ಕಳೆದ ವರ್ಷವೇ ಬಿಡುಗಡೆಯಾಗಿ ಬಿಡಬೇಕಿತ್ತು “ಅಲ್ಲಮ’. ಗ್ರಾಫಿಕ್ಸ್ ಕೆಲಸ, ನಿರ್ಮಾಪಕ ಹರಿ ಖೋಡೆ ಅವರ ಸಾವು, ಅದು ಇದು … ಅಂತ ಬಿಡುಗಡೆಯಾಗಲೇ ಇಲ್ಲ. ಈಗ “ಅಲ್ಲಮ’ನನ್ನು ಜನವರಿ 26ಕ್ಕೆ ಬಿಡುಗಡೆ ಮಾಡುವುದಕ್ಕೆ ನಾಗಾಭರಣ ಸಿದ್ಧತೆ ನಡೆಸಿದ್ದಾರೆ. ಚಿತ್ರವನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಮಾರ್ ಫಿಲಮ್ಸ್‌ನ ಸುರೇಶ್ ವಹಿಸಿಕೊಂಡಿದ್ದಾರೆ. ಆ ಕಡೆ ಪ್ರಚಾರದ ಕೆಲಸ ನಡೆಯುತ್ತಿದೆ. ಈ ಕಡೆ ಬಿಡುಗಡೆಗೆ ಓಡಾಡಬೇಕಿದೆ. ಈ ಮಧ್ಯೆ ಚಿತ್ರತಂಡದವರು ಹಾಡುಗಳನ್ನು ಮತ್ತು ಟ್ರೇಲರ್ ತೋರಿಸುವ ನೆಪದಲ್ಲಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.
ನಾಗಾಭರಣ ಅವರು ಹೇಳುವಂತೆ, ಅಲ್ಲಮ ಎಲ್ಲರಿಗೂ ಗೊತ್ತಿರುವ ಅಜ್ಞಾತ ವ್ಯಕ್ತಿಯಂತೆ. “ಅಲ್ಲಮ ಎಲ್ಲರಿಗೂ ಗೊತ್ತಿರುವ ಒಬ್ಬ ಅಜ್ಞಾತ ವ್ಯಕ್ತಿ. ಅವನ ಕುರಿತು ಸಿನಿಮಾ ಮಾಡಿದ್ದೇವೆ. ಈಗ ಅಲ್ಲಮನನ್ನು ಎಲ್ಲರಿಗೂ ರೀಚ್ ಮಾಡಿಸುವ ಕೆಲಸ ಇದೆ. ಈಗಾಗಲೇ ಎರಡು ಬಯಲ ಬಂಡಿಗಳನ್ನು ಮಾಡಿ, ಅದರ ಮೂಲಕ ಪ್ರಚಾರ ಶುರು ಮಾಡಿದ್ದೇವೆ. ಮೊದಲ ಬಂಡಿ ದಾವಣಗೆರೆಯಿಂದ ಉತ್ತರಕ್ಕೆ, ಇನ್ನೊಂದು ದಕ್ಷಿಣಕ್ಕೆ ಹೋಗಿ ಚಿತ್ರದ ಬಗ್ಗೆ ಪ್ರಚಾರ ಮಾಡುತ್ತಿವೆ. ಇನ್ನು ಕೆಲವು ಸಂಘ-ಸಂಸ್ಥೆಗಳು ಈ ಪ್ರಚಾರದ ಕೆಲಸದಲ್ಲಿ ಕೈ ಜೋಡಿಸಿವೆ. ಚಿತ್ರ ಸ್ವಲ್ಪ ನಿಧಾನವಾಗಿರಬಹುದು. ಆದರೆ, ಎಲ್ಲೂ ಮರೆಯಾಗಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪುಗಳನ್ನು ಮೂಡಿಸುತ್ತಲೇ ಬಂದಿದೆ. ಚಿತ್ರ ಬಿಡುಗಡೆಗೂ ಮುನ್ನ ಪನೋರಮಾಗೆ ಆಯ್ಕೆಯಾಗುವ ಮೂಲಕ, ಇನ್ನಾéವುದೋ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ, ಪ್ರೇಕ್ಷಕರಿಗೆ ಚಿತ್ರದ ಬಗ್ಗೆ ನೆನಪಿಸುತ್ತಲೇ ಇದೆ. ಈ ಚಿತ್ರ ಈಗ ಬಿಡುಗಡೆಯಾಗುತ್ತಿದೆ.
ಕನ್ನಡಿಗರು ಈ ಚಿತ್ರ ನೋಡಬೇಕು. ಇದು ಇನ್ನೊಂದು “ಜನುಮದ ಜೋಡಿ’ ಆಗಲಿ ಎಂದು ನಾನು ಬಯಸಲ್ಲ, ಇನ್ನೊಂದು “ಸಂತ ಶಿಶುನಾಳ ಷರೀಫ’ ಆಗಲಿ ಎಂದು ಬಯಸುತ್ತೀನಿ’ ಎಂದರು ಅವರು.
ಚಿತ್ರ ಮಾಡುವ ಪ್ರೋಸಸ್‌ನಲ್ಲಿ ಧನಂಜಯ್‌ಗೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆಯಂತೆ. “ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ ಹೋದವು. ಈ ತಂಡದಲ್ಲಿ ಸಾಕಷ್ಟು ಯುವಕರು ಇದ್ದಾರೆ. ಅವರಿಗೆಲ್ಲಾ ಅಲ್ಲಮನ ಬಗ್ಗೆ ಗೊತ್ತಿರಲಿಲ್ಲ. ಚಿತ್ರ ಮುಗಿಯುತ್ತಾ ಹೋದಂತೆ, ಅವರೆಲ್ಲರೂ ಅಲ್ಲಮನ ಫ್ಯಾನ್‌ಗಳಾಗಿದ್ದಾರೆ. ನಮ್ಮಲ್ಲಿ ಬಯೋಪಿಕ್‌ಗಳು ಕಡಿಮೆ ಅಂತಲೇ ಹೇಳಬೇಕು. ಆ ಕೊರತೆ ನೀಗಿಸಿ ಈ ಚಿತ್ರ ಬರುತ್ತಿದೆ. ಅದನ್ನು ಎಲ್ಲರಿಗೂ ಮುಟ್ಟಿಸುವ ಪ್ರಯತ್ನವಾಗಲೀ’ ಎಂದರು. ಈ ಚಿತ್ರದ ಮೂಲಕ ಕನ್ನಡದ ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆಗೆ ಕೆಲಸ ಮಾಡುವಂತಾಯಿತು ಎಂದು ಖುಷಿಯಾದರು ನಾಯಕಿ ಮೇಘನಾ ರಾಜ್. ಇನ್ನು ಅಲ್ಲಮನ ತಾಯಿ ನೀಲೋಚನೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಷ್ಮೀ ಗೋಪಾಲ ಸ್ವಾಮಿ, ಇಂಥದ್ದೊಂದು ಚಿತ್ರ ಮಾಡುವುದಕ್ಕೆ ಧೈರ್ಯ ಬೇಕು ಎಂದರು. “ಅಲ್ಲಮನ ಕುರಿತಾಗಿ 100 ಪಿ.ಎಚ್.ಡಿಗಳನ್ನು ಮಾಡಬಹುದು. ಅಷ್ಟೊಂದು ವಿಷಯ ಇದೆ. ಅವರ ತತ್ವ ಮತ್ತು ಯೋಚನೆಗಳು ಎಲ್ಲಾ ಕಾಲಕ್ಕೂ ಸಲ್ಲುತ್ತದೆ. ಅವರ ತತ್ವಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲುಪಿಸಬೇಕು. ಸಿನಿಮಾಗಿಂತ ಒಳ್ಳೆ ವೇದಿಕೆ ಯಾವುದಿದೆ’ ಎಂದರು ಲಕ್ಷ್ಮೀ ಗೋಪಾಲಸ್ವಾಮಿ.
ನಿರ್ಮಾಪಕ ಶ್ರೀನಿವಾಸ ಖೋಡೆ, ಸಂಗೀತ ನಿರ್ದೇಶಕ ಬಾಪು ಪದ್ಮನಾಭ್, ಒಂದು ಹಾಡು ಬರೆದಿರುವ ದೊಡ್ಡರಂಗೇಗೌಡರು, ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿ ರುವ ಪ್ರತಿಭಾ ನಂದಕುಮಾರ್, ಎನ್.ಎಸ್. ಶ್ರೀಧರಮೂರ್ತಿ, ಶ್ರೀಪತಿ ಮಂಜಿನಬೈಲು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.