Advertisement

Lokayukta: ಬಗೆದಷ್ಟೂ ಆಳಕ್ಕಿಳಿಯುತ್ತಿದೆ ಅಜಿತ್‌ ರೈ ಸಂಪತ್ತು !

10:25 PM Jul 02, 2023 | Team Udayavani |

ಬೆಂಗಳೂರು: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಗಳಿಸಿದ ಆರೋಪದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಕೆ.ಆರ್‌.ಪುರ ತಹಶೀಲ್ದಾರ್‌ ಅಜಿತ್‌ ರೈ ಅಕ್ರಮ ಬಗೆದಷ್ಟೂ ಆಳಕ್ಕೆ ಹೋಗುತ್ತಿದೆ. ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ ದಾಖಲೆ ಪರಿಶೀಲಿಸುತ್ತಿದ್ದಂತೆ ಸಂಪತ್ತಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ.

Advertisement

ಅಜಿತ್‌ ರೈ ಅವರನ್ನು ಲೋಕಾಯುಕ್ತ ಪೊಲೀ ಸರು ವಿಚಾರಣೆಗೊಳಪಡಿಸಿದ್ದು, ಇನ್ನಷ್ಟು ಕಡೆಗಳಲ್ಲಿ ಹೂಡಿಕೆ ಮಾಡಿರುವ ಆಸ್ತಿ ವಿವರ ನೀಡುವಂತೆ ಸೂಚಿಸಿದ್ದರು. ಆದರೆ ಅಜಿತ್‌ ಮಾತ್ರ ಗೊಂದಲದ ಹೇಳಿಕೆ ನೀಡಿ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಅಜಿತ್‌ ರೈ ಇನ್ನೂ ಹಲವು ಕಡೆ ಕೋಟ್ಯಂತರ ರೂ. ಮೌಲ್ಯದ ಸಂಪತ್ತು ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸದ್ಯ ಜಪ್ತಿ ಮಾಡಿರುವ ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ ಅನ್ನು ಎಫ್ಎಸ್‌ಎಲ್‌ ತಜ್ಞರು ಪರಿಶೀಲಿಸುತ್ತಿದ್ದಾರೆ.

ಸಹೋದರನೂ ಆರೋಪಿ?
ಅಜಿತ್‌ ಅವರ ಬೇನಾಮಿ ಆಸ್ತಿಯನ್ನು ಹೊಂದಿದ್ದ ಸಹೋದರ ಹಾಗೂ ಸ್ನೇಹಿತರನ್ನೂ ಆರೋಪಿಗಳನ್ನಾಗಿ ಮಾಡಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿಗೆ ತಾಗಿಕೊಂಡಿರುವ ದೇವನಹಳ್ಳಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದಲ್ಲಿ ನಿವೇಶನ, ಜಮೀನು ಸೇರಿ ಕೋಟ್ಯಂತರ ರೂ. ಮೌಲ್ಯದ 150 ಎಕ್ರೆ ಜಾಗ ಖರೀದಿಸಿರುವುದು ಬೆಳಕಿಗೆ ಬರುತ್ತಿದ್ದಂತೆ ಇನ್ನಷ್ಟು ಕಡೆ ಜಮೀನು ಹೊಂದಿರುವ ಸುಳಿವು ಸಿಕ್ಕಿದೆ.

ಕೆಲವು ಭಾಗಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ನಿವೇಶನಗಳನ್ನು ಸ್ನೇಹಿತರ ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ನೀಡಿರುವುದು ಗೊತ್ತಾಗಿದೆ. ಈಗ ಮತ್ತೆ 3 ಐಷಾರಾಮಿ ಕಾರುಗಳನ್ನು ಹೊಂದಿರುವುದು ಪತ್ತೆಯಾಗಿದೆ. ಜಪ್ತಿ ಮಾಡಿರುವ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗ್ಳಲ್ಲಿರುವ ರಹಸ್ಯವನ್ನು ಭೇದಿಸಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ.

ಅಜಿತ್‌ ರೈ ಮನೆಯ ಚಾವಡಿಯಲ್ಲಿ 4.53 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾದರೆ, ಹೋಮ್‌ ಥಿಯೇಟರ್‌, ಸ್ಮಾರ್ಟ್‌ ಟಿವಿ, ಮಕ್ಕಳ ಆಟಿಕೆಗಳು, ಸೋಫಾಸೆಟ್‌ಗಳ ಮೊತ್ತ 4 ಲಕ್ಷ ರೂ.ಗೂ ಅಧಿಕ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಮನೆಯ ಹೊರಾಂಗಣದಲ್ಲಿ ಬೆಲೆ ಬಾಳುವ ಬ್ರ್ಯಾಂಡೆಡ್‌ ಶೂ, ಚಪ್ಪಲಿಗಳ ಮೌಲ್ಯವೇ 70 ಸಾವಿರಕ್ಕೂ ಅಧಿಕವಾಗಿದೆ. ಅಜಿತ್‌ ರೈಗೆ ಇಬ್ಬರು ಮಕ್ಕಳಿದ್ದು, ಅವರ ಕೊಠಡಿಯಲ್ಲಿ 3.80 ಲಕ್ಷ ರೂ. ಮೊತ್ತದ ವಸ್ತುಗಳು ಸಿಕ್ಕಿವೆ. ಬೆಡ್‌ ರೂಂನಲ್ಲಿ 4.50 ಲಕ್ಷ ರೂ. ಮೌಲ್ಯದ ವಸ್ತುಗಳು, ಡೈನಿಂಗ್‌ ಹಾಲ್‌ ಹಾಗೂ ಅಡುಗೆ ಕೋಣೆಯಲ್ಲಿ 5.83 ಲಕ್ಷ ರೂ., 50 ಸಾವಿರ ರೂ. ಮೌಲ್ಯದ ಗೃಹೋಪಯೋಗಿ ವಸ್ತು, 795 ಗ್ರಾಂ ಚಿನ್ನ, 7 ಕೆಜಿ 520 ಗ್ರಾಂ ಬೆಳ್ಳಿ ಪತ್ತೆಯಾಗಿದೆ.

Advertisement

ಜಿಮ್‌ ಉಪಕರಣ, ಲ್ಯಾಪ್‌ಟಾಪ್‌ನಂತಹ ಸುಮಾರು 35 ತರದ ವಸ್ತುಗಳು, 1.26 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್‌ ವಸ್ತುಗಳು ಸಿಕ್ಕಿವೆ. 7.63 ಲಕ್ಷ ರೂ. ಮೊತ್ತದ 27 ವಾಚ್‌ಗಳು, 16 ಮೊಬೈಲ್‌ಗ‌ಳನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದು, ಎಲ್ಲ ವಸ್ತುಗಳ ಪಂಚನಾಮೆ ಮಾಡಲಾಗಿದೆ.

ಇ.ಡಿ. ಸಂಕಷ್ಟ ?
ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳಿಗಳಿಗೆ ಈ ಕುರಿತು ಪತ್ರ ಬರೆದು ಮಾಹಿತಿ ನೀಡಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪ್ರಾಥಮಿಕ ಹಂತದ ತನಿಖೆ ನಡೆಸಿದ ಬಳಿಕ ಪ್ರಕರಣಕ್ಕೆ ಇ.ಡಿ. ಪ್ರವೇಶಿಸುವ ಸಾಧ್ಯತೆಗಳಿವೆ. ಇ.ಡಿ.ಯ ಕೆಲವು ಅಧಿಕಾರಿಗಳು ಈಗಾಗಲೇ ಅಜಿತ್‌ ರೈ ಬೇನಾಮಿ ಆಸ್ತಿ, ಅಕ್ರಮ ಹಣ ವರ್ಗಾವಣೆ ಮಾಡಿರುವ ಕುರಿತು ಗೌಪ್ಯವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

16 ಲೀಟರ್‌ ಮದ್ಯ
ಮಾಸ್ಟರ್‌ ಬೆಡ್‌ ರೂಮ್‌ನಲ್ಲಿ 3.19 ಲಕ್ಷ ರೂ., ಡೈನಿಂಗ್‌ ಹಾಲ್‌ನಲ್ಲಿ ದೇಶಿ ಹಾಗೂ ವಿದೇಶಿಯ ವಿವಿಧ ಮಾದರಿಯ 16.250 ಲೀಟರ್‌ ಮದ್ಯ ಇರುವುದು ಪತ್ತೆಯಾಗಿತ್ತು. ಗೃಹೋಪಯೋಗಿ ವಸ್ತುಗಳ ಅಂದಾಜು ಬೆಲೆ 21.81 ಲಕ್ಷ ರೂ. ಆಗಿದೆ. 100 ಗ್ರಾಂನ 1 ಕಡ, 183 ಗ್ರಾಂ ತೂಕದ ಸರ, 108 ಗ್ರಾಂ ಲಾಂಗ್‌ ಸರ, ಮುತ್ತಿನ ಹಾರ, ಉಂಗುರ, ಬ್ರಾಸ್‌ಲೇಟ್‌ ಸಹಿತ 19.87 ಲಕ್ಷ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ. ಅಜಿತ್‌ ರೈ ಹಾಗೂ ಪತ್ನಿ ಹೆಸರಲ್ಲಿ ಮೂರು ಬ್ಯಾಂಕ್‌ ಖಾತೆಗಳಿರುವುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next