Advertisement

ಅಖಿಲೇಶ್ಗೆ ಅಧಿಕಾರದ ಮದ ಏರಿದೆ: ಪ್ರಧಾನಿ ಮೋದಿ

08:25 AM Feb 14, 2017 | Harsha Rao |

ಲಖೀಂಪುರ: ತೂಕದ ಮಾತನಾಡಿ ಎಂದು ತಮ್ಮನ್ನು ಟೀಕಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೆ ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ ಮೋದಿ, ಅಖೀಲೇಶ್‌ಗೆ ಅಧಿಕಾರದ ಮದ ಏರಿದೆ. ಆದ್ದರಿಂದಲೇ ಅವರಿಗೆ ಕೇಂದ್ರ ಸರಕಾರ ಮಾಡಿದ ಸಾಧನೆಗಳು ಕಾಣಿಸುತ್ತಿಲ್ಲ ಎಂದು ಹೇಳಿದರು. 

Advertisement

ಅಖೀಲೇಶ್‌ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಮೋದಿ, ಉತ್ತರಪ್ರದೇಶದಲ್ಲಿ ಅಪಹರಣ, ದಂಗೆ ಗಳು ಏರಿವೆ. ಗೂಂಡಾಗಳು ಬಂದೀಖಾನೆಯೊಳ ಗಿಂದಲೇ ತಮ್ಮ ದಂಧೆಯನ್ನು ನಡೆಸುತ್ತಿದ್ದಾರೆ. ಅಖೀಲೇಶ್‌ ಮಾಡುತ್ತಿರುವ ಸಾಧನೆಗಳು ಇದುವೇ ಎಂದು ಪ್ರಶ್ನಿಸಿದರು. ಬಿಜೆಪಿಗೆ ಒಂದು ಅವಕಾಶ ಕೊಡಿ ಎಲ್ಲ ರೀತಿಯ ಸಮಾಜವಿರೋಧಿ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ. ಪಿಸ್ತೂಲ್‌, ಕತ್ತಿ, ಚೂರಿ ಇಟ್ಟುಕೊಂಡವರನ್ನು ಬಂಧಿಸುತ್ತೇವೆ ಎಂದು ಹೇಳಿದರು.
ಹಿಂದೆ ಅಖೀಲೇಶ್‌ ಅಧಿಕಾರಕ್ಕೇರಿದಾಗ ಮಾಯಾ ವತಿ ಮಾಡಿದ ಎಲ್ಲ ಹಗರಣಗಳನ್ನು ಬಯಲಿಗೆಳೆ ಯುತ್ತೇನೆ ಎಂದಿದ್ದರು. ಅದನ್ನೆಲ್ಲ ಯಾಕೆ ಮಾಡ ಲಿಲ್ಲ? ಅದಕ್ಕಾಗಿ ಎಷ್ಟು ತೆಗೆದುಕೊಂಡಿದ್ದಾರೆಂದು ಮೋದಿ ಕುಟುಕಿದರು.

ಕಾಂಗ್ರೆಸ್‌ನೊಂದಿಗಿನ ಮೈತ್ರಿ ಯನ್ನೂ ಹಾಸ್ಯ ಮಾಡಿದ ಮೋದಿ, ಯಾರೊಂದಿಗೆ ಮೈತ್ರಿ ಮಾಡಿಕೊಂಡರೂ ಉತ್ತರ ಪ್ರದೇಶದಲ್ಲಿ ಅಖೀಲೇಶ್‌ ಸರಕಾರ ಮಾಡಿರುವ ಪಾಪ ತೊಳೆ ಯಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು. ಈ ನಡುವೆ ಸೋಮವಾರ 2ನೇ ಹಂತದ ಉತ್ತರ ಪ್ರದೇಶ ಚುನಾವಣಾ ಪ್ರಚಾರಕ್ಕೆ ಶಾಂತಿಯುತವಾಗಿ ತೆರೆಬಿತ್ತು. ಫೆ.15ಕ್ಕೆ ಮತದಾನ ನಡೆಯಲಿದೆ.

ಸಮೀಕ್ಷೆ ನಡೆಸಿದ ಮಾಧ್ಯಮ ಮೇಲೆ ಕೇಸು
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆದ 15 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ ಮಾಧ್ಯಮ ಸಂಸ್ಥೆಯೊಂದರ ಮೇಲೆ ಚುನಾವಣಾ ಆಯೋಗ ಕೇಸು ದಾಖಲಿಸಿದೆ. ಜತೆಗೆ ಸಮೀಕ್ಷೆ ನಡೆಸಿದ ಸಂಸ್ಥೆ ವಿರುದ್ಧವೂ ಕೇಸು ಹಾಕಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಉತ್ತರ ಪ್ರದೇಶ ಮುಖ್ಯ ಚುನಾವಣಾಧಿಕಾರಿ ಎರಡೂ ಸಂಸ್ಥೆಗಳ ವಿರುದ್ಧ ಕೇಸು ದಾಖಲಿಸುವಂತೆ ಶಿಫಾರಸು ಮಾಡಿದ್ದರು.
**
ಒಬ್ಬರಿಂದ ತಾಯಿ, ಮತ್ತೂಬ್ಬರಿಂದ ತಂದೆ ನೊಂದಿದ್ದಾರೆ: ಅಮಿತ್‌ ಶಾ
ಸಂಭಲ್‌ ಪ್ರದೇಶದಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಪಾಲ್ಗೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಸಮಾಜವಾದಿ ಪಕ್ಷದ ನಾಯಕ, ಉತ್ತರಪ್ರದೇಶ ಮುಖ್ಯಮಂತ್ರಿ ಅಖೀಲೇಶ್‌ರನ್ನು ಲೇವಡಿ ಮಾಡಿದರು. ಒಬ್ಬರಿಂದ (ಅಖೀಲೇಶ್‌) ತಂದೆ ಬೇಸರಗೊಂಡಿದ್ದಾರೆ, ಮತ್ತೂಬ್ಬರಿಂದ (ರಾಹುಲ್‌) ತಾಯಿ ಬೇಸರಗೊಂಡಿದ್ದಾರೆ. ಈ ಇಬ್ಬರಿಂದ ರಾಜ್ಯವೇ ಬೇಸರಗೊಂಡಿದೆ ಅಮಿತ್‌ ಕುಟುಕಿದರು. ಕಳೆದ ಎರಡೂವರೆ ವರ್ಷದಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರ ಏನು ಸಾಧನೆ ಮಾಡಿದೆ ಎಂಬ ರಾಹುಲ್‌ ಗಾಂಧಿ ಪ್ರಶ್ನೆಗೂ ಅಮಿತ್‌ ಉತ್ತರಿಸಿದರು. “ರಾಹುಲ್‌ ಬಾಬಾ ಇದು ಉತ್ತರಪ್ರದೇಶ ಚುನಾವಣೆ, ನೀವು ಕೇಳಬೇಕಾಗಿರುವುದು ಮೋದಿಯನ್ನಲ್ಲ. 5 ವರ್ಷದಿಂದ ನೀವು ಏನು ಸಾಧಿಸಿದ್ದೀರೆಂದು ಅಖೀಲೇಶ್‌ಗೆ ಕೇಳಿ. ಅವರು ತಮ್ಮ ಸಾಧನೆಯನ್ನು ಹೇಳಿಕೊಳ್ಳಲಿ ಎಂದು ಅಮಿತ್‌ ವಾಗ್ಧಾಳಿ ನಡೆಸಿದರು.
**
ಇಣುಕಿದ್ದು ಸಾಕು; ಕೆಲಸ ಮಾಡಿ!
ಇಣುಕಿದ್ದು ಸಾಕು; ಇನ್ನು ಆಡಳಿತದತ್ತ ಗಮನ ಹರಿಸಿ. ಹೀಗೆಂದು ಶಿವಸೇನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಲೇವಡಿ ಮಾಡಿದೆ. ಮಾಜಿ ಪಿಎಂ ಮನಮೋಹನ್‌ ಸಿಂಗ್‌ ವಿರುದ್ಧ ರೈನ್‌ಕೋಟ್‌ ಹೇಳಿಕೆ ನೀಡಿದ ಬಳಿಕ ಶಿವಸೇನೆಯ ಮುಖವಾಣಿ “ಸಾಮ್ನಾ’ದಲ್ಲಿ ಬರೆದ ಸಂಪಾದಕೀಯದಲ್ಲಿ ಟೀಕಿಸಲಾಗಿದೆ. ಬಾತ್‌ರೂಮ್‌ಗಳಿಗೆ ಇಣುಕುವ ಬದಲು ಪ್ರಧಾನಿ ಹುದ್ದೆಯ ಘನತೆಗೆ ತಕ್ಕಂತೆ ವರ್ತಿಸಿ ಆಡಳಿತದತ್ತ ಗಮನ ಹರಿಸಲಿ ಎಂದು ಬರೆಯಲಾಗಿದೆ. ಈ ನಡುವೆ ಮುಂಬೈನಲ್ಲಿ ಮಾತನಾಡಿದ ಪಕ್ಷದ ಕಾರ್ಯಾಧ್ಯಕ್ಷ ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತ ಕೆಟ್ಟದಾಗಿದೆ ಎಂದು ಟೀಕಿಸಿದ್ದಾರೆ. ಎಲ್‌ಒಸಿಯಲ್ಲಿ ಯೋಧರು ಸರ್ಜಿಕಲ್‌ ದಾಳಿ ನಡೆಸಿದಾಗ ಸರಕಾರ ಅದರ ಲಾಭ ಪಡೆಯಿತು. ಆದರೆ ಅವರಿಗೆ ಉತ್ತಮ ಗುಣಮಟ್ಟದ ಆಹಾರ ನೀಡಲು ಕ್ರಮ ಕೈಗೊಳ್ಳಲಿಲ್ಲ ಎಂದರು. ಇದರ ಜತೆಗೆ ಮಹಾರಾಷ್ಟ್ರದಲ್ಲಿ ಮಧ್ಯಾಂತರ ಚುನಾವಣೆಗೂ ಸಿದ್ಧರಾಗುವಂತೆ  ಅವರು ಹೇಳಿದ್ದಾರೆ. ದೇವೇಂದ್ರ ಫ‌ಡ್ನವೀಸ್‌ ನೇತೃತ್ವದ ಸರಕಾರಕ್ಕೆ ರಾಜೀನಾಮೆ ಕೊಡಲು ತಮ್ಮ ಮಾತಿಗಾಗಿ ಪಕ್ಷದ ಸಚಿವರು ಕಾಯುತ್ತಿದ್ದಾರೆ ಎಂದು ಬಾಂಬ್‌ ಸಿಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next