ಜಮಖಂಡಿ: ನಗರದ ಬೆಳಗಾವಿ-ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ನಡೆದ ಐತಿಹಾಸಿಕ ಶ್ರೀ ಬಸವೇಶ್ವರ ಅಮರಾಯಿ ಜಾನುವಾರುಗಳ ಜಾತ್ರೆಯಲ್ಲಿ ತೆರಬಂಡಿ, ಚಕ್ಕಡಿ ಓಟದ ಸ್ಪರ್ಧೆ, ಜೋಡೆತ್ತು ಕಲ್ಲು ಜಗ್ಗುವ ಸ್ಪರ್ಧೆ ಹಾಗೂ ರಾಸುಗಳ ಆಯ್ಕೆ ಸ್ಪರ್ಧೆಗಳು ಜರುಗಿದವು.
ಐತಿಹಾಸಿಕ ಅಮರಾಯಿ ಜಾತ್ರೆಯಲ್ಲಿ ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳಿಂದ ಉತ್ತಮ ತಳಿಯ ರಾಸುಗಳು ಜಾತ್ರೆಯಲ್ಲಿ ವಿಶೇಷ ಗಮನ ಸೆಳೆದಿದ್ದು, ಶಾಸಕ ಆನಂದ ನ್ಯಾಮಗೌಡ ಜಾನುವಾರು ಜಾತ್ರೆ ಉದ್ಘಾಟಿಸಿ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ತೆರಬಂಡೆ ಸ್ಪರ್ಧೆಯಲ್ಲಿ ಮೂರು ನಿಮಿಷದಲ್ಲಿ ಅಕ್ಕಿಮರಡಿ ಗ್ರಾಮದ ಶ್ರೀನಿವಾಸ ಬೋರಡ್ಡಿ ಅವರು ಎತ್ತುಗಳು 759.01 ಅಡಿ ದೂರ ಕ್ರಮಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿವೆ. ಪಿ.ಎಂ.ಬುದ್ನಿ ಗ್ರಾಮದ ರಾಹುಲ ಪೂಜೇರಿ ಎತ್ತುಗಳು 739.03 ಅಡಿ ಕ್ರಮಿಸುವ ಮೂಲಕ ದ್ವಿತೀಯ ಸ್ಥಾನ ಪಡೆದರೆ, ಯಾದವಾಡದ ಕಾರ್ತಿಕ ಕೃಷ್ಣಪ್ಪ ಮಿರ್ಜಿ ಅವರ ಎತ್ತುಗಳು 699.11 ಅಡಿ ದೂರ ಕ್ರಮಿಸುವ ಮೂಲಕ ತೃತೀಯ ಸ್ಥಾನ ಪಡೆದುಕೊಂಡಿವೆ.
ಚಕ್ಕಡಿ ಓಟದ ಸ್ಪರ್ಧೆಯಲ್ಲಿ ಯಲ್ಲಟ್ಟಿ ಗ್ರಾಮದ ಮಲ್ಲಪ್ಪ ತೇಲಿ ಎತ್ತು 20 ನಿಮಿಷ 56 ಸೆಕೆಂಡಗಳಲ್ಲಿ ನಿಗದಿತ ಗುರಿ ತಲುಪುವ ಮೂಲಕ ಪ್ರಥಮ ಸ್ಥಾನ ಪಡೆಯಿತು. ಅಮೀನಗಡದ ಮಾರುತೇಶ್ವರ ಪ್ರಸನ್ ಒಡೆತನದ ಎತ್ತುಗಳು 21ನಿಮಿಷ 40 ಸೆಕೆಂಡ್‌ಗಳಲ್ಲಿ ತಲುಪಿ ದ್ವಿತೀಯ ಸ್ಥಾನ ಪಡೆದರೆ, ಕುಮಠೆಯ ಸಿದ್ದಪ್ಪ ಭೀಮಪ್ಪ ಹರನಾಳ ಎತ್ತುಗಳು 21.57 ನಿಮಿಷದಲ್ಲಿ ತಲುಪುವ ಮೂಲಕ ತೃತೀಯ ಸ್ಥಾನ ಪಡೆದುಕೊಂಡಿವೆ.
ಕಲ್ಲು ಜಗ್ಗುವ ಸ್ಪರ್ಧೆಯಲ್ಲಿ ಮೂರು ನಿಮಿಷದಲ್ಲಿ ತಳಕಟ್ಟಿನಾಳ ಗ್ರಾಮದ ಲಕ್ಷ್ಮೀದೇವಿ ಪ್ರಸನ್ ಒಡೆತನದ ಎತ್ತುಗಳು 835.02 ಅಡಿ ದೂರ ಜಗ್ಗುವ ಪ್ರಥಮ ಸ್ಥಾನ ಪಡೆದುಕೊಂಡಿವೆ. ದಾಸನಾಳ ಗ್ರಾಮದ ವೀರಭದ್ರೇಶ್ವರ ಪ್ರಸನ್ ಒಡೆತನದ ಎತ್ತುಗಳು 788.02 ಅಡಿ ದೂರ ಕ್ರಮಿಸಿ ದ್ವಿತೀಯ ಸ್ಥಾನ, ಕಮಲದಿನ್ನಿ ಗ್ರಾಮದ ರೇಣುಕಾದೇವಿ ಪ್ರಸನ್ ಒಡೆತನದ ಎತ್ತುಗಳು 783.02 ಅಡಿ ಕಲ್ಲು ಜಗ್ಗುವ ಮೂಲಕ ತೃತೀಯ ಸ್ಥಾನ ಪಡೆದಿವೆ.
ಇದೇ ಸಂದರ್ಭದಲ್ಲಿ ಜಾತ್ರಾ ಕಮೀಟಿ ಅಧ್ಯಕ್ಷ ನಂದೆಪ್ಪ ನ್ಯಾಮಗೌಡ, ಬಸವರಾಜ ಗುಡ್ಲಮನಿ, ಜಿ.ಎಸ್. ನ್ಯಾಮಗೌಡ, ಫಕೀರಸಾಬ ವಾಗವಾನ, ಶಿದ್ರಮ ಜಂಬಗಿ ಮಲ್ಲೇಶ ಹೆಸಮನಿ, ಚನಮಲ್ಲಪ್ಪ ನ್ಯಾಮಗೌಡ, ಶ್ರೀಶೈಲ ನ್ಯಾಮಗೌಡ, ದಯಾನಂದ ಕರಜಗಿ, ಶಿವಪ್ಪ ಕಡಪಟ್ಟಿ, ಶ್ರೀಶೈಲ ಮಳಗುಂಡಿ, ನಂದೆಪ್ಪ ಮಳಗುಂಡಿ, ಭೀಮಸಿ ಜಕಾತಿ, ಪ್ರಭು ಅರಕೇರಿ, ಮಲ್ಲಪ್ಪ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಲಿಂಗನೂರ ಇದ್ದರು.