Advertisement

ಅಜೆಕಾರು ಕಲಾಭಿಮಾನಿ ಬಳಗದ ಸರಣಿ ಯಕ್ಷಗಾನ ಪ್ರದರ್ಶನ 

03:44 PM Oct 12, 2017 | |

ನವಿಮುಂಬಯಿ: ಸರಣಿ ತಾಳಮದ್ದಳೆಯ ಜೊತೆಗೆ, ಊರಿನ ಮಹಿಳಾ ಯಕ್ಷಗಾನ ಕಲಾ ತಂಡಗಳನ್ನು ಮುಂಬಯಿಗೆ ಆಹ್ವಾನಿಸಿ  ನಗರ, ಉಪನಗರಗಳಲ್ಲಿ ಸದಾ ಚೆಂಡೆಯ ನಿನಾದವನ್ನು ಯಕ್ಷ ಕಲಾಪ್ರೀಯರಿಗೆ ಉಣಬಡಿಸುತ್ತಿರುವ ಅಜೆಕಾರು ಕಲಾಭಿಮಾನಿ ಬಳಗದ ಕಲಾಸೇವೆ ಅಭಿನಂದನೀಯವಾಗಿದೆ. ಪ್ರಸ್ತುತ ತವರೂರಿನ ನಾಮಾಂಕಿತ ಕಲಾವಿದರನ್ನು ಆಹ್ವಾನಿಸಿ ಇಲ್ಲಿನ ಯಕ್ಷ ಕಲಾಭಿಮಾನಿಗಳನ್ನು ರಂಜಿಸಲು ಹೊರಟಿರುವ ಬಳಗದ ಕಾರ್ಯಕ್ರಮಳಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಯಕ್ಷಗಾನ ಮತ್ತು ತಾಳಮದ್ದಳೆ ಕ್ಷೇತ್ರಕ್ಕೆ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಸೇವೆ ಅಪಾರವಾಗಿದೆ ಎಂದು ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಜಯ ಬಿ. ಹೆಗ್ಡೆ ಅವರು ನುಡಿದರು.

Advertisement

ಅ.7 ರಂದು ಸಂಜೆ ಐರೋಲಿಯ ಹೆಗ್ಗಡೆ ಭವನದಲ್ಲಿ ನಡೆದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಊರಿನ ಪ್ರಸಿದ್ಧ ಕಲಾವಿದರ  ಸರಣಿ ಯಕ್ಷಗಾನ ಪ್ರದರ್ಶನದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂಡದ ಎಲ್ಲಾ ಕಲಾವಿದರಿಗೆ ಮತ್ತು ಆಯೋಜಕರಿಗೆ ವೀರಮಾರುತಿ ದೇವರ ಆಶೀರ್ವಾದ ಸದಾಯಿರಲಿ ಎಂದು ನುಡಿದರು.
ಉದ್ಘಾಟಕರಾಗಿ ಪಾಲ್ಗೊಂಡ ಕಾಂಜೂರ್‌ಮಾರ್ಗ ಶ್ರೀ ಅಂಬಿಕಾ ಮಂದಿರದ ಪ್ರಧಾನ ಅರ್ಚಕ ಅನಂತ್‌ ಭಟ್‌ ಅವರು ಆಶೀರ್ವಚನ ನೀಡಿ, ಯಕ್ಷಗಾನ ಒಂದು ಪವಿತ್ರ ಕಲೆಯಾಗಿದೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ನಗರ ಮತ್ತು ಉಪನಗರಗಳಲ್ಲಿ ಕಲಾಸೇವೆಯು ನಿರಂತರವಾಗಿ ನಡೆಯುತ್ತಿರಲಿ. ಕಲಾ ಸಂಘಟಕರಿಗೆ, ಕಲಾವಿದರಿಗೆ ಇನ್ನಷ್ಟು ಕಲಾ ಸೇವೆ ಮಾಡುವ ಶಕ್ತಿ ದೇವರು ಅನುಗ್ರಹಿಸಿ ಎಂದು ನುಡಿದು ಶುಭಹಾರೈಸಿದರು.

ಕ್ರಿಸ್ಟಲ್‌ ಆಟೋಮೊಬೈಲ್ಸ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಆಡಳಿತ ನಿರ್ದೇಶಕ ಚಂದ್ರಶೇಖರ್‌ ಎಸ್‌. ಶೆಟ್ಟಿ ಅವರು ಮಾತನಾಡಿ, ಬಾಲ್ಯದಿಂದ ಯಕ್ಷಗಾನವನ್ನು ನೋಡಿ ಆನಂದಪಡುತ್ತಿದ್ದ ನನಗೆ ಯಕ್ಷಗಾನವನ್ನು ಕಲಿಸಿ, ವೇಷಹಾಕಿ, ಗೆಜ್ಜೆಕಟ್ಟಿ ಕುಣಿಯುವಂತೆ ಮಾಡಿದ ಶ್ರೇಯಸ್ಸು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರಿಗೆ ಸಲ್ಲುತ್ತದೆ. ಅವರ ಯಕ್ಷಸೇವೆ ಇದೆ ರೀತಿಯಲ್ಲಿ ಮುಂದುವರಿಯಲಿ ಎಂದು ಹಾರೈಸಿದರು.

ಹೆಗ್ಗಡೆ ಸೇವಾ ಸಂಘದ ಮುಂಬಯಿ ಗೌರವಾಧ್ಯಕ್ಷ ಸಂಜೀವ ಪಿ. ಹೆಗ್ಡೆ ಮಾತನಾಡಿ, ಯಕ್ಷಗಾನ ಶ್ರೀಮಂತ ಕಲೆಯೂ ಹೌದು. ಆದರೆ ಯಕ್ಷಗಾನ ಕಲಾವಿದರು ಶ್ರೀಮಂತರಲ್ಲ. ಕಲೆಯ ಜೊತೆಗೆ ಕಲಾವಿದರನ್ನು ಬೆಳೆಸುವ ಕಾರ್ಯ ನಮ್ಮಿಂದಾಗಬೇಕು. ಆ ಕಾರ್ಯವನ್ನು ಅಜೆಕಾರು ಕಲಾಭಿಮಾನಿ ಬಳಗ ಮಾಡುತ್ತಿರುವುದು ಅಭಿನಂದನೀಯ ಎಂದರು.

ವೇದಿಕೆಯಲ್ಲಿ ತುಳುಕೂಟ ಐರೋಲಿ ಉಪಾಧ್ಯಕ್ಷ ನಾಗೇಶ್‌ ಶೆಟ್ಟಿ, ಉದ್ಯಮಿ ಸತೀಶ್‌ ಶೆಟ್ಟಿ ಕೊಟ್ರಾಡಿ ಗುತ್ತು,ಉದ್ಯಮಿ ಜಗದೀಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅತಿಥಿ-ಗಣ್ಯರುಗಳನ್ನು ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಸ್ವಾಗತಿಸಿ ದರು. ಯಕ್ಷಗಾನ ಕಲಾವಿದ ಅಶೋಕ್‌ ಶೆಟ್ಟಿ ಸರಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಅನಂತರ ತವ ರೂರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕಾಡಮಲ್ಲಿಗೆ ಯಕ್ಷಗಾನ ಪ್ರದರ್ಶನಗೊಂಡಿತು.

Advertisement

ಹೆಗ್ಗಡೆ ಸೇವಾ ಸಂಘದವರು ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹ, ಸಹಕಾರವನ್ನು ಕಂಡಾಗ ಸಂತೋಷವಾಗುತ್ತಿದೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಊರಿನ ಕಲಾವಿದರಿಗೆ ಉತ್ತಮ ವೇದಿಕೆಗಳನ್ನು ಕಲ್ಪಿಸಿಕೊಟ್ಟು ಮರಾಠಿ ಮಣ್ಣಿನಲ್ಲಿ ಕಲೆಯನ್ನು ಜೀವಂತವಾಗಿಸುವಲ್ಲಿ ಸಹಕರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ
   – ಶ್ಯಾಮ್‌ ಎನ್‌. ಶೆಟ್ಟಿ (ಮಾಜಿ ಅಧ್ಯಕ್ಷರು: ಬೋಂಬೆ ಬಂಟ್ಸ್‌ ಅಸೋಸಿಯೇಶನ್‌).

ಕರಾವಳಿ ಕರ್ನಾಟಕದ ಶ್ರೀಮಂತ ಕಲೆ ಎಂದೇ ಪ್ರಸಿದ್ಧಿ ಪಡೆದ ಯಕ್ಷಗಾನವು ನಾಡಿನ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ಬಿಂಬಿಸುತ್ತದೆ. ಇದರಿಂದ ಧಾರ್ಮಿಕ ಚಿಂತನೆಗಳು ಬೆಳೆಯಲು ಸಾಧ್ಯವಾಗುತ್ತದೆ. ಇಂತಹ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ 
  –  ಸುರೇಂದ್ರ ಶೆಟ್ಟಿ (ಗೌರವ ಕೋಶಾಧಿಕಾರಿ:  ಬೋಂಬೆ ಬಂಟ್ಸ್‌ ಅಸೋಸಿಯೇಶನ್‌).

ಕಲೆಯು ಇನ್ನಷ್ಟು ಬೆಳೆಯಬೇಕು. ಯುವಪೀಳಿಗೆಗೆ ಇದರ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಇದು ಯಕ್ಷಗಾನದ  ಬೆಳವಣಿಗೆಗೆ ಪ್ರೇರಕವಾಗಿದೆ 
 – ನಾಡಾಜೆಗುತ್ತು ಜಗದೀಶ್‌ ಶೆಟ್ಟಿ (ಮಾಜಿ ಅಧ್ಯಕ್ಷರು: ತುಳುಕೂಟ ಐರೋಲಿ).

Advertisement

Udayavani is now on Telegram. Click here to join our channel and stay updated with the latest news.

Next