Advertisement

ನಮ್ಮೂರ ಸಂಸ್ಕೃತಿಗೆ ಮರಳಿದ ಆಕಾಶವಾಣಿ

07:28 PM Apr 20, 2021 | Team Udayavani |

ವರದಿ : ಬಸವರಾಜ ಹೊಂಗಲ್‌

Advertisement

ಧಾರವಾಡ: ಅಂದಾಜು 50 ಸಾವಿರ ಕಲಾವಿದರು, ಹತ್ತು ಲಕ್ಷ ನಿಮಿಷಗಳಾಗುವಷ್ಟು ಜಾನಪದ ಮತ್ತು ಇತರ ಕಾರ್ಯಕ್ರಮಗಳ ಸಂಗ್ರಹ, ದಿಗ್ಗಜರ ಧ್ವನಿಮುದ್ರಿಕೆ, ಕೆಳ ಸಮುದಾಯದ ಕಲಾ ಪ್ರದರ್ಶನಕ್ಕೆ ವೇದಿಕೆ, ಮೌಖೀಕ ಸಾಂಸ್ಕೃತಿಕ ಪರಂಪರೆಯನ್ನು ಹೀರಿ ಹಿಡಿದಿಟ್ಟುಕೊಂಡ ಬೃಹತ್‌ ಭಂಡಾರ. ಆದರೆ ಇದೆಲ್ಲವೂ ಇದ್ದಕ್ಕಿದ್ದಂತೆ ಅನ್ಯರ ಪಾಲಾದರೆ ಹೇಗೆ?

ಹೌದು, ಇಂತಿಪ್ಪ ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಸ್ಥಳೀಯ ಕಾರ್ಯಕ್ರಮಗಳ ಪ್ರಸಾರ ನಿಲ್ಲಿಸುವ ಪ್ರಸ್ತಾವನೆ ಸದ್ಯಕ್ಕೆ ಮರಳಿ ಬೆಂಗಳೂರು, ದೆಹಲಿಯತ್ತ ಮುಖಮಾಡಿಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಸಮಯ ನೋಡಿಕೊಂಡು ಮತ್ತೆ ಸ್ಥಳೀಯ ಸಂಸ್ಕೃತಿಗೆ ಕಾರ್ಪೊರೇಟ್‌ ಜಗತ್ತು ಏಟು ಕೊಡಬಹುದು ಎನ್ನುವ ಅನುಮಾನ ಈ ಭಾಗದ ಪ್ರಜ್ಞಾವಂತ ಆಕಾಶವಾಣಿ ಶ್ರೋತೃಗಳನ್ನು ಕಾಡುತ್ತಿದೆ. ಈಗಷ್ಟೇಯಲ್ಲ, ಮುಂದಿನ ದಿನಗಳಲ್ಲಿ ಕೂಡ ಆಕಾಶವಾಣಿಯಲ್ಲಿ ಸ್ಥಳೀಯ ಕಾರ್ಯಕ್ರಮಗಳ ಆದ್ಯತೆ ಗಟ್ಟಿಯಾಗಿ ನಿಲ್ಲಲೇಬೇಕೆಂದು ಎಲ್ಲರೂ ಒಕ್ಕೊರಲ ಧ್ವನಿಯಿಂದ ಪ್ರಸ್ತಾಪಿಸುತ್ತಿದ್ದಾರೆ.

ಆಕಾಶವಾಣಿ ಧಾರವಾಡ ಕೇಂದ್ರ ಒಂದು ವಿಶ್ವವಿದ್ಯಾಲಯದಷ್ಟು ಕೆಲಸ ಮಾಡಿದೆ. ಇದರಲ್ಲಿನ ಕಾರ್ಯಕ್ರಮಗಳನ್ನು ಖಾಸಗಿ ಕಂಪನಿಗಳ ಪ್ರಾಯೋಜಕತ್ವಕ್ಕೆ ನೀಡುವುದು ಈಗಷ್ಟೇ ಅಲ್ಲ ಮುಂದಿನ ದಿನಗಳಲ್ಲಿಯೂ ಸಮಂಜಸವಲ್ಲ ಎನ್ನುವ ಪ್ರಬಲ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಖಾಸಗಿ ಟಿ.ವಿ.ಚಾನೆಲ್‌ಗ‌ಳು ಮತ್ತು ಎಫ್‌ಎಂ ರೇಡಿಯೋಗಳ ಹಾವಳಿಯಲ್ಲಿ ತೆರೆಮರೆಗೆ ಸರಿದಿದ್ದ ಆಕಾಶವಾಣಿ ಇಂದಿಗೂ ಸ್ಥಳೀಯ ಕಾರ್ಯಕ್ರಮಗಳ ಪ್ರಭಾವದಿಂದಾಗಿಯೇ ತನ್ನತನ ಉಳಿಸಿಕೊಂಡಿದೆ. ಅದರಲ್ಲೂ ಧಾರವಾಡ ಆಕಾಶವಾಣಿ ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಸುಪ್ರಭಾತವೇ ಆಗಿರುವುದು ವಿಶೇಷ ಕೂಡ.

ತೂಗುಗತ್ತಿ ನೇತಾಡುತ್ತಲೇ ಇದೆ:

Advertisement

ಸದ್ಯಕ್ಕೆ ಸ್ಥಳೀಯರು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ಕೇಂದ್ರ ಸರ್ಕಾರ ಹಾಗೂ ಪ್ರಸಾರ ಭಾರತಿ ಸಂಸ್ಥೆಯ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ, ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮತ್ತೆ ಮೊದಲಿನಂತೆಯೇ ಆಕಾಶವಾಣಿ ಕೇಂದ್ರಗಳಲ್ಲಿ ಸ್ಥಳೀಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಆದರೆ 2016 ರಲ್ಲಿಯೇ ಇಂತಹ ಒಂದು ಮಹತ್ವದ ಬದಲಾವಣೆಯನ್ನು ತರಲು ಪ್ರಸಾರ ಭಾರತಿ ಮುಂದಾಗಿತ್ತು. ಆಗಲೂ ತೀವ್ರತರವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅದನ್ನು ಕೈ ಬಿಡಲಾಗಿತ್ತು. ಇದೀಗ 2021 ರ ಯುಗಾದಿ ಹಬ್ಬದಂದು ಹೊಸತನ ಆಕಾಶವಾಣಿಯತ್ತ ಸುಳಿಯುವ ಪ್ರಯತ್ನ ನಡೆಯಿತಾದರೂ, ಇಂತಹ ಹೊಸತನ ಕೇಳುಗರಾದ ಮನಗೆ ಬೇಡವೇ ಬೇಡ ಎನ್ನುವ ಬಲವಾದ ಕೂಗು ಕೇಳಿ ಬಂದಿತು. ಇದಕ್ಕೆ ಮಣಿದಿರುವ ಪ್ರಸಾರ ಭಾರತಿ ಸದ್ಯಕ್ಕೆ ಈ ಪ್ರಸ್ತಾವವನ್ನು ಕೈ ಬಿಟ್ಟಿದೆ. ಆದರೆ ಮುಂದಿನ ದಿನಗಳಲ್ಲಿ ಇದು ಮತ್ತೆ ಬರಲಾರದು ಎಂಬುದು ಖಚಿತವಿಲ್ಲ ಎನ್ನುವ ಆತಂಕದಲ್ಲಿದೆ ಉತ್ತರ ಕರ್ನಾಟಕದ ಆಕಾಶವಾಣಿಯ ಶ್ರೋತೃಗಣ.

ಆರ್ಥಿಕತೆ ಸರಿದೂಗಿಸುವ ಯತ್ನ:

ಧಾರವಾಡ ಆಕಾಶವಾಣಿ ಸೇರಿದಂತೆ ರಾಜ್ಯದಲ್ಲಿ 16 ಆಕಾಶವಾಣಿ ಕೇಂದ್ರಗಳಿವೆ. ಒಂದೊಂದು ಕೇಂದ್ರದಲ್ಲೂ ಸರಾಸರಿ 45 ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂದಾಜು 1200 ಕ್ಕೂ ಅಧಿಕ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಅರ್ಧದಷ್ಟು ಜನರು ಅರೆಕಾಲಿಕ ಮತ್ತು ಗುತ್ತಿಗೆ ನೌಕರರೇ ಇದ್ದಾರೆ. ಉದ್ಘೋಷಕರಾಗಿ ಕಾರ್ಯನಿರ್ವಹಿಸುವ ಎಲ್ಲರಿಗೂ ಪ್ರತಿ ಕಾರ್ಯಕ್ರಮಕ್ಕೆ 1300 ರೂ.ಗೌರವಧನ, ನೀಡಲಾಗುತ್ತಿದ್ದು, ಪ್ರತಿಯೊಬ್ಬರಿಗೂ ತಿಂಗಳಿಗೆ ಕನಿಷ್ಠ 6 ಕಾರ್ಯಕ್ರಮ ಕೊಡಬೇಕು. ಇನ್ನು ಕಾರ್ಯಕ್ರಮ ನೀಡುವ ಕಲಾವಿದರು ಮತ್ತು ಭಾಗವಹಿಸುವ ವಾದ್ಯವೃಂದ ಸೇರಿದಂತೆ ಎಲ್ಲರಿಗೂ ಗೌರವಧನ ನೀಡಬೇಕು. ಈ ಖರ್ಚನ್ನು ಕೂಡ ಪ್ರಸಾರ ಭಾರತಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆಗೂ ಖಾಸಗಿ ರೇಡಿಯೋಗಳಂತೆ ಜಾಹೀರಾತು ಬರಬೇಕು ಎಂದು ನಿರೀಕ್ಷೆ ಇಟ್ಟುಕೊಂಡಿರುವ ಪ್ರಸಾರ ಭಾರತಿ ತನ್ನ ಕಾರ್ಯಕ್ರಮಗಳನ್ನು ಪ್ರಾಯೋಜಿತರಿಗೆ ನೀಡಲು ತುದಿಗಾಲಲ್ಲಿ ನಿಂತಿದೆ ಎನ್ನುವ ಮಾತುಗಳು ಆಕಾಶವಾಣಿ ತರಂಗಾಂತರಗಳಲ್ಲಿಯೇ ರಿಂಗಣಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next