Advertisement

 ಅಜೆಕಾರು ಕಲಾಭಿಮಾನಿ ಬಳಗ ದ್ವಿತೀಯ ಹಂತದ ಸರಣಿ ತಾಳಮದ್ದಳೆ 

02:00 PM Aug 15, 2018 | |

ನವಿ ಮುಂಬಯಿ: ಊರಿನ ಕಲಾವಿದರನ್ನು ದೂರದ ಮುಂಬಯಿಗೆ ಆಹ್ವಾನಿಸಿ, ಯಕ್ಷಗಾನ, ತಾಳಮದ್ದಳೆಯನ್ನು  ನಿರಂತರವಾಗಿ ಪ್ರದರ್ಶಿಸುತ್ತಿರುವ ಅಜೆಕಾರು ಕಲಾಭಿಮಾನಿ ಬಳಗದ ಕಾರ್ಯ ಮೆಚ್ಚುವಂಥದ್ದಾಗಿದೆ. ವಿಶೇಷವೆಂದರೆ ಕಲಾವಿದರ ಪ್ರತಿಭೆಗೆ ವೇದಿಕೆಯನ್ನು ಕಲ್ಪಿಸಿ ಅವರಿಗೆ ಆರ್ಥಿಕವಾಗಿ ಸಹಕರಿಸುವ ಗುಣವನ್ನು ಬಳಗ ಹೊಂದಿದೆ. ಇದು ನಿಜವಾಗಿಯೂ ಒಂದು ಸಾಧನೆಯಾಗಿದೆ. ಇದೆಲ್ಲಾ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಸಂಘಟನಾ ಚತುರತೆಗೆ ಸಾಕ್ಷಿಯಾಗಿದೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿರುವ ಅವರ ಈ ಕಾರ್ಯಕ್ಕೆ ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಬೇಕು ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ನುಡಿದರು.

Advertisement

ಆ. 11ರಂದು ಸಂಜೆ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸನ್ನಿಧಾನದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಆಶ್ರಯದಲ್ಲಿ ಜರಗಿದ ತವರೂರ ಕಲಾವಿದರ ಕೂಡುವಿಕೆಯ ದ್ವಿತೀಯ ಹಂತದ ಸರಣಿ ತಾಳಮದ್ದಳೆಯ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಊರಿನ ಕಲಾವಿದರನ್ನು ಇಲ್ಲಿಗೆ ಕರೆತರುದು ಅಷ್ಟೊಂದು ಸುಲಭದ ಮಾತಲ್ಲ. ಇಂದು ಉದ್ಘಾಟನೆಗೊಂಡ ಈ ಸರಣಿ ತಾಳಮದ್ದಳೆಯು ನಿರಂತರವಾಗಿ 16 ಪ್ರದರ್ಶನಗಳನ್ನು ಕಾಣಲಿದ್ದು, ಈ ಎಲ್ಲಾ ಪ್ರದರ್ಶನಗಳು ಯಶಸ್ವಿಯಾಗಿ ನೆರವೇರಲಿ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರಿಗೆ ಇನ್ನಷ್ಟು ಕಲಾವಿದರಿಗೆ ಆಸರೆಯಾಗಿ ನಿಲ್ಲುವ ಶಕ್ತಿಯನ್ನು ಶ್ರೀ ಮೂಕಾಂಬಿಕೆಯು ಅನುಗ್ರಹಿಸಲಿ ಎಂದು ಹಾರೈಸಿದರು.

ಆಶೀರ್ವಚನ ನೀಡಿದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್‌ ಭಟ್‌ ಇವರು, ತಾಳಮದ್ದಳೆಯ ಕಲಾವಿದರು ಛಂದಸ್ಸಿನ ಅಭ್ಯಾಸ ಹಾಗೂ ವ್ಯಾಕರಣದ ತಿಳಿವಳಿಕೆಯನ್ನು ಪಡೆಯಬೇಕಾಗುತ್ತದೆ. ಇದು ಎಲ್ಲರಿಗೂ ಧಕ್ಕುವಂಥದಲ್ಲ.  ಓರ್ವ ಕಲಾವಿದರಾಗಿ ಅವರ ನೋವು-ನಲಿವುಗಳನ್ನು ಹತ್ತಿರದಿಂದ ಬಲ್ಲವರಾದ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು, ಪ್ರಬುದ್ಧ ಕಲಾವಿದರನ್ನು ಗೌರವಿಸುತ್ತಿರುವುದು ಹೆಮ್ಮೆಯಾಗುತ್ತಿದೆ. ಇದೊಂದು ಬಹುದೊಡ್ಡ ಸಾಹಸವಾಗಿದೆ. ಅವರ ಕಲಾ ಸೇವೆ ನಿರಂತರವಾಗಿ ನಡೆಯತ್ತಿರಲಿ ಎಂದು ನುಡಿದರು.

ಪ್ರಧಾನ ಅರ್ಚಕ ಗುರುಪ್ರಸಾದ್‌ ಭಟ್‌, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸರಣಿ ಯಕ್ಷಗಾನ ತಾಳಮದ್ದಳೆಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಉದ್ಯಮಿಗಳಾದ ಬಾಲಕೃಷ್ಣ ಶೆಟ್ಟಿ ಕುಕ್ಕೆಹಳ್ಳಿ, ಸಂತೋಷ್‌ ಹೆಗ್ಡೆ ಅಜೆಕಾರು, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಜತೆ ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು, ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿ ಅಜೆಕಾರು, ಮಂದಿರದ ಕಾರ್ಯದರ್ಶಿ ಸುರೇಶ್‌ ಕೋಟ್ಯಾನ್‌ ಉಪಸ್ಥಿತರಿದ್ದರು.

Advertisement

ಈ ಎಲ್ಲಾ ಅತಿಥಿ-ಗಣ್ಯರನ್ನು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವು ಗೌರವಿಸಿದರು. ಯಕ್ಷಗಾನ ತಾಳಮದ್ದಳೆ ಬಳಗದ ಎಲ್ಲಾ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರನ್ನು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ಇದೇ ವೇಳೆ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ವತಿಯಿಂದ ತಂಡದ ಪ್ರಬುದ್ಧ ಕಲಾವಿದ ಅರ್ಥದಾರಿ ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ ಅವರನ್ನು ಶಾಲು ಹೊದೆಸಿ, ಫಲಪುಷ್ಪ ನೆನಪಿನ ಕಾಣಿಕೆಯೊಂದಿಗೆ ಸತ್ಕರಿಸಲಾಯಿತು. ಕಾರ್ಯಕ್ರಮವನ್ನು ಘನ್ಸೋಲಿ ಮೂಕಾಂಬಿಕಾ ಮಂದಿರದ ಗೌರವ ಕಾರ್ಯದರ್ಶಿ ಸುರೇಶ್‌ ಕೋಟ್ಯಾನ್‌ ನಿರೂಪಿಸಿದರು. ಬಾಲಕೃಷ್ಣ ಶೆಟ್ಟಿ ಅವರು ವಂದಿಸಿದರು. ಬಳಿಕ ಪ್ರಬುದ್ಧ ಕಲಾವಿದರ ಕೂಡುವಿಕೆಯಲ್ಲಿ ಶುಕ್ರ ಸಂಜೀವಿನಿ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಸಾದ್‌ ಆಳ್ವ ತಲಪಾಡಿ, ಚೆಂಡೆಯಲ್ಲಿ ದಯಾನಂದ ಶೆಟ್ಟಿಗಾರ್‌ ಮಿಜಾರ್‌, ಮದ್ದಳೆಯಲ್ಲಿ ಪ್ರಶಾಂತ್‌ ಶೆಟ್ಟಿ ವಗೆನಾಡು ಅವರು ಭಾಗವಹಿಸಿದರು. ಕಲಾವಿದರುಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ, ಸದಾಶಿವ ಆಳ್ವ ತಲಪಾಡಿ, ವೆಂಕಟೇಶ್‌ ಕುಮಾರ್‌ ಉಳುವಾಣ, ವಿಜಯ ಶಂಕರ ಆಳ್ವ ಅಳಿಕೆ ಅವರು ಸಹಕರಿಸಿದರು. ದಿನೇಶ್‌ ಶೆಟ್ಟಿ ಸಹಕರಿಸಿದರು.  ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಯಕ್ಷಗಾನ ಮತ್ತು ತಾಳಮದ್ದಳೆ ಕಲಾ ಪ್ರಕಾರ ನಮ್ಮ ತವರೂರಿನ ಶ್ರೇಷ್ಠಕಲೆಯಾಗಿದೆ. ಈ ಕಲೆಯನ್ನು ಮುಂಬಯಿ ಮಹಾನಗರದಲ್ಲಿ ಉಳಿಸಿ-ಬೆಳೆಸುವಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಕಳೆದ ಹಲವಾರು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ಕಲಾರಸಿಕರಾದ ನಾವೆಲ್ಲರೂ ಸಹಕರಿಸುವ ಅಗತ್ಯವಿದೆ.
ಕೆ. ಕೆ. ಹೆಬ್ಟಾರ್‌ , 
ಅಧ್ಯಕ್ಷರು : ತುಳುಕೂಟ ಐರೋಲಿ

ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ತಮ್ಮ ಸಂಸ್ಥೆಯಾದ ಅಜೆಕಾರು ಕಲಾಭಿಮಾನಿ ಬಳಗದ ಮುಖಾಂತರ ಈ ಮಹಾನಗರದಲ್ಲಿ ಯಕ್ಷಕಲಾ ಸೇವೆಯನ್ನು ಮಾಡುತ್ತಿರುವುದು ಅಭಿಮಾನದ ಸಂಗತಿಯಾದರೆ, ಮತ್ತೂಂದೆಡೆ ಅವರ ತವರೂರು ಅಜೆಕಾರನ್ನು ಇಂದು ಜನಪ್ರಿಯಗೊಳಿಸಿದ ಕೀರ್ತಿ ಅವರಿಗಿದೆ. ಅವರ ಕಲೆ, ಕಲಾವಿದರ ಸೇವೆ ನಿಜವಾಗಿಯೂ ಮೆಚ್ಚುವಂಥದ್ದಾಗಿದೆ.
ಜಗದೀಶ್‌ ಶೆಟ್ಟಿ ನಂದಿಕೂರು , 
ಕಾರ್ಯಾಧ್ಯಕ್ಷರು : ಬಂಟರ ಸಂಘ ನವಿಮುಂಬಯಿ ಸಮಿತಿ

ಚಿತ್ರ-ವರದಿ : ಸುಭಾಷ್‌  ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next