“ನಾನು ಸಿನಿಮಾ ಇಂಡಸ್ಟ್ರಿಗೆ ಬಂದು 20 ವರ್ಷವಾಯ್ತು. ಇಲ್ಲಿಯವರೆಗೆ ಯಾವ ಸಿನಿಮಾಗಳಲ್ಲೂ ಸಿಕ್ಕಿರದಂಥ ಕ್ಯಾರೆಕ್ಟರ್ “ಕೃಷ್ಣ ಟಾಕೀಸ್’ನಲ್ಲಿ ಸಿಕ್ಕಿದೆ. ಕೃಷ್ಣ ಸೀರಿಸ್ ಜನಕ್ಕೆ ಇಷ್ಟವಾಗುತ್ತಿದ್ದಂತೆ, ಆಡಿಯನ್ಸ್, ನನ್ನ ಫ್ಯಾನ್ಸ್ ಕೂಡ ಹೊಸಥರದ ಪಾತ್ರದಲ್ಲಿ ನನ್ನನ್ನು ನೋಡಲು ಬಯಸುತ್ತಿದ್ದರು. ಅವರೆಲ್ಲರಿಗೂ ಸರ್‌ಪ್ರೈಸ್ ಅನಿಸುವಂಥ ಕ್ಯಾರೆಕ್ಟರ್ “ಕೃಷ್ಣ ಟಾಕೀಸ್’ನಲ್ಲಿದೆ. ಹಾಗಾಗಿ ನನಗೂ “ಕೃಷ್ಣ ಟಾಕೀಸ್’ ಮೇಲೆ ತುಂಬ ನಿರೀಕ್ಷೆ ಇದೆ’ ಇದು ನಟ ಅಜೇಯ್ ರಾವ್ ಮಾತು.
ಈ ವಾರ ಅಜೇಯ್ ರಾವ್ ಅಭಿನಯದ “ಕೃಷ್ಣ ಟಾಕೀಸ್’ ಚಿತ್ರ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಮಾತಿಗಿಳಿದ ಅಜೇಯ್ ರಾವ್ “ಕೃಷ್ಣ ಟಾಕೀಸ್’ ಚಿತ್ರ ಮತ್ತು ಪಾತ್ರದ ಬಗ್ಗೆ ಒಂದಷ್ಟು ಮಾತನಾಡಿದರು.
“ಇಲ್ಲಿಯವರೆಗೆ “ಕೃಷ್ಣ’ ಸೀರಿಸ್‌ನಲ್ಲಿ ನಾನು ಮಾಡಿರುವ ಕ್ಯಾರೆಕ್ಟರ್‌ಗಳು ಲೈವ್ಲಿಯಾಗಿ, ರೊಮ್ಯಾಂಟಿಕ್ ಆಗಿ ಇರುತ್ತಿದ್ದವು. ಆದ್ರೆ “ಕೃಷ್ಣ ಟಾಕೀಸ್’ನಲ್ಲಿ ತುಂಬ ಸೀರಿಯಸ್ ಆಗಿರುವಂಥ ಕ್ಯಾರೆಕ್ಟರ್ ಸಿಕ್ಕಿದೆ. ಇದರಲ್ಲಿ ನನ್ನದು ಒಬ್ಬ ಜರ್ನಲಿಸ್ಟ್ ಕ್ಯಾರೆಕ್ಟರ್. ನನ್ನ ಕ್ಯಾರೆಕ್ಟರ್, ಮ್ಯಾನರಿಸಂ ಎಲ್ಲವೂ ಬೇರೆಯದ್ದೇ ಆಗಿರುತ್ತದೆ.
ಈಗಾಗಲೇ “ಕೃಷ್ಣ ಟಾಕೀಸ್’ ಪೋಸ್ಟರ್, ಟೀಸರ್, ಟ್ರೇಲರ್ ಎಲ್ಲದರಲ್ಲೂ ಅದರ ಝಲಕ್ ಕಾಣುತ್ತದೆ. ಆಡಿಯನ್ಸ್ ಕೂಡ ಈ ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಚೇಂಜ್ ಓವರ್ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ’ ಎನ್ನುತ್ತಾರೆ ಅಜೇಯ್ ರಾವ್. ಇನ್ನು “ಕೃಷ್ಣ ಟಾಕೀಸ್’ ಚಿತ್ರ ಅಂದುಕೊಂಡಂತೆ ತೆರೆಮೇಲೆ ಮೂಡಿಬರಲು ಕಾರಣ ಚಿತ್ರತಂಡದ ಎಫರ್ಟ್ ಅನ್ನೋದು ಅಜೇಯ್ ಮಾತು.
“ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಈ ಸಿನಿಮಾದ ಕೆಲಸಗಳು ಶುರುವಾಯ್ತು. ಅದಾದ ನಂತರ ಒಂದು ವರ್ಷ ಕೋವಿಡ್ ಭಯದಿಂದ ಏನೂ ಮಾಡಲಾಗಲಿಲ್ಲ. ಸಾಕಷ್ಟು ಅಡೆ-ತಡೆಗಳು, ಕಷ್ಟಗಳು ಇದ್ದರೂ ನಿರ್ಮಾಪಕರು, ನಿರ್ದೇಶಕರು ಅಂದುಕೊಂಡಂತೆ ಸಿನಿಮಾ ಮಾಡಿದ್ದಾರೆ. ಇಡೀ ಟೀಮ್ ಎಫರ್ಟ್‌ನಿಂದ ಇಂಥದ್ದೊಂದು ಸಿನಿಮಾ ಅದ್ಭುತವಾಗಿ ಮಾಡಲು ಸಾಧ್ಯವಾಯ್ತು’ ಎನ್ನುತ್ತಾರೆ ಅಜೇಯ್.
“ಈಗಾಗಲೇ ರಿಲೀಸ್ ಆಗಿರುವ “ಕೃಷ್ಣ ಟಾಕೀಸ್’ನ ಟೀಸರ್, ಟ್ರೇಲರ್, ಸಾಂಗ್ಸ್ ಎಲ್ಲವೂ ಹಿಟ್ ಆಗಿದೆ. ಆಡಿಯನ್ಸ್ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದೆ. ಹೊರಗಡೆ ಕೋವಿಡ್ ಭಯ ಇದ್ರೂ, ಥಿಯೇಟರ್‌ನಲ್ಲಿ ಆ ಭಯ ಬೇಡ. ಕಂಟೆಂಟ್ ನೋಡಿ ಭಯಪಡುವಂಥ ಸಿನಿಮಾ ಇದು. ಆಡಿಯನ್ಸ್‌ನ ಎರಡೂವರೆ ಗಂಟೆ ಹಿಡಿದು ಕೂರಿಸಿ, ಹೊರ ಜಗತ್ತನ್ನು ಮರೆಯುವಂಥ ಮಾಡುವ ಸಿನಿಮಾ ಇದು’ ಎಂದು ಪ್ರೇಕ್ಷಕರಿಗೆ ಅಭಯ ನೀಡುವ ಮಾತುಗಳನ್ನಾಡುತ್ತಾರೆ ಅಜೇಯ್ ರಾವ್.
ಇನ್ನು ಸಸ್ಪೆನ್ಸ್ ಕಂ ಹಾರರ್ – ಥ್ರಿಲ್ಲರ್ ಶೈಲಿಯ “ಕೃಷ್ಣ ಟಾಕೀಸ್’ನಲ್ಲಿ ಅಜೇಯ್ ರಾವ್‌ಗೆ ಅಪೂರ್ವ ಮತ್ತು ಸಿಂಧೂ ಲೋಕನಾಥ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿಕ್ಕಣ್ಣ, ನಿರಂತ್, ಮಂಡ್ಯ ರಮೇಶ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಶೋಭರಾಜ್, ಯಶ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.
ಕೆಲವರ್ಷಗಳ ಹಿಂದೆ ಲಕ್ನೋದ ಥಿಯೇಟರ್‌ನಲ್ಲಿ ನಡೆದ ಘಟನೆ ಕುರಿತು, ನ್ಯೂಸ್ ಪೇಪರ್‌ನಲ್ಲಿ ಬಂದ ಸುದ್ದಿ ಈ ಚಿತ್ರದ ಕಥೆಗೆ ಕಾರಣವಾಯ್ತು. ಸುಮಾರು 2 ವರ್ಷ ಸ್ಕ್ರಿಪ್ಟ್ ವರ್ಕ್ ನಂತರ, ಆ ಕಥೆ ಅಂತಿಮವಾಗಿ ಈಗ ಸಿನಿಮಾ ರೂಪದಲ್ಲಿ ಸ್ಕ್ರೀನ್ ಮೇಲೆ ಬರುತ್ತಿದೆ. ಕನ್ನಡದಲ್ಲಿ ಈ ಥರದ ಹಾರರ್-ಥ್ರಿಲ್ಲರ್ ಸಿನಿಮಾ ಬಂದಿದ್ದು ತುಂಬ ಕಡಿಮೆ. ಖಂಡಿತಾ ಈ ಸಿನಿಮಾ ನಮ್ಮೆಲ್ಲರಿಗೂ ಒಂದೊಳ್ಳೆ ಬ್ರೇಕ್ ನೀಡುತ್ತದೆ ಎಂಬ ಕಾನ್ಫಿಡೆನ್ಸ್ ಇದೆ.
ಕನ್ನಡದ ಮಟ್ಟಿಗೆ ಇದೊಂದು ಹೊಸಥರದ ಸಿನಿಮಾ. ಈಗಾಗಲೇ “ಕೃಷ್ಣ ಟಾಕೀಸ್’ನ ಟೀಸರ್, ಟ್ರೇಲರ್, ಸಾಂಗ್ಸ್ ಎಲ್ಲವೂ ಹಿಟ್ ಆಗಿದೆ. ಸಿನಿಮಾ ಸ್ವಲ್ಪ ಲೇಟ್ ಆದ್ರೂ, ಲೇಟೆಸ್ಟ್ ಆಗಿ ಬರುತ್ತಿದೆ. ಆಡಿಯನ್ಸ್ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ. ಸುಮಾರು 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸಿನಿಮಾ ರಿಲೀಸ್‌ಗೆ ಪ್ಲಾನ್ ಮಾಡಿಕೊಂಡಿದ್ದೇವೆ. ಆಡಿಯನ್ಸ್‌ಗೆ ಸಿನಿಮಾ ಇಷ್ಟವಾಗುತ್ತದೆ ಎಂಬ ನಂಬಿಕೆ ಬಲವಾಗಿದೆ.
- ಗೋವಿಂದರಾಜು ಆಲೂರು, ನಿರ್ಮಾಪಕ
ಜಿ.ಎಸ್.ಕಾರ್ತಿಕ್ ಸುಧನ್