Advertisement

ಅಜ್ಮೇರ್ 1.0 ಮತ್ತು ತಬ್ಲಿಘಿ 2.0

08:34 AM May 12, 2020 | Sriram |

ಬೆಂಗಳೂರು: ತಬ್ಲಿಘಿಗಳ ದಿಲ್ಲಿ ಪ್ರವಾಸದ ಬಳಿಕ ಈಗ ಅಜ್ಮೇರ್ ಪ್ರವಾಸಿಗರ ಮೂಲಕ ರಾಜ್ಯದಲ್ಲಿ ಕೋವಿಡ್ -19 ಹಾವಳಿ ಆರಂಭವಾಗಿದೆ. ರಾಜಸ್ಥಾನದ ಅಜ್ಮೇರ್ ಧಾರ್ಮಿಕ ಪ್ರವಾಸ ಮುಗಿಸಿ ಬಂದ 52 ಮಂದಿಯ ಪೈಕಿ 31 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಬೆಳಗಾವಿ, ಬಾಗಲಕೋಟೆ, ದಾವಣಗೆರೆಗಳಲ್ಲಿ ಸೋಂಕಿನ ಅಬ್ಬರಕ್ಕೆ ಕಾರಣವಾಗಿದೆ.

Advertisement

ಇನ್ನೊಂದೆಡೆ ಮತ್ತೆ 8 ಮಂದಿ ತಬ್ಲಿಘಿ ಗಳಲ್ಲಿಯೂ ಸೋಂಕು ಕಾಣಿಸಿ ಕೊಂಡಿದ್ದು, ಶಿವಮೊಗ್ಗವು ಅಪಾಯ ವಲಯ ಸೇರಲು ಕಾರಣವಾಗಿದೆ. ರವಿವಾರ ಸಂಜೆ ಕೋಲಾರಕ್ಕೂ ತಬ್ಲಿಘಿ ಸದಸ್ಯರು ಆಗಮಿಸಿದ್ದು, ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ.

ರವಿವಾರ ರಾಜ್ಯದಲ್ಲಿ ಒಟ್ಟು 54 ಪ್ರಕರಣಗಳು ದೃಢಪಟ್ಟಿವೆ. ಬೆಳಗಾವಿ ಯಲ್ಲಿ 22, ಬಾಗಲಕೋಟೆ ಮತ್ತು ಶಿವಮೊಗ್ಗಗಳಲ್ಲಿ ತಲಾ 8, ಉ.ಕನ್ನಡದ ಭಟ್ಕಳದಲ್ಲಿ 7, ಕಲಬುರಗಿಯಲ್ಲಿ 4, ಬೆಂಗಳೂರಿನಲ್ಲಿ 3, ಚಿಕ್ಕಬಳ್ಳಾಪುರ, ದಾವಣಗೆರೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ಖಚಿತವಾಗಿದೆ.

ಕರ್ನಾಟಕಕ್ಕೆ ಕಂಟಕ
ತಬ್ಲಿಘಿಗಳು ಮತ್ತು ಕೆಲವು ಅಜ್ಮೇರ್ ಧಾರ್ಮಿಕ ಪ್ರವಾಸಿಗರು ಕರ್ನಾಟಕದ ಕೋವಿಡ್ -19 ಕಂಟಕಕ್ಕೆ ಅಕ್ಷರಶಃ ಕಾರಣರಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ರವಿವಾರ ಒಂದೇ ದಿನ ಹಿಂದೆಂದಿಗಿಂತಲೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿವೆ.

ಕಳೆದ ಒಂದು ವಾರದಲ್ಲಿ ರಾಜ್ಯ ಮತ್ತೆ ತೀವ್ರಗತಿಯ ಕೋವಿಡ್ -19 ಹರಡುವಿಕೆಗೆ ಸಾಕ್ಷಿಯಾಗಿದೆ. ಅಂತಾರಾಜ್ಯ ಮತ್ತು ಜಿಲ್ಲೆಗಳಿಂದ ಬಂದ 20ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದರ ಜತೆಗೆ ರವಿವಾರ ಒಂದೇ ದಿನ ಬೆಳಗಾವಿ, ಬಾಗಲಕೋಟೆಗೆ ಬಂದ ಅಜ್ಮೇರ್ ಪ್ರವಾಸಿಗರಲ್ಲಿ ಹಾಗೂ ಶಿವಮೊಗ್ಗ -ಅಹ್ಮದಾಬಾದ್‌ ತಬ್ಲಿ ಜಮಾತ್‌ ಸದಸ್ಯರಲ್ಲಿ ಸೋಂಕು ದೃಢಪಟ್ಟಿದೆ. ಇದಕ್ಕೆ ಮೂಲ ಕಾರಣ ಅಂತಾರಾಜ್ಯ ಮತ್ತು ಅಂತರ್‌ ಜಿಲ್ಲಾ ಸಂಚಾರ ವಿನಾಯಿತಿ.

Advertisement

ನಿಪ್ಪಾಣಿ ಗಡಿ ಮೂಲಕ ಬಂದರು
ಬೆಳಗಾವಿ, ಬಾಗಲಕೋಟೆಯ 8 ಕುಟುಂಬಗಳ 38 ಮಂದಿ ಮಾರ್ಚ್‌ ನಲ್ಲಿ ರೈಲು ಮೂಲಕ ರಾಜಸ್ಥಾನದ ಅಜ್ಮೇರ್ ಗೆ ಪ್ರವಾಸ ಹೋಗಿದ್ದರು. ಲಾಕ್‌ಡೌನ್‌ ಸಡಿಲಿಕೆ ಬಳಿಕ ಮೇ 2ರಂದು ನಿಪ್ಪಾಣಿ ಗಡಿ ಮೂಲಕ ರಾಜ್ಯ ಪ್ರವೇಶಿಸಲು ಮುಂದಾಗಿದ್ದರು. ಅವರನ್ನು ಅಲ್ಲಿಯೇ ಕ್ವಾರಂಟೈನ್‌ ಮಾಡಲಾಗಿತ್ತು. ಮೇ 7ರಂದು ಪರೀಕ್ಷೆ ನಡೆಸಲಾಗಿದ್ದು, 30 ಮಂದಿಗೆ ಪಾಸಿಟಿವ್‌, 8 ಮಂದಿಗೆ ನೆಗೆಟಿವ್‌ ಬಂದಿದೆ. ಇವರಲ್ಲಿ ಬೆಳಗಾವಿಯ 22 ಮಂದಿ, ಬಾಗಲಕೋಟೆಯ 8 ಮಂದಿ ಸೇರಿದ್ದಾರೆ. ಮತ್ತೂಂದು ಪ್ರಕರಣದಲ್ಲಿ ದಾವಣಗೆರೆಯ 14 ಮಂದಿಯೂ ಅಜ್ಮೇರ್ ಗೆ ತೆರಳಿದ್ದು, ಮೇ 3 ರಂದು ದಾವಣಗೆರೆಗೆ ಮರಳಿದ್ದರು. ಇವರಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಶಿವಮೊಗ್ಗಕ್ಕೂ ಕಾಲಿಟ್ಟ ಸೋಂಕು
ಹಸುರು ವಲಯದಲ್ಲಿದ್ದ ಶಿವಮೊಗ್ಗಕ್ಕೆ ಅಹ್ಮದಾಬಾದ್‌ ತಬ್ಲಿಘಿ ಜಮಾತ್‌ ಸದಸ್ಯರ ಮೂಲಕ ಸೋಂಕು ಬಂದಿದೆ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆಯುತ್ತಿದ್ದ ತಬ್ಲಿಘಿ ಧಾರ್ಮಿಕ ಸಮಾವೇಶಕ್ಕೆ ಫೆಬ್ರವರಿಯಲ್ಲಿ ತೆರಳಿದ್ದ ಶಿಕಾರಿಪುರ ಮತ್ತು ತೀರ್ಥಹಳ್ಳಿಯ ಒಂಬತ್ತು ಮಂದಿ ಮೇ 8ರ ತಡರಾತ್ರಿ ಮರಳಿದ್ದಾರೆ. ಅವರನ್ನು ಮೆಗ್ಗಾನ್‌ ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಿ ಬಳಿಕ ಪರೀಕ್ಷಿಸಿದಾಗ ಎಂಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿಂದೆ ಇದೇ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಚಿತ್ರದುರ್ಗದ ಆರು ಮತ್ತು ತುಮಕೂರಿನ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು. ಕೋಲಾರಕ್ಕೂ 10 ತಬ್ಲಿಘಿ ಸದಸ್ಯರು ತೆರಳಿದ್ದು, ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next