ಕಾರ್ಕಳ: ಕೆಲ ದಿನಗಳ ಹಿಂದೆ ನಡೆದ ಕಾರ್ಕಳ ತಾಲೂಕಿನ ಅಜೆಕಾರು ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಅರೋಪಿ ದಿಲೀಪ್ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸೋಮವಾರ (ಅ.28) ವಿಚಾರಣೆ ನಡೆಸಿದ ಕಾರ್ಕಳ ತಾಲೂಕು ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ದಿಲೀಪ್ ಹೆಗ್ಡೆಗೆ ನ. 7ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಆರಂಭದಲ್ಲಿ ದಿಲೀಪ್ ಹೆಗ್ಡೆಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಪ್ರತಿಮಾ ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಹಿರಿಯಡಕ ಸಬ್‌ಜೈಲಿನಲ್ಲಿದ್ದಾಳೆ.
ಅಜೆಕಾರಿನ ಬಾಲಕೃಷ್ಣ ಪೂಜಾರಿ ಅವರನ್ನು ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ವ್ಯವಸ್ಥಿತ ಸಂಚು ರೂಪಿಸಿ ಹತ್ಯೆ ಮಾಡಿದ್ದರು. ಪತಿಯ ಆಹಾರಕ್ಕೆ ನಿಯಮಿತವಾಗಿ ವಿಷ ಪದಾರ್ಥವೊಂದನ್ನು ಸೇರಿಸಿ ಪತ್ನಿ ಪ್ರತಿಮಾ ನೀಡುತ್ತಿದ್ದಳು. ಬಳಿಕ ಕಳೆದ ಅ.20ರಂದು ಇಬ್ಬರು ಸೇರಿ ಮಲಗಿದ್ದ ಬಾಲಕೃಷ್ಣ ಅವರ ಮುಖಕ್ಕೆ ಒತ್ತಿ ಹಿಡಿದು ಹತ್ಯೆ ಮಾಡಿದ್ದರು.
ಚೌತಿಯ ದಿನದಂದೇ ವಿಷ ಪ್ರಾಶನ
ಹಬ್ಬ ಎಂದರೆ ಜತೆಗೂಡಿ ಪಾಯಸದ ಊಟ ಮಾಡುವುದು ಕ್ರಮ. ಆದರೆ ಇಲ್ಲಿ ಪತ್ನಿಯೇ ತಾಳಿ ಕಟ್ಟಿದ ಪತಿಗೆ ವಿಷ ನೀಡಿರುವುದು ವಿಪರ್ಯಾಸವೇ ಸರಿ. ಪತಿ ಬಾಲಕೃಷ್ಣ ಅವರನ್ನು ಮುಗಿಸಲು ವ್ಯವಸ್ಥಿತ ಷಡ್ಯಂತ್ರ ಹೆಣೆದಿದ್ದ ಪ್ರತಿಮಾ ಚೌತಿಯ ದಿನ ಹಬ್ಬದ ಊಟದಲ್ಲಿ ಪತಿಗೆ ಮೊದಲು ವಿಷ ಬೆರೆಸಿ ಕೊಟ್ಟಿದ್ದಳು. ಆ ದಿನ ಅವರು ವಾಂತಿ ಮಾಡಿದ್ದು ಅನಂತರ ಸ್ವಲ್ಪ ಸ್ವಲ್ಪವೇ ವಿಷ ನೀಡಿದ್ದರಿಂದ ಅವರ ಆರೋಗ್ಯ ಬಿಗಡಾಯಿಸುತ್ತ ಸಾಗಿತ್ತು. ಅದರ ನಡುವೆ ಜ್ವರ ಕೂಡ ಬಂದಿತ್ತು.