ಮುಂಬಯಿ: ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ 20ನೇ ವಾರ್ಷಿಕ ಮಹಾ ಸಭೆಯು ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ಆ. 6ರಂದು ಜರಗಿತು.
ಸಂಘದ ಅಧ್ಯಕ್ಷ ಬಿ. ಮುನಿರಾಜ ಅಜಿಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ನಮ್ಮ ಹಿರಿಯರು ಸಮುದಾಯದ ಸಮೃದ್ಧಿಯ ದೂರದೃಷ್ಟಿಯಿಂದ ಸುಮಾರು ಎರಡುದಶಕಗಳ ಮುನ್ನಡೆಯಲ್ಲಿ ಹಲವು ಏರು ಪೇರುಗಳನ್ನು ಕಂಡರೂ ಏಕತೆಯತ್ತ ಸಾಗಿದೆೆ. ವಿವಿಧ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ, ಕ್ರೀಡಾ ಮತ್ತು ಶೈಕ್ಷಣಿಕ ಸೇವೆಯೊಂದಿಗೆ ಸ್ವಸಮುದಾಯದ ಹಿತಕ್ಕಾಗಿ ಶ್ರಮಿಸಿದೆ. ಈ ಸಂಘ ಜೈನ ಕುಟುಂಬ ಇದ್ದಂತೆ. ಸಂಘದ ಮೂಲಕ ಸೇವೆಗೈಯಲು ಬಂಧುಗಳು ಪುರುಸೊತ್ತು ಮಾಡಿದಾಗಲೇ ಎಲ್ಲರಲ್ಲೂ ಸೇವಾ ಉಮೇದು ಬರುವುದು. ಅದಕ್ಕಾಗಿ ಯುವಪೀಳಿಗೆ ಸಾಮಾಜಿಕ ಕಾಳಜಿ ರೂಪಿಸಬೇಕು. ಅವಾಗಲೇ ಹೊಸ ತಲೆಮಾರು ಮುಂದೆ ಬರಲು ಸಾಧ್ಯ. ಸಂಘದ ಏಕತೆ ಎಲ್ಲರ ಮನಸ್ಸಿನಲ್ಲಿ ಮೂಡಿದಾಗ ಎಲ್ಲಾ ಕೆಲಸಗಳು ಸಲೀಸಾಗುವುದು. ಸಂಘದಿಂದ ಪದಾಧಿಕಾರಿಗಳಿಗೆ ಕಷ್ಟವಾಗಬಾರದು. ಸಂಕಟ ಬಂದಾಗ ಸಂಘದ ಸಹವಾಸಕ್ಕಿಂತ ಸಹಾಯವಾಗುವಾಗಲೇ ಸಂಘದ ಜೊತೆಗೆ ಸದಾ ನಿಕಟವಾಗಿದ್ದರೆ ಸಂಘ-ಸಂಸ್ಥೆಗಳು ತನ್ನೀಂತಾನೇ ಮುನ್ನಡೆಯಲು ಸಾಧ್ಯವಾಗುವುದು. ಆದ್ದರಿಂದ ಸಮುದಾಯದ ಹಿತದೃಷ್ಟಿಯಿಂದ ಸೇವೆ ಮಾಡುವ ಭಾವನೆ ಹೃದಯದಿಂದ ಮೂಡಲಿ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಉದಯ ಅಧಿಕಾರಿ, ಗೌ| ಜತೆ ಕಾರ್ಯದರ್ಶಿಗಳಾದ ಮನೀಷ್ ಹೆಗ್ಡೆ, ರಘುವೀರ್ ಹೆಗ್ಡೆ, ಜತೆ ಕೋಶಾಧಿಕಾರಿ ಸಂಪತ್‌ಕುಮಾರ್ ಎಸ್. ಜೈನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲೋಕನಾಥ್ ಜೈನ್, ವಿನಂತಿ ಜೈನ್, ರಾಜೇಂದ್ರ ಹೆಗ್ಡೆ, ಪಿ. ವಸಂತ್ ಕೈಲಾಜೆ, ಪಿ. ಯುವರಾಜ್ ಜೈನ್, ಮಹಾವೀರ ಜೈನ್, ಪದ್ಮರಾಜ ಹೆಗ್ಡೆ ಆಸೀನರಾಗಿದ್ದು, ಗೌ| ಕಾರ್ಯದರ್ಶಿ ಪವನಂಜಯ ಬಲ್ಲಾಳ್ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ, ಗತ ವಾರ್ಷಿಕ ಕಾರ್ಯಚಟುವಟಿಕೆಗಳನ್ನು ವಿವರಿಸಿ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕೋಶಾಧಿಕಾರಿ ಪಿ. ಅನಂತ ರಾಜ ಅವರು ಗತ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಅಧ್ಯಕ್ಷರು ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅಭಿನಂದಿಸಿದರು.
ಸಭೆಯಲ್ಲಿ ಸಂಘದ 2017-19ನೇ ದ್ವೆ„ವಾರ್ಷಿಕ ಸಾಲಿಗೆ ನವೀನ ಕಾರ್ಯಕಾರಿ ಸಮಿತಿಗೆ 16 ಸದಸ್ಯರನ್ನು ಸಭೆಯು ಅವಿರೋಧವಾಗಿ ಆಯ್ಕೆಗೊಳಿಸಿತು. ಅನಂತರ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಬಿ. ಮುನಿರಾಜ ಅಜಿಲ ಪುನರಾಯ್ಕೆಗೊಂಡರು. ಮಹಿಳಾ ವಿಭಾಗಾಧ್ಯಕ್ಷೆಯಾಗಿ
ವಿಜಯಮಾಲಾ ಕೋರಿ ಮತ್ತು ಯುವ ವಿಭಾಗಾಧ್ಯಕ್ಷ ರಾಗಿ ವಿಕ್ರಾಂತ್ ಅಥಿಕಾರಿ ಆರಿಸಲ್ಪಟ್ಟರು.
ಮಹಿಳಾ ವಿಭಾಗಾಧ್ಯಕ್ಷೆ ಕವಿತಾ ಎಸ್. ಜೈನ್ ಮತ್ತು ಯುವ ವಿಭಾಗಾಧ್ಯಕ್ಷ ಭರತ್ ಜೈನ್, ಉಪ ಸಮಿತಿಗಳ ಮುಖಸ್ಥರು ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು. ಸಂಘದ ಮಹಿಳಾ ವಿಭಾಗದ ಶ್ರಾವಕಿಯ ಕೀರ್ತನೆಯೊಂದಿಗೆ ಸಭೆ ಆದಿಗೊಂಡಿತು. ಬಳಿಕ ಇತ್ತೀಚೆಗೆ ಅಗಲಿದ ಅಖೀಲ ಕರ್ನಾಟಕ ಜೈನ ಸಂಘದ ಸ್ಥಾಪಕ ಸದಸ್ಯರಲ್ಲೋರ್ವರೂ, ಹಾಲಿ ಕಾರ್ಯಕಾರಿ ಸಮಿತಿ ಸದಸ್ಯ ಜಯ ಎ. ಜೈನ್ ಮತ್ತು ಅಗಲಿದ ಸರ್ವ ಜೈನ ಬಂಧುಗಳು, ಸಂಘದ ಹಿತೈಷಿಗಳಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಕೋರಲಾಯಿತು.
ಸಂಘದ ಸಕ್ರಿಯ ಕಾರ್ಯಕರ್ತರೂ ಶಿಕ್ಷಕರಾದ ಸನತ್‌ಕುಮಾರ್ ಜೈನ್, ವಾಣಿ ವೈದ್ಯ, ವತ್ಸಲಾ ಅರಿಗ ಮತ್ತು ಚಂದನ ಯು. ಪಡಿವಾಳ್ ಸಭಿಕರ ಪರವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಸಂಘದ ಮುನ್ನಡೆಗೆ ಮಹಿಳಾ ವಿಭಾಗ ಮತ್ತು ಯುವ ವಿಭಾಗ ಅನುಪಮ ಸೇವೆಯನ್ನು ಮನವರಿಸಿದ ಪವನಂಜಯ ಬಲ್ಲಾಳ್ ವಂದಿಸಿದರು.