ಹೊಸದಿಲ್ಲಿ: ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ಅಜಿತ್ ದೋವಲ್ ಅವರನ್ನು ಕೇಂದ್ರ ಸರಕಾರ ನೇಮಕ ಮಾಡಿದೆ.
ಸಂಪುಟದ ನೇಮಕಾತಿ ಸಮಿತಿಯು ಪಿ.ಕೆ. ಮಿಶ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ಮರು ನೇಮಕ ಮಾಡಿದೆ.
ಡಾ.ಪಿ.ಕೆ. ಮಿಶ್ರಾ ಮತ್ತು ಅಜಿತ್ ದೋವಲ್ ಮರುನೇಮಕಗೊಳ್ಳುವುದರೊಂದಿಗೆ, ಇಬ್ಬರು ನಿವೃತ್ತ ಅಧಿಕಾರಿಗಳು ಪ್ರಧಾನ ಮಂತ್ರಿಯೊಬ್ಬರಿಗೆ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನ ಸಲಹೆಗಾರರಾಗಿದ್ದಾರೆ.
1968 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ದೋವಲ್ ಅವರು ಅಪರೂಪದ ಕಾರ್ಯತಂತ್ರದ ಚಿಂತನೆ ಮತ್ತು ಕಾರ್ಯಾಚರಣೆಯ ಯೋಜನೆಯನ್ನು ರೂಪಿಸುವಲ್ಲಿ ನಿಪುಣರು. ಉಗ್ರವಾದ ನಿಗ್ರಹ ತಜ್ಞರು ಮತ್ತು ಪರಮಾಣು ವಿಷಯಗಳ ಬಗ್ಗೆ ಪರಿಣಿತರಾಗಿ ತನ್ನದೇ ಆದ ಖ್ಯಾತಿಯನ್ನು ವಿಶ್ವ ಮಟ್ಟದಲ್ಲಿ ಹೊಂದಿದ್ದಾರೆ.
ಡಾ. ಮಿಶ್ರಾ ಅವರು 1972 ರ ಬ್ಯಾಚ್‌ನ ನಿವೃತ್ತ ಅಧಿಕಾರಿಯಾಗಿದ್ದು, ಅವರು ಭಾರತ ಸರಕಾರಕ್ಕೆ ಕೃಷಿ ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ ಕಳೆದ ಒಂದು ದಶಕದಿಂದ ಪಿಎಂ ಮೋದಿಯವರೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರಿಗೂ ಅವರ ಸೇವಾ ಅವಧಿಯಲ್ಲಿ ಕ್ಯಾಬಿನೆಟ್ ಮಂತ್ರಿಯ ಶ್ರೇಣಿಯ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ.