ರಾತ್ ಔರ್ ದಿನ್ ಎಂದ ಕೂಡಲೇ ಪ್ರಸಿದ್ಧ ಬಾಲಿವುಡ್ ಚಲನಚಿತ್ರವೊಂದು ಹೆಚ್ಚಿನವರ ನೆನಪಿಗೆ ಬರಬಹುದು. 1967ರಲ್ಲಿ ಬಿಡುಗಡೆಯಾದ ಸಿನೆಮಾ ವರುಣಾ ಎಂಬ ಹೆಸರಿನ ಮಾನಸಿಕ, ಅಸ್ವಾಸ್ಥ್ಯ ಮಹಿಳೆಯ ಸುತ್ತ ನಡೆಯುವ ಕತೆ. ಆ ಪಾತ್ರವನ್ನು ಆಗ ನಿರ್ವಹಿಸಿದ್ದು ನರ್ಗೀಸ್! ಆಕೆಯ ಕೊನೆಯ ಚಿತ್ರ ಇದಾಗಿತ್ತಂತೆ ! ನರ್ಗೀಸ್‌ಗೆ ಈ ಪಾತ್ರ ನಿರ್ವಹಣೆಗಾಗಿ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು. ಕೊಲ್ಕತಾದ ಬೀದಿಯಲ್ಲಿ ರಾತ್ರಿ ಒಂಟಿಯಾಗಿ ನಡೆದುಹೋಗುತ್ತಿರುವ ನರ್ಗೀಸ್‌ರ ಪಾತ್ರವನ್ನು ಚಿತ್ರಪ್ರಿಯರು ಮೆಚ್ಚಿದ್ದರು. ದಿಲೀಪ್ ಕುಮಾರ್ ಈ ಚಿತ್ರದಲ್ಲಿ ನಾಯಕ. ಲತಾ ಮಂಗೇಶ್ಕರ್, ಕಿಶೋರ್ ಕುಮಾರ್ ಇದರ ಹಾಡುಗಳಿಗೆ ದನಿ ನೀಡಿದ್ದರು.
ಈಗ ಈ ಸಂಗತಿ ಏಕೆ ಎಂದು ನೀವು ಪ್ರಶ್ನಿಸಬಹುದು. ಇದೀಗ ಬಂದ ಸುದ್ದಿಯ ಪ್ರಕಾರ ಆ ಚಿತ್ರವನ್ನು ರೀಮೇಕ್ ಮಾಡಲಾಗಿದೆ. ಎಲ್ಲರಿಗೂ ಹಳೆಯದರ ಬಗ್ಗೆಯೇ ಮೋಹ! ಕತೆಯೂ ಹೊಸತು ಲಭ್ಯವಿಲ್ಲ, ಹಳೆಯದೇ ಬೇಕು. ಹೀರೋಯಿನ್ ಕೂಡ ಹಳಬಳೇ ಆದರೆ ! ಅಂದು ನರ್ಗೀಸ್ ವಹಿಸಿದ ಪಾತ್ರವನ್ನು ಈಗ ಐಶ್ವರ್ಯಾ ರೈ ಬಚ್ಚನ್ ನಿರ್ವಹಿಸುತ್ತಿದ್ದಾಳೆ.
ಮೊದಲು ಈ ಪಾತ್ರದ ನಾಯಕಿಯ ಪಾತ್ರಕ್ಕೆ ಇಬ್ಬರು ನಟಿಯರ ಹೆಸರು ಪ್ರಸ್ತಾಪವಾಗಿತ್ತಂತೆ! ಒಂದು ಮಾಧುರಿ ದೀಕ್ಷಿತ್‌ಳದ್ದು ಇದ್ದು, ಇನ್ನೊಂದು ಐಶ್ವರ್ಯಾ ರೈ ಬಚ್ಚನ್‌ಳದ್ದು. ಇಬ್ಬರೂ ಮುದ್ದುಮಕ್ಕಳ ತಾಯಿಯಂದಿರು. ಕೊನೆಗೂ ಐಶ್ವರ್ಯಾಳೇ ಆಯ್ಕೆಯಾಗಿದ್ದಾಳೆಂಬುದು ಸದ್ಯದ ಬಿಸಿ ಸುದ್ದಿಯಾಗಿದೆ.
ಸದ್ಯ ಐಶ್ವರ್ಯಾ ಫನ್ನಾಖಾನ್ ಎಂಬ ಸಿನೆಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾಳೆ. ಮುಂದಿನ ಜೂನ್‌ನಲ್ಲಿ ಈ ಚಿತ್ರ ಬಿಡುಗಡೆಯಾದ ಮೇಲಷ್ಟೇ ಐಶ್ವರ್ಯಾ ಫ್ರೀಯಾಗುತ್ತಾಳೆ. ಆದರೆ, ಈ ಚಿತ್ರದ ನಿರ್ಮಾಪಕರೇ ರಾತ್ ಔರ್ ದಿನ್ ಸಿನೆಮಾವನ್ನು ನಿರ್ಮಿಸುತ್ತಿದ್ದಾರೆ. ಮದುವೆಯಾಗಿ, ಹೆಣ್ಣು ಮಗುವಿನ ತಾಯಿಯಾದರೂ ಐಶ್ವರ್ಯಾಗಿರುವ ಬೇಡಿಕೆ ಕಡಿಮೆಯಾಗಿಲ್ಲ. ಶೂಟಿಂಗ್ ತಾಣಕ್ಕೂ ಮಗಳು ಆರಾಧ್ಯ ಬಚ್ಚನ್‌ಳನ್ನು ಕರೆದೊಯ್ದು ಐಶ್ವರ್ಯಾ ಸುದ್ದಿ ಮಾಡಿದ್ದಳು. ಇತ್ತೀಚೆಗಿನ ವರ್ಷಗಳಲ್ಲಿ ಐಶ್ವರ್ಯಾ ರೈ ಪಾತ್ರ ವಹಿಸಿದ ಸಿನೆಮಾಗಳು ವಿಶೇಷ ಗೆಲುವು ಸಾಧಿಸದಿದ್ದರೂ ಆಕೆಯ ಜನಪ್ರಿಯತೆ ಹಾಗೆಯೇ ಇದೆ.
ಅಂದ ಹಾಗೆ ಐಶ್ವರ್ಯಾ ರೈ ವಿಶ್ವಸುಂದರಿಯ ಕಿರೀಟ ಧಾರಣೆಯ ರಜತಮಹೋತ್ಸವ ಆಚರಿಸಲು ಒಂದು ವರ್ಷವಷ್ಟೇ ಉಳಿದಿದೆ!