Advertisement

ಗುಣಮಟ್ಟದ ಶಿಕ್ಷಣಕ್ಕೆ ಮಾಹಿತಿ ತಂತ್ರಜ್ಞಾನ ಸಹಕಾರಿ

10:16 AM Jan 15, 2019 | Team Udayavani |

ಅಕ್ಕಿಆಲೂರು: ಆಧುನಿಕತೆ ನಿಟ್ಟಿನಲ್ಲಿ ಜಗತ್ತಿನ ವಿವಿಧ ರಂಗಗಳಲ್ಲಿ ಇಂದಿನ ದಿನಗಳಲ್ಲಿ ಪೈಪೋಟಿ ಏರ್ಪಟ್ಟಿದ್ದು, ಶೈಕ್ಷಣಿಕ ಹಂತವನ್ನು ಸಕಾರಾತ್ಮಕವಾಗಿ ಪೂರ್ಣಗೊಳಿಸುವ ಮೂಲಕ ವಿದ್ಯಾರ್ಥಿಗಳು ಸವಾಲು ಎದುರಿಸುವಲ್ಲಿ ಸನ್ನದ್ಧರಾಗಬೇಕಿದೆ ಎಂದು ದಾವಣಗೆರೆಯ ನಿವೃತ್ತ ಶಿಕ್ಷಕ ಬಸವರಾಜ ಹಂಪಾಳಿ ಹೇಳಿದರು.

Advertisement

ಪಟ್ಟಣದ ಗಂಗಪ್ಪ ಧಾರವಾಡ ಗ್ರಾಮೀಣ ಗುರುಕುಲದಲ್ಲಿ ನಡೆದ ಗುರುಕುಲ ಸಂಭ್ರಮ-16ರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ಇಂದು ಸಾಕಷ್ಟು ಬೆಳೆದು ನಿಂತಿದ್ದು, ಶೈಕ್ಷಣಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳು ವಿನೂತನ ಪ್ರಯತ್ನ ನಡೆಸಿದ್ದು, ಇವೆಲ್ಲ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಕುರಿತು ಕಾಳಜಿ ವಹಿಸಬೇಕಾದ ಪಾಲಕರು ಮತ್ತು ಶಿಕ್ಷಕರು ತಮ್ಮ ಕರ್ತವ್ಯ ಮರೆತಿದ್ದು, ಯುವಸಮೂಹ ಮಾರ್ಗದರ್ಶನದ ಕೊರತೆ ಎದುರಿಸುವಂತಾಗಿದೆ. ಅಂಕಗಳಿಕೆಯ ಭೂತ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗಿದ್ದು, ಈ ದಿಸೆಯಲ್ಲಿ ಪ್ರತಿಯೊಬ್ಬರು ಜಾಗೃತವಾಗಬೇಕಿದೆ ಎಂದರು.

ಸಾನ್ನಿಧ್ಯವಹಿಸಿದ್ದ ವಿರಕ್ತಮಠದ ಶಿವಬಸವ ಶ್ರೀಗಳು ಆಶೀರ್ವಚನ ನೀಡಿ, ಮಕ್ಕಳ ಶಾರೀರಿಕ ಮತ್ತು ಮಾನಸಿಕ ಸ್ವಾಸ್ತ್ಯವನ್ನು ಕಾಪಾಡುವ ದೃಷ್ಟಿಯಿಂದ ಲಭ್ಯವಿರುವ ವಿನೂತನ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಲ್ಲಿ ಪಾಲಕ, ಶಿಕ್ಷಕ ವರ್ಗದವರು ಜಾಗೃತರಾಗಬೇಕಿದೆ. ವಿಶ್ವಕ್ಕೆ ಸಂಸ್ಕಾರಗುಣಗಳನ್ನು ಕೊಡುಗೆಯಾಗಿ ನೀಡಿದ ದೇಶದಲ್ಲಿಂದು ಉತ್ತಮ ಸಂಸ್ಕಾರ ಗುಣಗಳ ಕೊರತೆ ಎದ್ದು ಕಾಣುತ್ತಿದೆ. ಯುವಶಕ್ತಿ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಾದ ಅನಿವಾರ್ಯತೆ ಇದೆ ಎಂದರು.

ನಂತರ ಮುನವಳ್ಳಿಯ ಅಂತಾರಾಷ್ಟ್ರೀಯ ಯೋಗಪಟು ವೀಣಾ ಮಹಾಂತೇಶ ಪಟ್ಟಣಶೆಟ್ಟಿ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿ ನೆರೆದವರ ಗಮನ ಸೆಳೆದರು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಪವಿತ್ರಾ ಕಣವಿ, ಐಶ್ವರ್ಯ ಪೂಜಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಸಂಸ್ಥೆಯ ಅಧ್ಯಕ್ಷ ನಾಗರಾಜ ಪಾವಲಿ, ಮಾತನಾಡಿದರು. ಗೌರವ ಕಾರ್ಯದರ್ಶಿ ಮಹೇಶ ಸಾಲವಟಗಿ, ನಿರ್ದೇಶಕ ಮಂಡಳಿಯ ಅಶೋಕ ಸಣ್ಣವೀರಪ್ಪನವರ, ಶಿವಕುಮಾರ ದೇಶಮುಖ, ನಾಗರಾಜ ಅಡಿಗ, ಮಲ್ಲಿಕಾರ್ಜುನ ಕಂಬಾಳಿ, ಸಂತೋಷ ಅಪ್ಪಾಜಿ, ಸಿದ್ಧಲಿಂಗೇಶ ತುಪ್ಪದ, ಆಡಳಿತಾಧಿಕಾರಿ ಸುರೇಂದ್ರ ಕರೆಮ್ಮನವರ, ಪ್ರಾಚಾರ್ಯ ವಿಜಯ ಪರಶಿಕ್ಯಾತಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next