ರಂಗಭೂಮಿ ಮತ್ತು ಸಿನಿಮಾದ ಖ್ಯಾತ ಸಂಗೀತ ನಿರ್ದೇಶಕ ಎ.ಕೆ. ವಿಜಯ್ ಅವರಿಗೆ ಈ ಬಾರಿಯ ರಂಗಚಾವಡಿ ಪ್ರಶಸ್ತಿ ಘೋಷಿಸಲಾಗಿದ್ದು, ನ. 18ರಂದು ಸುರತ್ಕಲ್ಲಿನ ಬಂಟರ ಭವನದಲ್ಲಿ ಜರಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಎ.ಕೆ. ವಿಜಯ್ ಕೇಂದ್ರ ಸರಕಾರಿ ಉದ್ಯೋಗದಲ್ಲಿದ್ದು ನಿವೃತ್ತರಾಗಿರುವವರು. ಕೋಕಿಲಾ ಹೆಸರಿನಲ್ಲಿ ಖ್ಯಾತರಾಗಿರುವ ವಿಜಯ್ ಎಳವೆಯಿಂದಲೇ ಕಲಾಸಕ್ತಿ ಹೊಂದಿದ್ದು, ಅದನ್ನು ತನ್ನ ಉದ್ಯೋಗದ ನಡುವೆಯೂ ಬೆಳೆಸಿಕೊಂಡು ಇಂದು ಈ ಮಟ್ಟಕ್ಕೆ ಬೆಳೆದವರು. ಬಾಲ್ಯದಿಂದಲೇ ಹಿರಿಯರೊಂದಿಗೆ ಭಜನೆ ಕಾರ್ಯಕ್ರಮ ನೀಡುತ್ತಿದ್ದ ಅವರು ಹಾರ್ಮೋನಿಯಂ ನುಡಿಸಲು ಕಲಿತುಕೊಂಡರು. ಬಳಿಕ ಸಿನಿಮಾ ಹಾಗೂ ನಾಟಕದ ಹಾಡುಗಳತ್ತ ಗಮನ ಹರಿಸಿ ಅಲ್ಲಿ ಬೆಳವಣಿಗೆ ಕಂಡವರು.
1976ರಲ್ಲಿ ಇವರು ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದರು. ತುಳು ರಂಗಭೂಮಿಯ ಖ್ಯಾತನಾಮರಾಗಿರುವ ಮಚ್ಚೇಂದ್ರನಾಥ ಪಾಂಡೇಶ್ವರ, ಕೆ. ಎನ್. ಟೇಲರ್, ಕೆ.ಬಿ. ಭಂಡಾರಿ, ರಾಂ ಕಿರೋಡಿಯನ್, ಸೀತಾರಾಮ ಕುಲಾಲ್, ಮೊಹಿದಿನಬ್ಬ, ಇಬ್ರಾಹಿಂ ತಣ್ಣೀರುಬಾವಿ, ಡಾ| ಸಂಜೀವ ದಂಡಕೇರಿ, ರಮಾನಂದ ಚೂರ್ಯ, ಕಾಸರಗೋಡು ಚಿನ್ನಾ, ಮುಂಬಯಿ ಕಲಾಜಗತ್ತಿನ ತೋನ್ಸೆ ವಿಜಯ ಕುಮಾರ್ ಶೆಟ್ಟಿ. ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್‌ಬೈಲ್ ಮುಂತಾದ ಘಟಾನುಘಟಿಗಳೊಂದಿಗೆ ಕೆಲಸ ಮಾಡಿದ ಅನುಭವಿ. ಹಿರಿಯರಿಂದ ಕಿರಿಯರ ವರೆಗಿನ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಇವರು ಪ್ರಸ್ತುತ ರಂಗ ಪರಿಕರ ಸಂಬಂಧಿ ವ್ಯವಹಾರವನ್ನೂ ಮಾಡುತ್ತಿದ್ದಾರೆ.
ತುಳು ಚಿತ್ರರಂಗದಲ್ಲಿ ದಾಖಲೆ ಬರೆದಿರುವ ಒರಿಯರ್ದೊರಿ ಅಸಲ್ ಸಿನಿಮಾಕ್ಕೆ ಸಂಗೀತ ನಿರ್ದೇಶನ ನೀಡಿರುವ ಇವರು, ಅದಕ್ಕಾಗಿ ಬೆಸ್ಟ್ ಮ್ಯೂಸಿಕ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಬಳಿಕ ಮದಿಮೆ, ಬಣ್ಣಬಣ್ಣದ ಬದುಕು ಮುಂತಾದ ಸಿನಿಮಾಗಳಿಗೂ ಸಂಗೀತ ನೀಡಿ ಗಮನ ಸೆಳೆದಿದ್ದಾರೆ. ಇವರು ನಿರ್ದೇಶನ ನೀಡಿರುವ ಹಲವಾರು ಹಾಡುಗಳಿಗೆ ಖ್ಯಾತ ಗಾಯಕರು ದನಿಯಾಗಿದ್ದು, ಅವುಗಳಲ್ಲಿ ಕೆಲವುಗಳಿಗೆ ಪ್ರಶಸ್ತಿಯೂ ಸಿಕ್ಕಿರುವುದು ಇವರ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ. ಇವರು ನಿರ್ದೇಶಿಸಿದ್ದ ಹಾಡುಗಳನ್ನು ಹಾಡಿ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಉದಿತ್ ನಾರಾಯಣ್, ಸೋನು ನಿಗಂ ಮುಂತಾದವರಿಗೆ ಬೆಸ್ಟ್ ಸಿಂಗರ್ ಪ್ರಶಸ್ತಿಯೂ ಸಿಕ್ಕಿದೆ.
ಪುತ್ತಿಗೆ ಪದ್ಮನಾಭ ರೈ