಭರ್ತಿ ಮಾಡಿ ತಾಲೂಕು ಕಚೇರಿಗೆ ಸಲ್ಲಿಸ ಬೇಕು. ಜತೆಗೆ 100 ರೂ. ಶುಲ್ಕ, ಪಡಿತರ ಚೀಟಿ ಮತ್ತು ಆಧಾರ್‌ ಜೆರಾಕ್ಸ್‌, ಜಮೀನಿನ ಸರಕಾರಿ ಪಹಣಿ ಪ್ರತಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಆರಂಭಗೊಂಡಿದೆ. 2005ರ ಜ.1ಕ್ಕಿಂತ ಮೊದಲಿನ ಅನಧಿಕೃತ ಸಾಗುವಳಿ ಜಮೀನು ಸಕ್ರಮಕ್ಕೆ 2019ರ ಮಾ.16ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಈ ಹಿಂದೆ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿದ್ದರೆ ಮತ್ತೆ ಅವಕಾಶ ಇಲ್ಲ.
ಬಿ.ಎಂ. ಕುಂಞಮ್ಮ , ತಹಶೀಲ್ದಾರ್‌, ಸುಳ್ಯ

*ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next