Advertisement

ಐಶ್ವರ್ಯ ಎಂಬ ಅಚ್ಚರಿ!

10:59 AM Feb 22, 2017 | |

ಮುದ್ರಾಡಿ ಬಕ್ರೆಯ ಐಶ್ವರ್ಯ, ತನ್ನ ಪುಟ್ಟಪುಟ್ಟ ಕೈಗಳಲ್ಲಿ ಸ್ಯಾಕ್ಸೋಫೋನ್  ಹಿಡಿದಿದ್ದರೆ ಈಕೆ ಆಟವಾಡಲು ಹಿಡಿದಿರಬಹುದು ಎಂದೇ ಎಲ್ಲರೂ ಲೆಕ್ಕ ಹಾಕಿರುತ್ತಾರೆ. ಆದರೆ, ಆಕೆ ಸ್ಯಾಕ್ಸೋಫೋನ್ ನುಡಿಸಿದಾಗ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ವ್ಯಕ್ತಪಡಿಸುತ್ತಾರೆ. 

Advertisement

5ನೇ ತರಗತಿಯಲ್ಲಿದ್ದಾಗಲೇ ಸ್ಯಾಕ್ಸೋಫೋನ್  ವಾದನಕ್ಕೆ ಮನಸೋತ ಐಶ್ವರ್ಯ! ಮದುವೆ, ರಿಸೆಪ್ಶನ್‌, ದೇವಸ್ಥಾನಗಳ ಉತ್ಸವ, ಜಾತ್ರೆ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ವಿವಿಧ ಕಾರ್ಯಕ್ರಮಗಳಲ್ಲಿ ಸ್ಯಾಕ್ಸೋಫೋನ್  ನುಡಿಸಿ ಎಲ್ಲರನ್ನೂ ಮೋಡಿ ಮಾಡಿದ್ದಾಳೆ. 

ಆನಂದ ದೇವಾಡಿಗ, ಲೀಲಾವತಿ ದಂಪತಿಯ ಮಗಳಾದ ಐಶ್ವರ್ಯ, ಮುದ್ರಾಡಿ ಎಂಎನ್‌ಡಿಎಸ್‌ಎಂನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನೂ, ಹೆಬ್ರಿ ಕಾಲೇಜ್‌ನಲ್ಲಿ ಬಿಕಾಂ ಪದವಿಯನ್ನೂ ಪಡೆದಿದ್ದಾಳೆ. ಪ್ರಸ್ತುತ ದೂರ ಶಿಕ್ಷಣದಲ್ಲಿ ಪ್ರಥಮ ವರ್ಷದ ಎಂ.ಕಾಂ ಓದುತ್ತಿದ್ದಾಳೆ.

10 ವರ್ಷಗಳ ಕಾಲ ಉಡುಪಿಯ ಓಬು ಸೇರಿಗಾರ್‌ರಿಂದ ಸ್ಯಾಕ್ಸೋಫೋನ್ ವಾದನಕ್ಕೆ ತರಬೇತಿ ಪಡೆದು, ಇದೀಗ ಹಿರಿಯಡ್ಕ ಸಮೀಪದ ಪೆರ್ಣಂಕಿಲ ಮಾಧವಿ ಭಟ್‌ರಿಂದ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾಳೆ. 

ಆರಂಭದಲ್ಲಿ ಕೊಳಲು ನುಡಿಸಲು ಪ್ರಾರಂಭಿಸಿದರೂ ಆಕೆಯನ್ನು ಸೆಳೆದದ್ದು ಸ್ಯಾಕ್ಸೋಫೋನ್ . ಸ್ಯಾಕ್ಸೋಫೋನ್  ನುಡಿಸಲು ಐಶ್ವರ್ಯಳಿಗೆ ತಂದೆ ಆನಂದ ದೇವಾಡಿಗರೇ ಪ್ರೇರಣೆ. ಮನೆಯಲ್ಲಿ ತಂದೆ ವಾದ್ಯ ನುಡಿಸುತ್ತಿದ್ದುದನ್ನು ಕಂಡ ಆಕೆ ತಾನೂ ಸ್ಯಾಕ್ಸೋಫೋನ್ ಕಲಿಯಲಾರಂಭಿಸಿದಳು. 

Advertisement

ಕೀರ್ತನೆ, ಭಕ್ತಿಗೀತೆ, ಚಲನಚಿತ್ರ ಗೀತೆ ಸೇರಿದಂತೆ ಸುಮಾರು 200 ಹಾಡುಗಳನ್ನು ನುಡಿಸುವ ಐಶ್ವರ್ಯ, 5ರಿಂದ 10ನೇ ತರಗತಿವರೆಗೆ 6 ಬಾರಿ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ್ದಾಳೆ. 2010ರಲ್ಲಿ ಉಡುಪಿಯಲ್ಲಿ ನಡೆದ ಅಖೀಲ ಭಾರತ ಕನ್ನಡ ಮಕ್ಕಳ ಮನೆ ಕಾರ್ಯಕ್ರಮದಲ್ಲಿ ಈಕೆಗೆ ಜಿಲ್ಲಾ ಮಟ್ಟದ “ಹೊಸ ಚಿಗುರು- ಕಲಾಕಿರಣ ಬಾಲ ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಗಿದೆ. 2009ರಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ಲಕ್ಷದೀಪೋತ್ಸವ ಸಂದರ್ಭ ಹಾಗೂ ತಾನು ಕಲಿತ ಮುದ್ರಾಡಿ ಎಂಎನ್‌ಡಿಎಸ್‌ಎಂ ಶಾಲೆಯ 110ನೇ ವರ್ಷದ ಸನ್ಮಾನ ಸೇರಿದಂತೆ ವಿವಿಧೆಡೆ 20ಕ್ಕೂ ಅಧಿಕ ಸನ್ಮಾನಕ್ಕೆ ಪಾತ್ರಳಾಗಿದ್ದಾಳೆ.

ಸ್ಯಾಕ್ಸೋಫೋನ್ ವಾದನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಆಸೆಯಿದ್ದರೂ ಸದ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ಮುದ್ರಾಡಿಯ ಬಕ್ರೆಯಲ್ಲಿ ಹೆಚ್ಚಿನ ಸೌಲಭ್ಯವಿಲ್ಲದೇ ಇರುವುದರಿಂದ ದೂರದ ಉಡುಪಿ ಅಥವಾ ಮಂಗಳೂರಿಗೆ ತೆರಳಬೇಕಿದೆ. ಶಿಕ್ಷಣ ಹಾಗೂ ಕುಟುಂಬದ ಆರ್ಥಿಕ ಪರಿಸ್ಥಿತಿ ನಡುವೆ ಹೊಂದಣಿಕೆ ಮಾಡಿಕೊಳ್ಳುವುದು ಕಷ್ಟ ಎನ್ನುವ ಐಶ್ವರ್ಯಳ ಆಸಕ್ತಿ, ಸಾಧನೆಗೆ ತಂದೆ ತಾಯಿಯ ಕಣ್ಣುಗಳಲ್ಲಿ ಅಪಾರ ಮೆಚ್ಚುಗೆ ಇದೆ.

– ವಿದ್ಯಾ ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next