ಬೆಂಗಳೂರು: ಅಧಿಕ ಬಡ್ಡಿ ನೀಡುವುದಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಜ್ಮೀರಾ ಗ್ರೂಪ್ಸ್ ಕಂಪನಿ ವಿರುದ್ಧದ ತನಿಖೆ ಮುಂದುವರಿಸಿರುವ ಕೇಂದ್ರ ಅಪರಾಧ ಘಟಕ (ಸಿಸಿಬಿ) ಪೊಲೀಸರು, ಕಂಪನಿ ಸ್ಥಾಪಕ ಅಬ್ದುಲ್ ದಸ್ತಗೀರ್ ಸೇರಿದಂತೆ ಇನ್ನಿತರೆ ಆರೋಪಿಗಳು ಹೊಂದಿದ್ದ 28 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ (ಜಮೀನು) ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಪ್ರಕರಣ ಪ್ರಮುಖ ಆರೋಪಿ ಅಬ್ದುಲ್ ದಸ್ತಗೀರ್, ತಬರೇಷ್ ಪಾಷಾ, ತಬ್ರೇಜ್ ಉಲ್ಲಾ ಷರೀಪ್ ಸೇರಿದಂತೆ ಇತರೆ ಆರೋಪಿಗಳು ಸಾರ್ವಜನಿಕರಿಗೆ ವಂಚಿಸಿದ ಹಣದಲ್ಲಿಯೇ ಖರೀದಿಸಿದ್ದ ಮೈಸೂರಿನ ದೇವನೂರು ಗ್ರಾಮದಲ್ಲಿ 20 ಕೋಟಿ ರೂ. ಮೌಲ್ಯದ 3 ಎಕರೆ 25 ಗುಂಟೆ, ಚಿಕ್ಕ ಸಾದೇನಹಳ್ಳಿ ಗ್ರಾಮದ ಆರು ಕೋಟಿ ರೂ. ಮೌಲ್ಯದ 1 ಎಕರೆ 18 ಗುಂಟೆ ಭೂಮಿ, ಜಯನಗರ 2 ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಪತ್ತೆಹಚ್ಚಲಾಗಿದೆ.
ಜತೆಗೆ, ಆರೋಪಿಗಳು ಹೊಂದಿದ್ದ ವಿವಿಧ ಬ್ಯಾಂಕ್‌ಗಳ ಖಾತೆಗಳಲ್ಲಿದ್ದ 5.24 ಕೋಟಿ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆರೋಪಿಗಳ ಸ್ಥಿರಾಸ್ತಿ ಹಾಗೂ ಆಸ್ತಿ ಮುಟ್ಟುಗೋಲು ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದು ಅಜ್ಮೀರಾ ಗ್ರೂಪ್ಸ್‌ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತರಿಗೆ ನೀಡಲು ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೋಷಾರೋಪ ಪಟ್ಟಿ: ವಂಚನೆಗೆ ಸಹಕಾರ ನೀಡಿದ್ದ ಅಜ್ಮೀರಾ ಗ್ರೂಪ್ಸ್‌ನಲ್ಲಿ ಮ್ಯಾನೇಜರ್ ಆಗಿದ್ದ ತಬ್ರೇಜ್ ಉಲ್ಲಾ ಷರೀಪ್ ವಿರುದ್ಧ ಒಂದನೇ ಸಿಸಿಎಚ್ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಜ.23ರಂದು ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪಿ ತಬ್ರೇಜ್ ವಿರುದ್ಧ ಕರ್ನಾಟಕ ಪ್ರೋಟಕ್ಷನ್ ಆಫ್ ಇಂಟರೆಸ್ಟ್ ಆಫ್ ಡಿಪಾಸಿಟರ್ ಇನ್ ಪೈನಾನ್ಸಿಯಲ್ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್ 2004 ಅಡಿಯಲ್ಲಿ 350 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಅಜ್ಮೀರಾ ಗ್ರೂಪ್ಸ್ ನಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾಗಿರುವವರ ಪೈಕಿ ಸುಮಾರು ಒಟ್ಟು 950 ಜನರು ಸಿಸಿಬಿ ಕಚೇರಿಗೆ ಭೇಟಿ ನೀಡಿ ವಂಚನೆಗೊಳಗಾದ ಹಣಕಾಸಿನ ಸಂಬಂಧ ಮಾಹಿತಿ ನೀಡಿದ್ದಾರೆ. ಇದುವರೆಗಿನ ತನಿಖೆಯಲ್ಲಿ ಅಜ್ಮೀರಾ ಗ್ರೂಪ್ಸ್, 26 ಕೋಟಿ ರೂ. ವಂಚನೆ ಎಸಗಿರುವುದು ಕಂಡು ಬಂದಿದೆ. ಪ್ರಕರಣದ ತನಿಖೆಯನ್ನು ಸಿಸಿಬಿ ಎಸಿಪಿ ಪಿ.ಟಿ ಸುಬ್ರಹ್ಮಣ್ಯ ನೇತೃತ್ವದ ತಂಡ ಮಂದುವರಿಸಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ತಲೆ ಮರೆಸಿಕೊಂಡ ಅಬ್ದುಲ್ ದಸ್ತಗೀರ್: ಜಾಮೀನಿನ ಮೇರೆಗೆ ಜೈಲಿನಿಂದ ಹೊರಬಂದಿರುವ ಅಬ್ದುಲ್ ದಸ್ತಗೀರ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನ ಜಾಮೀನು ಮುಂಜೂರಾತಿಯನ್ನು ನ್ಯಾಯಾಲಯ ರದ್ದುಗೊಳಿಸಿ, ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.