ಮಾಜಿ ಭುವನ ಸುಂದರಿ ಬಾಲಿವುಡ್‌ನಷ್ಟೇ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಜನಪ್ರಿಯ ನಟಿ. ಐಶ್ವರ್ಯಾ ರೈ ಇಂದಿಗೂ ದಕ್ಷಿಣ ಭಾರತದಲ್ಲಿ ತಮ್ಮದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಎಂದಿರನ್ ಚಿತ್ರದ ಬಳಿಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಎಲ್ಲೂ ಅಷ್ಟಾಗಿ ಕಾಣಿಸಿಕೊಂಡಿರದ ಐಶ್ವರ್ಯಾ ರೈ, ಈಗ ಮತ್ತೆ ದಕ್ಷಿಣ ಭಾರತದ ಚಿತ್ರರಂಗದತ್ತ ಮರಳಿ ಬರುವ ಸೂಚನೆ ನೀಡಿದ್ದಾರೆ.
ಹೌದು, ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಈ ವರ್ಷದ ಬಹು ನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಐಶ್ವರ್ಯಾ ರೈ ಅಭಿನಯಿಸುತ್ತಿದ್ದಾರಂತೆ. ಅಂದ ಹಾಗೆ, ಈ ಚಿತ್ರದಲ್ಲಿ ಐಶ್ವರ್ಯಾ ರೈ ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ನಂದಿನಿ ಹಾಗೂ ಆಕೆಯ ತಾಯಿ ರಾಣಿ ಮಂದಾಕಿನಿ ಎಂಬ ಎರಡು ಪಾತ್ರದಲ್ಲಿ ಐಶ್ವರ್ಯಾ ರೈ ಬಣ್ಣ ಹಚ್ಚುತ್ತಿದ್ದಾರೆ. ಉಳಿದಂತೆ, ಭಾರತೀಯ ಸಿನಿಮಾರಂಗದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಪೊನ್ನಿಯನ್ ಸೆಲ್ವನ್‌ಶಿರ್ಷಿಕೆ ಪೋಸ್ಟರ್ ಬಿಡುಗಡೆಯಾಗಿದ್ದು, ಇದೇ ತಿಂಗಳಿನಿಂದಲೇ ಚಿತ್ರೀಕರಣ ಆರಂಭವಾಗುತ್ತಿದೆ. ಇದೀಗ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ನಟಿಸುವುದು ಪಕ್ಕಾ ಆಗಿದೆ. ಚಿತ್ರತಂಡದ ಮೂಲಗಳ ಪ್ರಕಾರ ಐಶ್ವರ್ಯಾ ರೈ ಕೂಡ ಇದೇ ತಿಂಗಳ ಅಂತ್ಯಕ್ಕೆ ಚಿತ್ರತಂಡ ಸೇರಲಿದ್ದಾರೆ. ಇನ್ನು ದಕ್ಷಿಣ ಭಾರತದ ಚಿತ್ರರಂಗಕ್ಕೆ ಮತ್ತೆ ಮರಳಿದ ಐಶ್ವರ್ಯಾ ರೈ ಈ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದು, “ಮಣಿರತ್ನಂ ಅವರ ಜೊತೆಯಲ್ಲಿ ಕೆಲಸ ಮಾಡುವುದು ನನಗೆ ಖುಷಿ. ಅವರು ನನ್ನ ಗುರುಗಳು. ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಟಿಸುವುದಕ್ಕೆ ಕಾಯುತ್ತಿದ್ದೇನೆ. ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ’ ಎಂದಿದ್ದಾರೆ.
ಚಿತ್ರತಂಡದ ಮೂಲಗಳ ಪ್ರಕಾರ, ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಬರೋಬ್ಬರಿ ಎಂಟು ಜನ ಸೂಪರ್ ಸ್ಟಾರ್ ಚಿತ್ರದ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರಂತೆ. ತಮಿಳು ನಟ ವಿಕ್ರಮ…, ಕಾರ್ತಿ, ತ್ರಿಷಾ, ಕೀರ್ತಿ ಸುರೇಶ್, ಜಯಂ ರವಿ, ಐಶ್ವರ್ಯಾ ರಾಜೇಶ್ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ.
ಪೊನ್ನಿಯನ್ ಸೆಲ್ವನ್ ಚಿತ್ರದ ಹಾಡುಗಳಿಗೆ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯಿದ್ದು, ರವಿ ವರ್ಮನ್ ಛಾಯಾಗ್ರಹಣ ಚಿತ್ರದಲ್ಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವರ್ಷಾಂತ್ಯಕ್ಕೆ ಐಶ್ವರ್ಯಾ ರೈ ಅವರನ್ನು ಈ ಚಿತ್ರದಲ್ಲಿ ತೆರೆಮೇಲೆ ನೋಡಬಹುದು.