Advertisement

ಅಜಯ್ ದೇವಗನ್ ಟ್ವೀಟ್ ಅಕ್ಷಮ್ಯ ಅಪರಾಧ : ಸಂಸದ ಪ್ರತಾಪ್ ಸಿಂಹ

01:38 PM Apr 29, 2022 | Team Udayavani |

ಮೈಸೂರು: ಹಿಂದಿ ರಾಷ್ಟ್ರೀಯ ಭಾಷೆ ವಿವಾದ ವಿಚಾರಕ್ಕೆ ಸಂಬಂಧಿಸಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ನಟ ಅಜಯ್ ದೇವಗನ್ ಟ್ವೀಟ್ ಅಕ್ಷಮ್ಯ ಅಪರಾಧ ಎಂದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿ ರಾಷ್ಟ್ರದ ಭಾಷೆ ಅಂತ ಹೇಳಿದವರು ಯಾರು? ಹಿಂದಿ ರಾಷ್ಟ್ರ ಭಾಷೆ ಮಾಡುತ್ತೇವೆ ಅಂತ ಹೋಗಿರುವವರು ಯಾರು? ಹಾಗಿದ್ದರೂ ತಕರಾರು ಯಾಕೆ? ಕನ್ನಡವೂ ಸೇರಿದಂತೆ ನೋಟಿನಲ್ಲಿನ 15 ಭಾಷೆಗಳೂ ರಾಷ್ಟ್ರೀಯ ಭಾಷೆಗಳು. ಉಳಿದಿರುವ ಲಿಪಿ ಇರುವ, ಲಿಪಿ ಇಲ್ಲದೆ ಇರುವ ಭಾಷೆಗಳೂ ರಾಷ್ಟ್ರೀಯ ಭಾಷೆಗಳು. ಸಂವಿಧಾನ ಯಾವುದೋ ಒಂದು ಭಾಷೆಗೆ ರಾಷ್ಟ್ರೀಯ ಭಾಷಾ ಸ್ಥಾನಮಾನ ಕೊಟ್ಟಿಲ್ಲ ಎಂದರು.

ರಾಜಕಾರಣ ಮಾಡಲಾಗಿದೆ

ಇಲ್ಲಿ ಅಮಿತ್ ಶಾ ಹೇಳಿಕೆಯನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ. ನಮ್ಮಲ್ಲಿ ಅಧಿಕೃತ ಸಂಪರ್ಕ ಭಾಷಾ ಸ್ಥಾನಮಾನ ಹಿಂದಿ ಮತ್ತು ಇಂಗ್ಲಿಷ್ ಗೆ ಕೊಡಲಾಗಿದೆ‌. ಇವು ಸಂಪರ್ಕ ಭಾಷೆಗಳು. ಅಮಿತ್ ಶಾ ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆ ಮಾಡಬೇಕು ಎಂದಿದ್ದಾರೆ. ದೇಶದ ಯಾವುದೇ ರಾಜ್ಯಕ್ಕೆ ಹೋದರೂ ಹಿಂದಿ ಸಂಪರ್ಕ ಭಾಷೆ ಆಗಿ ಬಳಕೆ ಆಗುತ್ತಿದೆ. ತಮಿಳುನಾಡು, ಕೇರಳದಲ್ಲಿ ಭಾಷೆ ಇಟ್ಟುಕೊಂಡು ರಾಜಕಾರಣ ಮಾಡಲಾಗಿದೆ. ಆದರೆ ಕರ್ನಾಟಕ ಉದಾರತೆಗೆ ಹೆಸರಾಗಿರುವ ರಾಜ್ಯ. ಕೆಲ ರಾಜಕಾರಣಿಗಳು ಸುಮ್ಮನೆ ಅಮಿತ್ ಶಾ ಹೇಳಿಕೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದರು.

ನನಗೆ ಒಂದನೇ ತರಗತಿಯಲ್ಲಿ ಕನ್ನಡ ಪ್ರಥಮ ಭಾಷೆ, 5ನೇ ತರಗತಿಯಲ್ಲಿ ಇಂಗ್ಲೀಷ್ ದ್ವಿತೀಯ ಭಾಷೆ, 8 ನೇ ತರಗತಿಗೆ ಹೋದಾಗ ಹಿಂದಿ ತೃತಿಯ ಭಾಷೆ ಆಗಿತ್ತು. ಈಗ ಶಾಲೆಗಳಲ್ಲಿ‌ 6ನೇ‌ ತರಗತಿಯಿಂದ ಹಿಂದಿ ಕಲಿಸಲಾಗುತ್ತಿದೆ. ಹಿಂದಿ ಎಂದ ಕೂಡಲೇ ಭೂತನೋ ಸೈತಾನೋ ಎನ್ನುವಂತೆ ನೋಡಬೇಡಿ. ತಮಿಳುನಾಡಿಗೆ ಹೋಗಿ ನಾನು ತಮಿಳಿನಲ್ಲಿ ಮಾತನಾಡಲು ಆಗಲ್ಲ.ಹರುಕು ಮುರುಕು ಹಿಂದಿಯಲ್ಲಿ ಮಾತನಾಡುತ್ತೇನೆ. ದಕ್ಷಿಣ ಭಾರತದ ತಮಿಳುನಾಡು, ಕೇರಳ ಬಿಟ್ಟರೆ ಬೇರೆ ರಾಜ್ಯಗಳು ಭಾಷೆ ಸಮಸ್ಯೆ ಮಾಡಿಲ್ಲ.ಕರ್ನಾಟಕದವರು ಹೃದಯ ವೈಶಾಲ್ಯ ಹೊಂದಿರುವವರು. ಉತ್ತರ ಕರ್ನಾಟಕದಲ್ಲಿ ಮರಾಠಿ, ಹಿಂದಿ, ರಾಯಚೂರು ಭಾಗದಲ್ಲಿ ತೆಲುಗು ಬಳಕೆ ಮಾಡುತ್ತಾರೆ.ಇದರಲ್ಲಿ ರಾಜಕಾರಣ ಬೇಡ ಎಂದರು.

Advertisement

ಪ್ರಾಮಾಣಿಕರಿಗೆ ಅನ್ಯಾಯವಾಗಬಾರದು

ಪಿಎಸ್‌ಐ ಪರೀಕ್ಷಾ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿ, ಪರೀಕ್ಷೆಯಲ್ಲಿ ಯಾರು ಅಕ್ರಮವೆಸಗಿದ್ದಾರೆ ಅವರ ಮೇಲೆ ಮಾತ್ರ ಕ್ರಮ ಕೈಗೊಳ್ಳಿ.
ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಬಾರದು ಎಂದು ಸಂಸದ ಪ್ರತಾಪಸಿಂಹ ಆಗ್ರಹಿಸಿದರು.

ಪರೀಕ್ಷಾ ಪತ್ರಿಕೆಯನ್ನು ಲ್ಯಾಬ್‌ಗೆ ಕಳುಹಿಸಿ ಪರೀಕ್ಷೆ ಮಾಡಿಸಿ.ಅದರಲ್ಲಿ ಉತ್ತರ ಯಾವಾಗ ಬರೆದರು ಅನ್ನುವ ಸತ್ಯ ಗೊತ್ತಾಗಲಿದೆ. ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಯಾವ ಪಕ್ಷದವರೇ ಇರಲ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರತಾಪಸಿಂಹ ಒತ್ತಾಯ ಮಾಡಿದರು.

ಕಷ್ಟಪಟ್ಟು ಓದುವವರ ಆತ್ಮ ವಿಶ್ವಾಸ ಕುಗ್ಗಿಸಬೇಡಿ. ಪರೀಕ್ಷೆಗಳು ಪಾರದರ್ಶಕವಾಗಿರಬೇಕು.50 ಲಕ್ಷ ರೂಪಾಯಿ ಕೊಟ್ಟು ಪಿಎಸ್‌ಐ ಆದವರು ಯಾವ ರೀತಿ ಕೆಲಸ ಮಾಡಬಹುದು ? ಮೊದಲ ದಿನದಿಂದಲೇ ಲಂಚದ ಅಂಗಡಿ ತೆರೆಯುತ್ತಾರೆ. ಈಗಾಗಲೇ ಮಿನಿಟ್‌ಗೆ ಮತ್ತೊಂದಕ್ಕೆ ಲಂಚ ಇದೆ
ಇದರಿಂದ ಜನ ಸಾಮಾನ್ಯರಾಗಿ ನ್ಯಾಯ ಹೇಗೆ ಕೊಡುತ್ತಾರೆ. ಪರೀಕ್ಷಾ ಅಕ್ರಮದ ಸಮಗ್ರ ತನಿಖೆಯಾಗಬೇಕು ಎಂದರು.

ಸಿದ್ದರಾಮಯ್ಯ ಕೃಪಾಕಟಾಕ್ಷ

ಹುಬ್ಬಳಿ ಪೊಲೀಸ್ ಠಾಣೆಯಲ್ಲಿ ದಾಂಧಲೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆರೋಪಿಗಳ ಕುಟುಂಬಕ್ಕೆ ಶಾಸಕ ಜಮೀರ್ ಅಹಮದ್ ಖಾನ್ ಪಡಿತರ ವಿತರಣೆ ಮಾಡಿದ್ದಕ್ಕೆ ಕಿಡಿಕಾರಿ, ಜಮೀರ್ ಮನಸ್ಥಿತಿ ಆರೋಪಿಗಳಿಗೆ ಬೆಂಬಲ ನೀಡುವುದು. ಇದು ಸಿದ್ದರಾಮಯ್ಯ ಕೃಪಾಕಟಾಕ್ಷದಿಂದಲೇ ಆಗಿದೆ. ಹಿಂದೆ ಡಿ ಜೆ ಹಳ್ಳಿ ಕೆಜೆ ಹಳ್ಳಿ ಗಲಭೆಯಲ್ಲೂ ಇವರು ಆರೋಪಿಗಳ ಪರ ಇದ್ದರು. ಕಾಂಗ್ರೆಸ್ ಪಕ್ಷದಲ್ಲಿ ಹಿಂದೂ ಪರ ಇರುವ ಒಬ್ಬ ನಾಯಕನೂ ಇಲ್ಲ. ಸಿದ್ದರಾಮಯ್ಯ ವೈಸ್ ಕ್ಯಾಪ್ಟನ್ ಜಮೀರ್.ಡಿ ಕೆ ಶಿವಕುಮಾರ್ ವೈಸ್ ಕ್ಯಾಪ್ಟನ್ ನಲಪಾಡ್. ಇವರಿಬ್ಬರ ಮೂಲಕ ಸಿದ್ದರಾಮಯ್ಯ ಡಿಕೆಶಿ ಮುಸ್ಲಿಂ ಕ್ರಿಶ್ಚಿಯನ್ ಓಲೈಕೆಗೆ ನಿಂತಿದ್ದಾರೆ.ಪೊಲೀಸರ ಮೇಲೆ ನಡೆದ ಎಲ್ಲಾ ದೌರ್ಜನ್ಯದ ಹಿಂದೆ ಸಿದ್ದರಾಮಯ್ಯ ಇದ್ದಾರೆ. ದನಗಳ್ಳನ ಹಿಡಿದ ಪೊಲೀಸ್ ಅಮಾನತು ಮಾಡುತ್ತಾರೆ. ದನಗಳ್ಳನಿಗೆ ಪರಿಹಾರ ಕೊಡಿಸುತ್ತಾರೆ. ಜಮೀರ್ ಅಂತಹವರಿಂದ ಬೇರೆ ಏನು ನಿರೀಕ್ಷೆ ಮಾಡಬಹುದು ಎಂದರು.

ಪ್ರಿಯಾಂಕ ಖರ್ಗೆ ಸ್ಪ್ಲಿಟ್ ಅಂಡ್ ರನ್ ನಾಯಕ

ಪಿಎಸ್‌ಐ ಪರೀಕ್ಷಾ ಅಕ್ರಮ ನೋಟಿಸ್‌ಗೆ ಉತ್ತರ ನೀಡದ ಶಾಸಕ ಪ್ರಿಯಾಂಕ ಖರ್ಗೆ ಸ್ಪ್ಲಿಟ್ ಅಂಡ್ ರನ್ ನಾಯಕ. ಉಗುಳಿ ಓಡಿ ಹೋಗಿದ್ದಾರೆ ಅಷ್ಟೇ. ಆತ ಹೇಳಿಕೆ ಶೂರ.ಆತನನ್ನು ಗಂಭೀರವಾಗಿ ಪರಿಗಣಿಸಬೇಡಿ. ಸಾಕ್ಷಿ ಇದ್ದಿದ್ದರೆ ಕೊಡಲು ಏಕೆ ಭಯ? ಹಿಂದೆ ಬಿಟ್ ಕಾಯಿನ್ ವಿಚಾರದಲ್ಲೂ ಇದೇ ರೀತಿ ಮಾಡಿದ್ದರು. ಸುಖಾ ಸುಮ್ಮನೆ ನಮ್ಮನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಆರೋಪ.ಸಾಕ್ಷಿ ಕೊಡಿ ಅಂದ್ರೆ ಹಿಟ್ ಅಂಡ್ ರನ್ ಮಾಡುತ್ತಾರೆ.ಇವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ಬಿಜೆಪಿಯವರು ಫ್ಲೆಕ್ಸ್ ಹಾಕಿದರೂ ದಂಡ ಹಾಕಿ

ಮೈಸೂರಿನಲ್ಲಿ ಫ್ಲೆಕ್ಸ್ ಹಾವಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಳೆದ ಹಲವು ದಿನಗಳಿಂದ ಫ್ಲೆಕ್ಸ್ ಅಳವಡಿಸಿ ನಗರವನ್ನ ಹಾಳು ಮಾಡುತ್ತಿದ್ದಾರೆ. ರಾಜಕೀಯ ಮುಖಂಡರು ಹುಟ್ಟುಹಬ್ಬ, ರಾಜಕೀಯ ಸಮಾರಂಭಕ್ಕೆ ಫ್ಲೆಕ್ಸ್ ಹಾಕುತ್ತಿದ್ದಾರೆ. ಇದರಿಂದ ಮೈಸೂರು ನಗರ ಗಬ್ಬೆದ್ದು ಹೋಗುತ್ತದೆ. ಬೆಂಗಳೂರು ನಗರದಲ್ಲೇ ಫ್ಲೆಕ್ಸ್ ಗಳನ್ನು ತೆಗದುಹಾಕುತ್ತಿದ್ದಾರೆ. ಆದರೆ ಮೈಸೂರಿನಲ್ಲಿ ಯಾಕೆ ಅದಕ್ಕೆ ಅವಕಾಶ ಕೊಟ್ಟಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳು ಫ್ಲೆಕ್ಸ್ ಹಾಕಿದರೂ ದಂಡ ಹಾಕಿ. ಬಿಜೆಪಿಯವರು ಫ್ಲೆಕ್ಸ್ ಹಾಕಿದರೂ ಕೂಡಾ ದಂಡ ಹಾಕಬೇಕು ಎಂದರು.

ಮೈಸೂರು ನಗರದಲ್ಲಿ ಪುಟ್ಪಾತ್ ಒತ್ತುವರಿ ವಿಚಾರಕ್ಕೆ ಪ್ರತಿಕ್ರಿಯಿಸಿ ಎಲ್ಲವನ್ನೂ ಒಂದುವಾರದಲ್ಲಿ ತೆರವು ಮಾಡಿಸುತ್ತೇನೆ.ಒತ್ತುವರಿ ತೆರವಿಗೆ ಒಂದು ವಾರ ಸಮಯಾವಕಾಶ ಬೇಕು. ಖುದ್ದು ನಾನೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುತ್ತೇನೆ. ಪುಟ್ ಪಾತ್ ವ್ಯಾಪಾರಿಗಳು ನಿಗಧಿತ ಸ್ಥಳಗಳಲ್ಲಿ ವ್ಯಾಪಾರ ಮಾಡಬೇಕು. 2 ಸಾವಿರ ಜನಕ್ಕೋಸ್ಕರ ಇಡೀ ಮೈಸೂರು ನಗರವನ್ನು ಗಬ್ಬೆಬ್ಬಿಸಲು ಆಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next