ಮುಂಬೈ: ಕ್ರಿಕೆಟ್ ನಲ್ಲಿ ಬ್ಯಾಟಿಂಗ್, ಬೌಲಿಂಗ್ ನಂತೆಯೇ ಫೀಲ್ಡಿಂಗ್ ಗೂ ಮಹತ್ವವಿದೆ. ಕಳೆದ ಕೆಲವು ವರ್ಷಗಳಲ್ಲಿ ಟೀಂ ಇಂಡಿಯಾದ ಫೀಲ್ಡಿಂಗ್ ಕೂಡಾ ಅತ್ಯುತ್ತಮ ಎನ್ನುವಂತೆ ಸುಧಾರಣೆ ಕಂಡಿದೆ. ಅಂತಹುದರಲ್ಲಿ ಭಾರತ ಕಂಡ ಶ್ರೇಷ್ಠ ಫೀಲ್ಡರ್ ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಮಾಜಿ ಆಟಗಾರ ಆಕಾಶ್ ಚೋಪ್ರಾ.
ತನ್ನ ಯೂಟ್ಯೂಬ್ ವಿಡಿಯೋದಲ್ಲಿ ಚೋಪ್ರಾ ಭಾರತದ ಆರು ಶ್ರೇಷ್ಠ ಫೀಲ್ಡರ್ ಗಳನ್ನು ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಚೋಪ್ರಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಆಟಗಾರನಾಗಿ ಬೆಳೆದಂತೆಲ್ಲಾ ಆತನ ಫೀಲ್ಡಿಂಗ್ ಕೂಡಾ ಉತ್ತಮವಾಗಿದೆ. ಯಾವಾಗಲೂ ಚೆಂಡು ತನ್ನ ಬಳಿ ಬರಬೇಕು ಎಂದು ಆಶಿಸುತ್ತಾರೆ ಎನ್ನತ್ತಾರೆ ಚೋಪ್ರಾ.
ಐದನೇ ಸ್ಥಾನ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್. 1983ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಂಡೀಸ್ ನ ವಿವಿಯನ್ ರಿಚರ್ಡ್ ಅವರ ಕ್ಯಾಚನ್ನು ಕಪಿಲ್ ದೇವ್ ಅದ್ಭುತವಾಗಿ ಹಿಡಿದಿದ್ದರು ಎಂದಿದ್ದಾರೆ.
ನಾಲ್ಕು ಮತ್ತು ಮೂರನೇ ಸ್ಥಾನವನ್ನು ಕ್ರಮವಾಗಿ ಯುವರಾಜ್ ಮತ್ತು ಕೈಫ್ ಗೆ ನೀಡಿದ್ದಾರೆ ಚೋಪ್ರಾ. ಈ ಇಬ್ಬರು ಫೀಲ್ಡರ್ ಗಳು ಟೀಂ ಇಂಡಿಯಾದದಲ್ಲಿ ಫೀಲ್ಡಿಂಗ್ ನ ಕ್ರೇಜ್ ಹುಟ್ಟು ಹಾಕಿದವರು. ಅನಾರೋಗ್ಯದ ನಂತರ ಯುವಿ ಫೀಲ್ಡಿಂಗ್ ಸ್ವಲ್ಪ ಕಳಪೆಯಾಯಿತು. ಅದಕ್ಕೆ ನಾಲ್ಕನೇ ಸ್ಥಾನ ಎಂದು ಚೋಪ್ರಾ ಹೇಳಿದ್ದಾರೆ.
ದ್ವಿತೀಯ ಸ್ಥಾನ ಸುರೇಶ್ ರೈನಾಗೆ. ಈತ ಮೈದಾನದ ಯಾವ ಮೂಲೆಯಲ್ಲಿ ಬೇಕಾದರೂ ಯಾವ ರೀತಿ ಬೇಕಾದರೂ ಫೀಲ್ಡಿಂಗ್ ಮಾಡಬಲ್ಲ ಎಂದು ಹೊಗಳಿದ್ದಾರೆ.
ಚೋಪ್ರಾ ಪ್ರಕಾರ ಭಾರತ ಕಂಡ ಶ್ರೇಷ್ಠ ಫೀಲ್ಡರ್ ರವೀಂದ್ರ ಜಡೇಜಾ. ಆತ ಚೆಂಡು ಎಸೆಯುವ ವೇಗ ರಾಕೆಟ್ ನಂತೆ. ಸದ್ಯದ ಮಟ್ಟಿಗೆ ಈತನಂತಹ ಫೀಲ್ಡರ್ ಇಲ್ಲ ಎಂದು ಆಕಾಶ್ ಹೇಳಿದ್ದಾರೆ.