Advertisement

ಅಜೆಕಾರು: ಕುಡಿಯುವ ನೀರು ಪೂರೈಕೆಗೆ ಸ್ವಯಂಚಾಲಿತ ಪಂಪ್‌ ವ್ಯವಸ್ಥೆ

10:40 PM Dec 10, 2019 | mahesh |

ಅಜೆಕಾರು: ಮರ್ಣೆ ಗ್ರಾಮ ಪಂಚಾಯತ್‌ ಕುಡಿಯುವ ನೀರಿನ ಪೂರೈಕೆಯ ಪಂಪ್‌ ನಿರ್ವಹಣೆಗೆ ಮೊಬೈಲ್‌ ಆ್ಯಪ್‌ ಬಳಕೆಗೆ ಮುಂದಾಗಿದ್ದು ಪಂಪ್‌ ಸ್ವಯಂಚಾಲಿತವಾಗಿ ನಿರ್ವಹಣೆ ಯಾಗುವಂತೆ ವ್ಯವಸ್ಥೆ ಮಾಡಿದೆ.

Advertisement

ಮರ್ಣೆ ಪಂಚಾಯತ್‌ ವ್ಯಾಪ್ತಿಯ ದೆಪ್ಪುತ್ತೆ ಭಾಗದಲ್ಲಿ ಸುಮಾರು 250ರಷ್ಟು ಮನೆಗಳಿಗೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು ಈ ಭಾಗಕ್ಕೆ ದಬುìಜೆ ಹೊಳೆ ಸಮೀಪ ಕಿಂಡಿ ಅಣೆಕಟ್ಟು ನಿರ್ಮಿಸಿ ಪಂಪ್‌ ಮೂಲಕ ಶುದ್ಧೀಕರಣ ಘಟಕಕ್ಕೆ ವರ್ಗಾಯಿಸಲಾಗುತ್ತಿತ್ತು. ಆದರೆ ಜನವಸತಿ ಪ್ರದೇಶದಿಂದ ಸುಮಾರು 5 ಕಿ.ಮೀ. ದೂರದಲ್ಲಿ ಪಂಪ್‌ ಇರುವುದರಿಂದಾಗಿ ಪಂಪ್‌ ನಿರ್ವಹಣೆ ಕಷ್ಟಸಾಧ್ಯವಾಗುತ್ತಿತ್ತು. ಈ ನಿಟ್ಟಿನಲ್ಲಿ ಪಂಚಾಯತ್‌ ಆಡಳಿತ ಚಿಂತನೆ ನಡೆಸಿ ಮೊಬೈಲ್‌ ಆ್ಯಪ್‌ ಬಳಸಿ ಪಂಪ್‌ ನಿರ್ವಹಣೆಗೆ ಮುಂದಾಗಿದೆ.

ಸ್ವಯಂಚಾಲಿತ ವ್ಯವಸ್ಥೆಯಿಂದಾಗಿ ಕುಡಿಯುವ ನೀರು ಸೂಕ್ತ ರೀತಿಯಲ್ಲಿ ನಿರ್ವಹಣೆಯಾಗುವ ಜತೆಗೆ ನೀರು ಪೋಲಾಗುವುದನ್ನು ತಡೆಯುವಂತಾಗಿದೆ. ಅಲ್ಲದೆ ವಿದ್ಯುತ್‌ ವೆಚ್ಚವು ಕಡಿಮೆಯಾಗಲಿದ್ದು ಪಂಪ್‌ ನಿರ್ವಾಹಕರಿಗೆ ಉಪಯೋಗ ವಾಗುತ್ತಿದ್ದ ಅನುದಾನವನ್ನು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಉಪಯೋಗಿಸಬಹುದಾಗಿದೆ.

ಮರ್ಣೆ ಪಂಚಾಯತ್‌ನ 6ನೇ ವಾರ್ಡ್‌ನ ಕುಡಿಯುವ ನೀರಿನ ಸಮಸ್ಯೆಗೆ ಕಿರೆಂಚಿಬೈಲು ಸಮೀಪದ ದಬುìಜೆ ಹೊಳೆಯಿಂದ ನೀರು ಪೂರೈಸ ಬೇಕಾದರೆ ಪಂಚಾಯತ್‌ ಆಡಳಿತ ಹರಸಾಹಸಪಡಬೇಕಾಗಿತ್ತು. ಇದೀಗ ಪಂಚಾಯತ್‌ ಆಧುನಿಕ ತಂತ್ರಜ್ಞಾನ ಬಳಸಿ ಸುಮಾರು 14 ಸಾವಿರ ರೂ. ವೆಚ್ಚದಲ್ಲಿ ಸುವ್ಯವಸ್ಥೆ ಕಲ್ಪಿಸಿಕೊಂಡಿದೆ.

ಯಾವುದೇ ಪ್ರದೇಶದಲ್ಲಿದ್ದುಕೊಂಡು ಪಂಪನ್ನು ಆನ್‌ ಆಫ್ ಮಾಡಲು ಅಗತ್ಯ ವಿರುವ ವಿದ್ಯುನ್ಮಾನ ಉಪಕರಣಗಳನ್ನು ಈಗಾಗಲೇ ಅಳವಡಿಸಿಕೊಂಡು ಆ್ಯಪ್‌ ಮೂಲಕ ಕಾರ್ಯನಿರ್ವಹಿಸುತ್ತಿದೆ. ಪಂಚಾಯತ್‌ನ ಹೊಸ ಕಲ್ಪನೆಯು ನಾಗರಿಕರಲ್ಲಿ ಸಂತಸ ತಂದಿದ್ದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಬಂದಿ ಶ್ರಮ, ಅನುದಾನದ ಉಳಿತಾಯ ಅಲ್ಲದೆ ನಿರ್ವಹಣಾ ಕ್ರಮ ಸುಲಭ ಸಾಧ್ಯವಾಗಿದ್ದು ಪಂಚಾಯತ್‌ ಕಾರ್ಯವೈಖರಿ ಇತರ ಪಂಚಾಯತ್‌ಗೆ ಮಾದರಿಯಾಗಿದೆ.

Advertisement

ನಿರ್ವಹಣೆ ಸುಲಭ ಮೊಬೈಲ್‌ ನೆಟ್‌ವರ್ಕ್‌
ಇರುವ ಯಾವುದೇ ಸ್ಥಳದಲ್ಲಿದ್ದು ಕೊಂಡು ಮೋಟಾರು ಪಂಪ್‌ ಆನ್‌ ಆಫ್ ಮಾಡಬಹುದಾದ ಸೌಲಭ್ಯ ಹೊಂದಿರುವುದರಿಂದ ನೀರಿನ ನಿರ್ವಹಣೆ ಸುಲಭಸಾಧ್ಯವಾಗಲಿದೆ. ಮೊಬೈಲ್‌ ಆ್ಯಪ್‌ ಕಂಟ್ರೊಲರ್‌ ಹಾಗೂ ಸಿಮ್‌ ಬಳಸಿ ನಿಗದಿತ 2 ನಂಬರ್‌ಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.
-ದಿನೇಶ್‌ ಕುಮಾರ್‌, ಅಧ್ಯಕ್ಷರು, ಮರ್ಣೆ ಗ್ರಾಮ ಪಂಚಾಯತ್‌

ಆಡಳಿತ ಸ್ಪಂದನೆ ಶ್ಲಾಘನೀಯ
ಪಂಚಾಯತ್‌ನಿಂದ ನೀರು ಪೂರೈಕೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು ಸ್ಥಳೀಯರ ಸಮಸ್ಯೆಗೆ ಪಂಚಾಯತ್‌ ಆಡಳಿತ ಸ್ಪಂದಿಸಿ ಕುಡಿಯುವ ನೀರು ಸಮರ್ಪಕ ವ್ಯವಸ್ಥೆಗೆ ಮುಂದಾಗಿರುವುದು ಶ್ಲಾಘನೀಯ.
-ನವೀನ್‌ ಶೆಟ್ಟಿ, ಶ್ರೀ ಕಟೀಲ್‌ ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next