ಮುಂಬಯಿ: ಶ್ರೀ ಶನೀಶ್ವರ ಮಹಾತೆ¾ ತಾಳಮದ್ದಳೆಯ ಮುಖಾಂತರ ಧಾರ್ಮಿಕತೆಗೆ ಹೆಚ್ಚಿನ ಒಲವನ್ನು ನೀಡುತ್ತಿರುವ ಅಜೆಕಾರು ಕಲಾಭಿಮಾನಿ ಬಳಗದ ಕಾರ್ಯ ಅಭಿನಂದನೀಯ. ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಾನದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ನೇತೃತ್ವದ ಅಜೆಕಾರು ಯಕ್ಷಪರ್ಯಟನೆ-2017 ಸಮಾರಂಭಕ್ಕೆ ಚಾಲನೆ ದೊರೆತಿರುವುದು ಶುಭ ಸೂಚನೆಯಾಗಿದೆ. ಊರಿನ ಪ್ರಸಿದ್ಧ ಕಲಾವಿದರ ಸಮ್ಮಿಲನದೊಂದಿಗೆ ಶ್ರೀ ಶನಿಕಥಾ ಪಾರಾಯಣವನ್ನು ತಾಳಮದ್ದಳೆಯ ರೂಪದಲ್ಲಿ ಪ್ರಸ್ತುತಪಡಿಸುವ ಈ ಯಕ್ಷ ಪರ್ಯಟನೆಗೆ ಶ್ರೀ ದೇವಿ ಮೂಕಾಂಬಿಕೆಯ ಅನುಗ್ರಹ ಸದಾ ಇದೆ. ನಿಮ್ಮೆಲ್ಲರ ಅಶೋತ್ತರಗಳು ಈಡೇರಲಿ. ಇದರ ಮುಖಾಂತರ ನಾಡಿನ ಯಕ್ಷಗಾನ ಕಲೆ, ಕಲಾವಿದರು ಬೆಳೆಯಲಿ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.
ಜೂ. 24ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸಭಾಂಗಣದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸಂಯೋಜನೆಯಲ್ಲಿ ಶ್ರೀ ಶನೀಶ್ವರ ಪೂಜಾ ಸಮಿತಿ ಪಕ್ಷಿಕೆರೆ ಬಳಗದ ಕಲಾವಿದರುಗಳಿಂದ ಆಯೋಜಿಸಲಾಗಿದ್ದ ಶ್ರೀ ಶನೀಶ್ವರ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆ – ಅಜೆಕಾರು ಯಕ್ಷಪರ್ಯಟನೆ -2017 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಓರ್ವ ಕಲಾವಿದರಾಗಿ ಇತರ ಕಲಾವಿದರ ಕಷ್ಟ-ಕಾರ್ಪಣ್ಯಗಳನ್ನು ಅರಿತುಕೊಂಡು ಪ್ರತಿವರ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಊರಿನ ಕಲಾವಿದರನ್ನು ಆಹ್ವಾನಿಸಿ ಅವರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದ್ದಾರೆ. ಇದರಿಂದ ಯಕ್ಷಗಾನ ಕಲೆಯೊಂದಿಗೆ ಕಲಾವಿದರು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದ ಕದ್ರಿ ನವನೀತ ಶೆಟ್ಟಿ ಅವರನ್ನು ಶ್ರೀ ಮೂಕಾಂಬಿಕಾ ಮಂದಿರದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಂದಿರದ ಉಪಾಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು, ಕಾರ್ಯದರ್ಶಿ ಸುರೇಶ್ ಕೋಟ್ಯಾನ್, ಕೋಶಾಧಿಕಾರಿ ಶೇಖರ್ ದೇವಾಡಿಗ, ಉದ್ಯಮಿಗಳಾದ ನಾಗರಾಜ ಶೆಟ್ಟಿ, ಪ್ರಮೋದ್ ಕರ್ಕೇರ, ಅಜೆಕಾರು ಕಲಾಭಿಮಾನಿ ಬಳಗದ ಸಂಸ್ಥಾಪಕಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಶ್ರೀ ಶನೀಶ್ವರ ಮಹಾತೆ¾ ತಾಳಮದ್ದಳೆಯಲ್ಲಿ ಭಾಗವತರಾಗಿ ಶ್ರೀ ಕಟೀಲು ಮೇಳದ ಪ್ರಸಿದ್ಧ ಭಾಗವತರಾದ ಸತೀಶ್ ಶೆಟ್ಟಿ ಬೊಂದೆಲ್, ಮದ್ದಳೆಯಲ್ಲಿ ಪದ್ಮನಾಭ ಶೆಟ್ಟಿಗಾರ್, ಚೆಂಡೆಯಲ್ಲಿ ದಯಾನಂದ ಶೆಟ್ಟಿಗಾರ್ ಅವರು ಪಾಲ್ಗೊಂಡಿದ್ದರು. ಅರ್ಥದಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಅಶೋಕ್ ಶೆಟ್ಟಿ ಸರಪಾಡಿ, ವಿಜಯಕುಮಾರ್ ಶೆಟ್ಟಿ ಮೈಲೊಟ್ಟು, ಪ್ರಸನ್ನ ಶೆಟ್ಟಿ ಅತ್ತೂರು, ಸಸಿಹಿತ್ಲು ಶ್ರೀಪತಿ ಭಟ್ ಅವರು ಭಾಗವಹಿಸಿದ್ದರು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಕಲಾಭಿಮಾನಿಗಳು, ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.