ಲಕ್ನೋ : ‘ಗಾಳಿ ಬಂದಾಗ ತೂರಿಕೋ’ ಎಂಬ ಮಾತಿನಂತೆ ಪಕ್ಷಾಂತರ ಪರ್ವ ಮತ್ತು ಮತ್ರಿಕೂಟ ಬದಲಾವಣೆ ತೀವ್ರವಾಗಿದ್ದು ಇದಕ್ಕೆ ಹೊಸ ಸಾಕ್ಷಿ ಎಂಬಂತೆ ಉತ್ತರಪ್ರದೇಶದಲ್ಲಿ ಪ್ರಮುಖ ವಿಪಕ್ಷ ಸಾಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕ ದಳವು ಎನ್ ಡಿಎ ಮೈತ್ರಿಕೂಟ ಸೇರ್ಪಡೆ ಗೊಳ್ಳಲಿದೆ ಎನ್ನುವ ಕುರಿತು ವರದಿಯಾಗಿದೆ.
ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಸೂತ್ರಕ್ಕಾಗಿ ಜಯಂತ್ ಚೌಧರಿ ಬಿಜೆಪಿಯೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳಿವೆ.
ವರದಿಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ವೇಳೆಯಲ್ಲಿ ಅಖಿಲೇಶ್ ಯಾದವ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ಜಯಂತ್ ಚೌಧರಿ ಒಬ್ಬ ವಿದ್ಯಾವಂತ ವ್ಯಕ್ತಿ ಮತ್ತು ಅವರು ರಾಜಕೀಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವರು ರೈತರ ಹೋರಾಟವನ್ನು ದುರ್ಬಲಗೊಳಿಸಲು ಬಿಡುವುದಿಲ್ಲ ಎಂಬ ಭರವಸೆ ನನಗಿದೆ” ಎಂದು ಹೇಳಿದ್ದಾರೆ.
I.N.D.I. ಮೈತ್ರಿ ಕೂಟದ ಕಾರ್ಯತಂತ್ರದ ಭಾಗವಾಗಿ ರಾಷ್ಟ್ರೀಯ ಲೋಕದಳ (RLD) ಉತ್ತರಪ್ರದೇಶದಲ್ಲಿ 80 ಸೀಟುಗಳ ಪೈಕಿ 7 ರಿಂದ 8 ಸೀಟುಗಳಲ್ಲಿ ಸ್ಪರ್ಧಿಸಲು ಸಮಾಜವಾದಿ ಪಕ್ಷ ಅವಕಾಶ ನೀಡಲು ಮುಂದಾಗಿತ್ತು.
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 62 ಸ್ಥಾನಗಳನ್ನು ಗೆದ್ದಿತ್ತು. ಬಿಎಸ್ ಪಿ 10 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 5 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಆರ್ ಎಲ್ ಡಿ ಒಂದೂ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಿಜೆಪಿ ಮಿತ್ರ ಪಕ್ಷ ಅಪ್ನಾ ದಳ 2 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ ಕೂಡ ಒಂದು ಸ್ಥಾನ ಮಾತ್ರ ಗೆದ್ದಿತ್ತು. ಈಗಾಗಲೇ ಮಾಯಾವತಿ ಅವರು ಬಿಎಸ್ ಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೇ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.
2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಆರ್ ಎಲ್ ಡಿ ಬಿಜೆಪಿ ಅಲೆಯಲ್ಲಿ ಕೊಚ್ಚಿ ಹೋಗಿತ್ತು, ಸ್ಪರ್ಧಿಸಿದ 8 ಸ್ಥಾನಗಳಲ್ಲಿಯೂ ಸೋಲು ಅನುಭವಿಸಿತ್ತು.
2022ರಲ್ಲಿ ನಡೆದ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಎಸ್ ಪಿ ಮೈತ್ರಿ ಕೂಟದಿಂದ 33 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆರ್ ಎಲ್ ಡಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.