ಅಜ್‌ಮೇರ್ : ಗೋಮಾಂಸ ಮಾರಾಟ ನಿಷೇಧವನ್ನು ಬೆಂಬಲಿಸಿದ್ದ ಅಜ್‌ಮೇರ್ ದರ್ಗಾದ ಆಧ್ಯಾತ್ಮಿಕ ಮುಖ್ಯಸ್ಥ (ದಿವಾನ್) ಸೈಯದ್ ಝೈನುಲ್ ಅಬೇದಿನ್ ಅವರನ್ನು ಇಂದು ಬುಧವಾರ ಅವರ ಸಹೋದರನೇ ಹುದ್ದೆಯಿಂದ ಕಿತ್ತು ಹಾಕಿದ್ದಾನೆ. ಮಾತ್ರವಲ್ಲ ಅಬೇದಿನ್ ಮುಸ್ಲಿಮನೇ ಆಲ್ಲ ಎಂದು ಗುಡುಗಿದ್ದಾನೆ.
ದೇಶದಲ್ಲಿ ಕೋಮು ಸಾಮರಸ್ಯಕ್ಕಾಗಿ ಗೋಹತ್ಯೆಯನ್ನು ನಿಷೇಧಿಸುವಂತೆ ಸರಕಾರವನ್ನು ಅಬೇದಿನ್ ಅವರು ಮೊನ್ನೆ ಸೋಮವಾರವಷ್ಟೇ ಒತ್ತಾಯಿಸಿದ್ದರು.
ಗೋಮಾಂಸ ಮಾರಾಟ ಹಾಗೂ ಗೋಹತ್ಯೆಯನ್ನು ನಿಷೇಧಿಸಬೇಕೆಂಬ ಅಬೇದಿನ್ ಹೇಳಿಕೆಯು ಧರ್ಮ ನಿಂದನೆಯಾಗಿದ್ದು ಈ ಕಾರಣಕ್ಕಾಗಿ ಆತ ಮುಸ್ಲಿಮನೇ ಅಲ್ಲ ಎಂದು ಅಬೇದಿನ ಸಹೋದರ ಸೈಯದ್ ಅಲ್ಲಾದೀನ್ ಆಲಿಮಿ ಹೇಳಿದ್ದಾನೆ.
ಅಬೇದಿನ್‌ನನ್ನು ಅಜ್‌ಮೇರ್ ದರ್ಗಾದ ಮುಖ್ಯಸ್ಥನ ಸ್ಥಾನದಿಂದ ಕಿತ್ತು ಹಾಕುವಲ್ಲಿ ತನಗೆ ಕುಟುಂಬದವರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾನೆ. ಅಬೇದಿನ್ ಕಿತ್ತು ಹಾಕಿರುವ ಆತ ತಾನೇ ದರ್ಗಾದ ಹೊಸ ದೀವಾನ್ (ಆಧ್ಯಾತ್ಮಿಕ ಮುಖ್ಯಸ್ಥ) ಎಂದು ಘೋಷಿಸಿಕೊಂಡಿದ್ದಾನೆ.
ಅಜ್‌ಮೇರ್‌ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾ ಅತ್ಯಂತ ಪ್ರಸಿದ್ಧ ದರ್ಗಾ ಆಗಿದ್ದು ಇಲ್ಲಿಗೆ ವರ್ಷಂಪ್ರತಿ ಈ ಉಪ ಖಂಡದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.
ಅಬೇದಿನ್ ಅವರನ್ನು ಅಜ್‌ಮೇರ್ ದರ್ಗಾ ಮುಖ್ಯಸ್ಥನ ಸ್ಥಾನದಿಂದ ಕಿತ್ತು ಹಾಕಿರುವಾಗಿ ಘೋಷಿಸಿರುವ ಅಲಾದೀನ್ ಆಲಿಮ್‌ನ ಕ್ರಮಕ್ಕೆ ದರ್ಗಾದ ಕಮಿಟಿಯು ಮಾನ್ಯತೆ ನೀಡಿಲ್ಲ.
ಇದೇ ವೇಳೆ ಅಬೇದಿನ್ ಅವರು ತನ್ನ ಸಹೋದರ ಆಲಿಮಿಯ ಕ್ರಮಕ್ಕೆ ಕಾನೂನು ಮಾನ್ಯತೆ ಇಲ್ಲ; ಏಕೆಂದರೆ ಇದು 1955ರ ದರ್ಗಾ ಖ್ವಾಜಾ ಸಾಹೇಬ್ ಕಾಯಿದೆಗೆ ಒಳಪಟ್ಟಿರುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಈ ವಿಷಯದಲ್ಲಿ ತಾನು ಕಾನೂನು ಅಭಿಪ್ರಾಯ ಪಡೆಯುವುದಾಗಿ ಹೇಳಿದ್ದಾರೆ.