ಮುಂಬಯಿ: ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರನ್ನು ಮಹಾ ವಿಕಾಸ್ ಅಘಾಡಿ (ಎಂವಿಎ) ಸರಕಾರ ರಕ್ಷಿಸುತ್ತಿದೆ ಎಂಬ ವಿಪಕ್ಷಗಳ ಆರೋಪಗಳ ಮಧ್ಯೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಂಗಳವಾರ ಎಂವಿಎ ಸರಕಾರ ಯಾರನ್ನೂ ರಕ್ಷಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದು ಎಂವಿಎ ಸರಕಾರ. ನಾವು ಯಾರನ್ನೂ ರಕ್ಷಿಸುತ್ತಿಲ್ಲ. ಸಮಗ್ರ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದರೂ ಅಪರಾಧ ದೃಢಪಟ್ಟರೆ ಅವರನ್ನು ಶಿಕ್ಷಿಸಲಾಗುವುದು. ಎಟಿಎಸ್ ನಡೆಸುತ್ತಿರುವಂತೆ ನಾವು ಅವರನ್ನು ತನಿಖೆ ಮಾಡುತ್ತೇವೆ. ನಾವು ಯಾವಾಗಲೂ ನ್ಯಾಯದ ಪರವಾಗಿದ್ದೇವೆ ಎಂದು ಹೇಳಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ: ಮಲ್ಲಿಕ್ ಬಾಂಬ್ ಹೆದರಿಕೆ ಪ್ರಕರಣ ಮತ್ತು ಮನ್ಸೂಖ್ ಹಿರೇನ್ ಕೊಲೆ ಪ್ರಕರಣದಲ್ಲಿ ಎಟಿಎಸ್ ಮತ್ತು ಎನ್‌ಐಎ ಪಕ್ಷಪಾತವಿಲ್ಲದ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರೆಂದು ಪರಿಗಣಿಸಲ್ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ, ಎನ್‌ಸಿಯ ಹಿರಿಯ ನಾಯಕ ನವಾಬ್ ಮಲಿಕ್ ಮಂಗಳವಾರ ಹೇಳಿದ್ದಾರೆ.ಎಟಿಎಸ್ ಮತ್ತು ಎನ್‌ಐಎ ಪಕ್ಷಪಾತವಿಲ್ಲದೆ ವಿಚಾರಣೆ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಸಚಿವಾಲಯ ಅಥವಾ ವರ್ಗಾವಣೆಯಲ್ಲಿ ಯಾವುದೇ ಬದಲಾವಣೆಗಳು ನಡೆಯುತ್ತಿಲ್ಲ ಎಂದು ಸ್ಪಷ್ಟಡಿಸಿದ್ದಾರೆ.
ಸರಕಾರ ತಪ್ಪಿತಸ್ಥರನ್ನು ರಕ್ಷಿಸುತ್ತಿದೆ: ಫಡ್ನವೀಸ್ :
ಮನ್ಸೂಖ್ ಹಿರೇನ್ ಕೊಲೆ ಪ್ರಕರಣ ಬಹಿರಂಗವಾಗುವವರೆಗೂ ಸಚಿನ್ ವಾಝೆ ಪ್ರಕರಣ ಮುಗಿಯುವುದಿಲ್ಲ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪುನಃರುಚ್ಚರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿನ್ ವಾಝೆ ಪ್ರಕರಣ ಇನ್ನೂ ಮುಗಿದಿಲ್ಲ. ಹಿರೇನ್ ಕೊಲೆ ಪ್ರಕರಣ ಬಹಿರಂಗವಾಗುವವರೆಗೂ ನಾವು ಬಿಡುವುದಿಲ್ಲ. ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರಕಾರವು ವಾಝೆಯನ್ನು ರಕ್ಷಿಸುತ್ತಿದೆ ಎಂದು ಮತ್ತೂಮ್ಮೆ ಆರೋಪಿಸಿದ್ದಾರೆ.