Advertisement

ಕತ್ತಲೆಯಲ್ಲಿ ಅಜೆಕಾರು ಪೇಟೆ; ನಿರ್ವಹಣೆ ಇಲ್ಲದ ಬೀದಿದೀಪ ವ್ಯವಸ್ಥೆ

09:42 PM Nov 24, 2021 | Team Udayavani |

ಅಜೆಕಾರು: ದಾರಿದೀಪಗಳ ಸಮರ್ಪಕ ನಿರ್ವಹಣೆಯಿಲ್ಲದೇ ಅಜೆಕಾರು ಪೇಟೆಗೆ ಕತ್ತಲು ಆವರಿಸಿದೆ. ಕಳೆದ 6 ತಿಂಗಳಿನಿಂದ ಅಜೆಕಾರು ಪೇಟೆಯ ಎಲ್ಲ ಬೀದಿ ದೀಪಗಳು ಕೆಟ್ಟುಹೋಗಿದ್ದು ಸ್ಥಳೀಯರು ಹಾಗೂ ಸುತ್ತಲ ಗ್ರಾಮಗಳ ನಾಗರಿಕರು ಕತ್ತಲಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಅಜೆಕಾರು ಪೇಟೆಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯನ್ನು ದ್ವಿಪಥಗೊಳಿಸಿ ರಸ್ತೆ ವಿಭಾಜಕ ನಿರ್ಮಿಸಿ ಬೀದಿ ದೀಪ ಅಳವಡಿಸಲಾಗಿತ್ತು ಆದರೆ ಕೆಲ ಸಮಯ ಉರಿಯುತ್ತಿದ್ದ ದೀಪ ಅನಂತರ ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣ ಕೆಟ್ಟು ಹೋಗಿದೆ.

ಅಜೆಕಾರು ಪೇಟೆಯ ರಸ್ತೆ ವಿಭಾಜಕದಲ್ಲಿ ಸುಮಾರು 16 ಬೀದಿ ದೀಪಗಳಿದ್ದು ಇದರಲ್ಲಿ 4 ದೀಪಗಳು ರಾತ್ರಿ ಜತೆಗೆ ಹಗಲಿನಲ್ಲಿಯೂ ನಿರಂತರ ಉರಿಯುತ್ತಿದ್ದರೆ ಉಳಿದ ದೀಪಗಳು ಉರಿಯುವುದೇ ಇಲ್ಲ. ನಿರ್ವಹಣೆ ಕೊರತೆಯೆ ಈ ಅವ್ಯವಸ್ಥೆಗೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೆಟ್ಟುಹೋದ ಹೈಮಾಸ್ಟ್‌ ದೀಪ ಅಜೆಕಾರು ಬಸ್‌ ನಿಲ್ದಾಣ ಸಮೀಪ ಅಳವಡಿಸಿರುವ ಹೈಮಾಸ್ಟ್‌ ದೀಪಗಳು ಕೂಡ ಕೆಟ್ಟು ಹೋಗಿದ್ದು ಬಸ್‌ ತಂಗುದಾಣ ಪರಿಸರ ಸಂಜೆ 6 ಗಂಟೆ ಅನಂತರ ಸಂಪೂರ್ಣ ಕತ್ತಲೆಯಿಂದ ಕೂಡಿರುತ್ತದೆ. ಸಂಜೆ ಬಸ್‌ಗೆ ಕಾಯುವ ಕಾರ್ಮಿಕ ಮಹಿಳೆ ಯರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗು ತ್ತಿದೆ. ಹೈಮಾಸ್ಟ್‌, ಬೀದಿದೀಪ ದುರಸ್ತಿಗೊಳಿಸುವಂತೆ ಸ್ಥಳಿಯಾಡಳಿತಕ್ಕೆ ನಿರಂತರ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದಾರಿ ದೀಪಕ್ಕೆ ಮನವಿ
ಅಜೆಕಾರು ಪೇಟೆ ಸಮೀಪದ ಮಾರುಕಟ್ಟೆಯಿಂದ ಕುರ್ಪಾಡಿ ಸಂಪರ್ಕಿಸುವ ರಸ್ತೆಯಲ್ಲಿ ದಾರಿ ದೀಪ ವ್ಯವಸ್ಥೆ ಇಲ್ಲದೆ ಸ್ಥಳೀಯರು ಸಂಕಷ್ಟಪಡುವಂತಾಗಿದೆ. ಈ ಪ್ರದೇಶಕ್ಕೆ ದಾರಿ ದೀಪ ಅಳವಡಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡಿದ್ದರು ಪಂಚಾಯತ್‌ ಆಡಳಿತ ದಾರಿ ದೀಪ ಅಳವಡಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಅಲ್ಲದೆ ಅಜೆಕಾರು ಪೇಟೆಯಿಂದ ನೂಜಿ ಕಡೆಗೆ ಹೋಗುವ ರಸ್ತೆ ವಿಭಾಜಕದಲ್ಲಿಯೂ ಬೀದಿ ಅಳವಡಿಸಬೇಕಾಗಿದೆ. ಈ ಪರಿಸರದಲ್ಲಿ ಆಟೋ ರಿಕ್ಷಾ ನಿಲ್ದಾಣ, ಸಾರ್ವಜನಿಕ ಶೌಚಾಲಯ ಇದ್ದು ಬೀದಿ ದೀಪ ಇಲ್ಲದೆ ಸಮಸ್ಯೆಯಾಗುತ್ತಿದೆ ಎಂದು ನಾಗರಿಕರು ಹೇಳಿದ್ದಾರೆ.

ಇದನ್ನೂ ಓದಿ:ರಾಜ್ಯ ರೈತರ ಸಂಘದಿಂದ ಸುವರ್ಣ ವಿಧಾನಸೌಧ ಮುತ್ತಿಗೆ ಎಚ್ಚರಿಕೆ

Advertisement

ಪೈಪ್‌ಲೈನ್‌ ಅವಾಂತರ
ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಪೈಪ್‌ಲೈನ್‌ ಕಾಮಗಾರಿ ಅಜೆಕಾರು ಪೇಟೆಯಲ್ಲಿ ನಡೆಯುತ್ತಿದ್ದು ರಸ್ತೆ ಅಂಚಿನಲ್ಲಿಯೇ ಗುಂಡಿಗಳನ್ನು ಮಾಡಲಾಗುತ್ತಿದೆ. ಆದರೆ ಈ ಕಾಮಗಾರಿಯ ಗುತ್ತಿಗೆದಾರರು ಯಾವುದೇ ಸೂಚನ ಫ‌ಲಕ, ಬ್ಯಾರಿಕೇಡ್‌ಗಳನ್ನು ಅಳವಡಿಸದೆ ಕಾಮಗಾರಿ ನಡೆಸುತ್ತಿದ್ದು ರಸ್ತೆ ಅಂಚಿನಲ್ಲಿಯೇ ಬೃಹತ್‌ ಹೊಂಡಗಳನ್ನು ಮಾಡಿರುವುದರಿಂದ ರಾತ್ರಿ ವೇಳೆಯಲ್ಲಿ ವಾಹನ ಸವಾರರು ಕಾಮಗಾರಿ ಅರಿವಿಗೆ ಬಾರದೆ ಅಪಘಾತಕ್ಕೀಡಾಗುತ್ತಿದ್ದಾರೆ. ಈಗಾಗಲೇ ಬೈಕ್‌ ಸವಾರರು ರಸ್ತೆ ಅಂಚಿನ ಹೊಂಡಕ್ಕೆ ಉರುಳಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿರುವ ಬೀ ದೀಪ ವ್ಯವಸ್ಥೆಯನ್ನು ಪಂಚಾಯತ್‌ ಆಡಳಿತ ತ್ವರಿತವಾಗಿ ಸರಿಪಡಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪೈಪ್‌ಲೈನ್‌ ಕಾಮಗಾರಿ ವೇಳೆ ಕುಡಿಯುವ ನೀರಿನ ಸಂಪರ್ಕ, ಕೇಬಲ್‌ ಲೈನ್‌ಗಳು ಸಂಪೂರ್ಣ ಹಾನಿಗೊಂಡಿವೆ. ಅಲ್ಲದೆ ಮಣ್ಣನ್ನು ರಸ್ತೆ ಮೇಲೆ ಹಾಕಿರುವುದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ಭಾರೀ ಸಮಸ್ಯೆಯಾಗುತ್ತಿದೆ.

ಪಂಚಾಯತ್‌ ವತಿಯಿಂದ ಶೀಘ್ರ ದುರಸ್ತಿ
ಲೋಕೋಪಯೋಗಿ ಇಲಾಖೆಯಿಂದ ರಸ್ತೆ ವಿಭಾಜಕದಲ್ಲಿ ಬೀದಿ ದೀಪ ಅಳವಡಿಸಲಾಗಿದ್ದು ಅವರ ಗುತ್ತಿಗೆ ದಾರರ ಅವಧಿ ಮುಗಿದಿದ್ದು ಒಂದೆರಡು ದಿನಗಳಲ್ಲಿ ಪಂಚಾಯತ್‌ ವತಿಯಿಂದ ದುರಸ್ತಿ ಪಡಿಸಲಾಗುವುದು.
-ತಿಲಕ್‌ ರಾಜ್, ಪಿಡಿಒ, ಮರ್ಣೆ ಪಂಚಾಯತ್‌

ದುರಸ್ತಿಗೆ ಒಂದು ಲ.ರೂ. ಅನುದಾನ ಇಡಲಾಗಿದೆ
ಬೀದಿ ದೀಪ ದುರಸ್ತಿಗೊಳಿಸುವಂತೆ ಉಡುಪಿಯ ಗುತ್ತಿಗೆದಾರರಿಗೆ ಹಲವು ಬಾರಿ ಸೂಚಿಸಲಾಗಿದೆ. ಈಗ ಅವರ ಗುತ್ತಿಗೆ ಅವಧಿ ಮುಗಿದಿದ್ದು ಕಾರ್ಕಳದ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ತ್ವರಿತವಾಗಿ ಬೀದಿದೀಪ ದುರಸ್ತಿಗೊಳಿಸಲಾಗುವುದು. ಮಾರುಕಟ್ಟೆ ರಸ್ತೆಗೆ ಬೀದಿ ದೀಪ ಅಳವಡಿಸಲು ಒಂದು ಲಕ್ಷ ಅನುದಾನ ಇಡಲಾಗಿದೆ. ಪೈಪ್‌ ಲೈನ್‌ ಕಾಮಗಾರಿ ವೇಳೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ.
-ಜ್ಯೋತಿ ಪೂಜಾರಿ, ಅಧ್ಯಕ್ಷರು, ಮರ್ಣೆ ಗ್ರಾ.ಪಂ.

– ಜಗದೀಶ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next