ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಸೋಗಿನಲ್ಲಿ ವಾರಾಹಿ ಚಿನ್ನದ ಮಳಿಗೆಯಿಂದ 14 ಕೆಜಿ ಚಿನ್ನ ಲಪಟಾಯಿಸಿ ವಂಚಿಸಿದ್ದ ಐಶ್ವರ್ಯಾ ದಂಪತಿ ರಿಯಲ್ ಎಸ್ಟೇಟ್ ಉದ್ಯೋಗಿ ಸೋನು ಲಮಾಣಿ ಎಂಬುವವರಿಗೆ 5 ಕೋಟಿ ರೂ. ವಂಚಿಸಿರುವ ಆರೋಪ ಕೇಳಿ ಬಂದಿದೆ.
ಇದೀಗ ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಬಣ್ಣಬಣ್ಣದ ಮಾತನಾಡಿ ಬಂಗಾರ ಲಪಟಾಯಿಸಿದ್ದ ಐಶ್ವರ್ಯ ಗೌಡ ಅವರಿಂದ ಸೋನು ಲಮಾಣಿ ತಮಗಾದ ವಂಚನೆಯನ್ನು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಐಶ್ವರ್ಯ ಗೌಡ ತನ್ನನ್ನು ತಾನು ವ್ಯಾಪಾರಸ್ಥರು, ಡಿ.ಕೆ.ಸುರೇಶ್ ಸಹೋದರಿ ಎಂದು ಪರಿಚಯಿಸಿಕೊಂಡಿದ್ದರು. ನನ್ನ 15-16 ನಿವೇಶನಗಳನ್ನು ಮಾರಾಟ ಮಾಡಿಸಿಕೊಟ್ಟಿದ್ದರು. ತಗಾದೆ ಇರುವ ಆಸ್ತಿಗಳನ್ನೂ ಮಾರಾಟ ಮಾಡುವುದಾಗಿ ನಂಬಿಸಿದ್ದರು. ಹೀಗಾಗಿ ಅವರ ಮತ್ತು ನಮ್ಮ ನಡುವೆ ವ್ಯವಹಾರ ನಡೆದಿತ್ತು. ರಾಜ್ಯ ಸರ್ಕಾರದ ಬಹುತೇಕ ಸಚಿವರು ಹಾಗೂ ಪ್ರಮುಖರ ಜೊತೆಗೆ ತೆಗೆಸಿಕೊಂಡಿರುವ ಫೋಟೋ, ವಿಡಿಯೋಗಳನ್ನು ಐಶ್ವರ್ಯ ತೋರಿಸಿದ್ದರು. ಕಳೆದ 15 ದಿನಗಳ ಹಿಂದೆಯೂ ನನ್ನೊಂದಿಗೆ ದೂರವಾಣಿಯಲ್ಲಿ ಐಶ್ವರ್ಯ ಮಾತನಾಡಿದ್ದರು. ಚಿನ್ನದಂಗಡಿ ಮಾಲಕಿ ವನಿತಾ ಅವರಿಗೆ ವಂಚನೆ ಮಾಡಿದ ಪ್ರಕರಣ ಹೊರಬಂದ ಬಳಿಕ ನೀವು ದೂರು ನೀಡಬೇಡಿ ಎಂದು ನನ್ನ ಮೇಲೆ ಒತ್ತಡ ಹೇರಿದ್ದರು. ಗಣಪತಿ ಹಬ್ಬಕ್ಕೆ ಅವರ ಊರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದರು. ವಿವಾದಿತ ಆಸ್ತಿಗಳನ್ನು ನಿಮಗೆ ನೋಂದಣಿ ಮಾಡಿಸಿಕೊಡುವುದಾಗಿ ಹೇಳಿ ನನ್ನಿಂದ ಹಣ ಪಡೆದುಕೊಂಡಿದ್ದರು. ನಿಮಿಂದ ಪಡೆದ ಎಲ್ಲಾ ಹಣವನ್ನೂ 20 ದಿನದೊಳಗಾಗಿ ವಾಪಸ್ ನೀಡುವುದಾಗಿ ಭರವಸೆ ನೀಡಿ ವಂಚಿಸಿದ್ದಾಳೆ.
ಇದನ್ನೂ ಓದಿ: Fraud Case: ಸಾಗರದ ಚಿನ್ನದಂಗಡಿಗೂ 20 ಲಕ್ಷ ವಂಚಿಸಿದ್ದ ವರ್ತೂರು ಆಪ್ತೆ ಶ್ವೇತಾ!
ನನ್ನ ಬಳಿ ಎಲ್ಲಾ ದಾಖಲೆಗಳೂ ಇದ್ದು, ಶೀಘ್ರವೇ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಸೋನು ಲಮಾಣಿ ಹೇಳಿದ್ದಾರೆ. ಇದೇ ಮಾದರಿಯಲ್ಲಿ ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ನಟ ಧರ್ಮೇಂದ್ರ ನಾಪತ್ತೆ: ವರಾಹಿ ಜ್ಯುವೆಲ್ಲರಿ ಮಾಲಿಕರಿಗೆ ವಂಚನೆ ಪ್ರಕರಣದಲ್ಲಿ ನಟ ಧರ್ಮೇಂದ್ರನನ್ನು ಪೊಲೀಸರು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ. ಪೊಲೀಸ್ ನೋಟಿಸ್ ಜಾರಿ ಆಗುತ್ತಿದ್ದಂತೆ ನಟನ ಫೋನ್ ಸ್ವಿಚ್x ಆಫ್ ಆಗಿದೆ. ಬೆಂಗಳೂರಿನ ಮನೆಯಲ್ಲಿ ನಟ ಧರ್ಮೇಂದ್ರ ಪತ್ತೆಯಾಗಿಲ್ಲ. ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ ಬೆನ್ನಲ್ಲೇ ನಾಪತ್ತೆಯಾಗಿದ್ದಾರೆ. ನಟ ಧರ್ಮೇಂದ್ರ ಪತ್ತೆಗೆ ಚಂದ್ರಲೇಔಟ್ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಏನಿದು ಪ್ರಕರಣ?: ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರಿ ಮಾಲಿಕರಿಗೆ 14 ಕೆಜಿ ಚಿನ್ನ ವಂಚಿಸಿದ ಪ್ರಕರಣದಲ್ಲಿ ಎ1 ಐಶ್ವರ್ಯ ಗೌಡ, ಎ2 ಹರೀಶ್ ಗೌಡರನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದರು. ಡಿ.ಕೆ.ಸುರೇಶ್ ತಂಗಿ ಅಂತ ಹೇಳಿಕೊಂಡು ಬಣ್ಣ ಬಣ್ಣದ ಮಾತನಾಡಿ, ನಾಮ ಹಾಕಿದ್ದ ಐಶ್ವರ್ಯ ಮತ್ತು ಆಕೆಯ ಪತಿ ವಿಚಾರಣೆಗಾಗಿ ಚಂದ್ರಲೇಔಟ್ ಠಾಣೆಗೆ ಹಾಜರಾಗಿದ್ದರು. ಸುಮಾರು 3 ಗಂಟೆಗಳ ಪೊಲೀಸರ ವಿಚಾರಣೆ ಬಳಿಕ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.