ಮುಂಬೈ: ತಿಂಗಳುಗಳ ತಿಕ್ಕಾಟದ ನಂತರ ಕೊನೆಗೂ ಉದ್ಧವ್ ಠಾಕ್ರೆ ನೇತೃತ್ವದ ಸರಕಾರ ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಗುರುವಾರ ಸಿಎಂ ಉದ್ಧವ್ ಠಾಕ್ರೆ ಜೊತೆ ಇತರ ಆರು ಜನ ಪ್ರಮಾಣ ವಚನ ಸ್ವೀಕರಿಸಿದ್ದರು. ಮುಂದಿನ ಪ್ರಮಾಣ ವಚನಕ್ಕೆ ದಿನಾಂಕ ನಿಗದಿಯಾಗಿದ್ದು, ಡಿಸೆಂಬರ್ 3ಕ್ಕೆ ಕಾರ್ಯಕ್ರಮ ನಡೆಯಲಿದೆ.
ಉದ್ಧವ್ ಠಾಕ್ರೆ ಸರಕಾರಕ್ಕೆ ಒಂದು ಹಂತದಲ್ಲಿ ತಡೆಯಾಗಿದ್ದ ಎನ್ ಸಿಪಿಯ ಅಜಿತ್ ಪವಾರ್ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಲು ನಿರ್ಧಾರವಾಗಿದೆ ಎಂದು ವರದಿಯಾಗಿದೆ.
ಶಿವಸೇನಾ- ಕಾಂಗ್ರೆಸ್- ಎನ್ ಸಿಪಿ ಮೈತ್ರಿ ಸರಕಾರದಲ್ಲಿ ಶಿವಸೇನೆ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರೆ, ಕಾಂಗ್ರೆಸ್ ಮತ್ತು ಎನ್ ಸಿಪಿಯಿಂದ ತಲಾ ಒಬ್ಬರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಕೆಲ ದಿನಗಳ ಹಿಂದೆ ಅಜಿತ್ ಪವಾರ್ ತನ್ನ ಬೆಂಬಲಿಗ ಶಾಸಕರೊಂದಿಗೆ ಏಕಾಏಕಿ ಬಿಜೆಪಿಗೆ ಬೆಂಬಲ ನೀಡಿ ಫಡ್ನವೀಸ್ ನೇತ್ರತ್ವದ ಸರಕಾರ ರಚನೆಗೆ ಕಾರಣರಾಗಿದ್ದರು. ಅದರಲ್ಲಿ ಉಪಮುಖ್ಯಮಂತ್ರಿಯೂ ಆಗಿದ್ದರು. ಅದರೆ ನಂತರ ನಡೆದ ಬೆಳವಣಿಗೆಯಲ್ಲಿ ನಾಲ್ಕೇ ದಿನದಲ್ಲಿ ರಾಜೀನಾಮೆ ನೀಡಿ ಈಗ ಹೊಸ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಲಿದ್ದಾರೆ.